ಕುಶಾಲನಗರ, ಆ. 2: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ ರೂ. 1.05 ಕೋಟಿ ನಿವ್ವಳ ಲಾಭಿ ಗಳಿಸಿದ್ದು ಸದಸ್ಯರಿಗೆ ಶೇ. 18 ಡಿವಿಡೆಂಡ್ ನೀಡಲು ತೀರ್ಮಾನಿ ಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದರು. ಸಹಕಾರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1921 ರಲ್ಲಿ ಪ್ರಾರಂಭಗೊಂಡ ಸಹಕಾರ ಸಂಘ ಶತಮಾನೋತ್ಸವದ ಹೊಸ್ತಿಲಲ್ಲಿದ್ದು ಪ್ರಥಮ ಬಾರಿಗೆ ರೂ. 1.05 ಕೋಟಿ ಲಾಭ ಗಳಿಸಿ ಇತಿಹಾಸ ನಿರ್ಮಿಸಿದೆ ಎಂದರು. 3091 ಸದಸ್ಯರ ಮೂಲಕ ರೂ. 196.66 ಲಕ್ಷಗಳ ಪಾಲು ಹಣ ಸಂಗ್ರಹಿಸಿ ಕಳೆದ ಸಾಲಿಗಿಂತ ರೂ. 52.19 ಲಕ್ಷಗಳನ್ನು ಹೆಚ್ಚಿಗೆ ಸಂಗ್ರಹಿಸಿದೆ. ವಿವಿಧ ಠೇವಣಿ ರೂಪದಲ್ಲಿ ರೂ. 2793.75 ಲಕ್ಷಗಳನ್ನು ಸ್ವೀಕರಿಸಿದ್ದು ಕಳೆದ ಸಾಲಿಗಿಂತ ರೂ. 234.38 ಲಕ್ಷಗಳ ಠೇವಣಿ ಸಂಗ್ರಹಿಸಿದೆ. ಕಳೆದ ಸಾಲಿನಲ್ಲಿ ರೂ. 74.55 ಲಕ್ಷ ಕೆಸಿಸಿ ಸಾಲ ವಿತರಿಸಲಾಗಿದ್ದು, ಈ ಸಾಲಿನಲ್ಲಿ ಇದುವರೆಗೆ ರೂ. 54.07 ಲಕ್ಷ ಸಾಲ ವಿತರಿಸಿದ್ದು ಇನ್ನೂ ಹೆಚ್ಚಿನ ಸದಸ್ಯರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಂಘದಲ್ಲಿ 97 ಸ್ವಸಹಾಯ ಗುಂಪುಗಳಿದ್ದು ಸಂಘದ ಸ್ವಂತ ಬಂಡವಾಳದಿಂದ ರೂ. 58.00 ಲಕ್ಷಗಳ ಸಾಲ ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವಲ್ಲಿ ವಿದ್ಯಾರ್ಥಿ ವೇತನ ಯೋಜನೆ, ಸಾಲ ಪಡೆದ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಹೊರೆಯಾಗದಂತೆ ಸಾಲದ ಹೊಂದಾಣಿಕೆಗೆ ಪ್ರತ್ಯೇಕ ನಿಧಿ ಸ್ಥಾಪನೆಗೆ ಚಿಂತನೆ ಹರಿಸಲಾಗಿದೆ. ಸಂಘ ಕಳೆದ 24 ವರ್ಷಗಳಿಂದ ಸತತ ಲಾಭದಲ್ಲಿ ಮುನ್ನಡೆಯುತ್ತಿದ್ದು ಕಳೆದ 7 ವರ್ಷಗಳಿಂದ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡುತ್ತಾ ಬಂದಿದೆ. ಸದಸ್ಯರ ಅನುಕೂಲಕ್ಕಾಗಿ ಮಾರುಕಟ್ಟೆ ಬಳಿಯ ತ್ಯಾಗರಾಜ ರಸ್ತೆಯಲ್ಲಿ ರೂ. 3.75 ಕೋಟಿ ವೆಚ್ಚದಲ್ಲಿ 5 ಅಂತಸ್ತುಗಳ ಸುಸಜ್ಜಿತ ಹವಾನಿಯಂತ್ರಿತ ಕಚೇರಿ ನಿರ್ಮಾಣಗೊಳಿಸಲಾಗುತ್ತಿದೆ. ಈ ಹಿನ್ನೆಲೆ ಲಾಭದ ಶೇ. 40 ರಷ್ಟು ಕಟ್ಟಡಕ್ಕೆ ವಿನಿಯೋಗಿಸಲಾಗುತ್ತಿದೆ ಎಂದರು.
ಸರಕಾರದ ಸಾಲ ಮನ್ನಾ ಯೋಜನೆಯಡಿ ಸಂಘದ 28 ಸದಸ್ಯರ ಸಾಲ ಮನ್ನಾ ಆಗಿದ್ದು, ಇನ್ನು 68 ಫಲಾನುಭವಿಗಳು ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಸಂಘದಿಂದ ನೀಡಿರುವ ಸಾಲ ಶೇ. 87 ರಷ್ಟು ಮರುಪಾವತಿಯಾಗಿದ್ದು ಸಾಲಗಾರರಿಗೆ ಯಾವದೇ ರೀತಿಯ ನೋಟಿಸ್ ಜಾರಿಗೊಳಿಸುವದು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅವಕಾಶ ಇಲ್ಲದ ಕಾರಣ ಸಾಲ ವಸೂಲಾತಿ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆ ಸರಕಾರ ಸಾಲ ಮರುಪಾವತಿಗೆ ವಿಳಂಭ ಮಾಡುತ್ತಿರುವ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಬೇಕಿದೆ. ಯಶಸ್ವಿನಿ ಯೋಜನೆ ಬದಲಾಗಿ ಸರಕಾರಿ ಇದೀಗ ಜಾರಿಗೊಳಿಸಿರುವ ಆರೋಗ್ಯ ವಿಮೆ ಕೇವಲ ರೂ. 2 ಲಕ್ಷಕ್ಕೆ ಸೀಮಿತಗೊಳಿಸಿರುವದು ತೀವ್ರ ಅನಾನುಕೂಲ ಉಂಟಾಗಿದ್ದು, ಯಶಸ್ವಿನಿ ಯೋಜನೆಯನ್ನು ಮುಂದು ವರೆಸುವಂತೆ ಶರವಣಕುಮಾರ್ ಸರಕಾರವನ್ನು ಆಗ್ರಹಿಸಿದ್ದಾರೆ.
ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 5 ರಂದು ಬೆಳಿಗ್ಗೆ 10.30 ಗಂಟೆಗೆ ಸ್ಥಳೀಯ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಕಟ್ಟಡದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಪಿ.ಬಿ. ಯತೀಶ್, ವಿ.ಎಸ್. ಆನಂದಕುಮಾರ್, ಗಣಿಪ್ರಸಾದ್, ಕೆ.ಎಂ. ಗಣೇಶ್, ಕೆ.ಎನ್. ಅಶೋಕ್, ನೇತ್ರಾವತಿ, ವ್ಯವಸ್ಥಾಪಕ ಲೋಕೇಶ್ ಇದ್ದರು.