ಸೋಮವಾರಪೇಟೆ, ಆ. 2: ಮನೋಮಾಲಿನ್ಯದಿಂದ ಬಳಲುವ ವ್ಯಕ್ತಿ ಸಮಾಜದ ಆಸ್ತಿಯಾಗಲು ಸಾಧ್ಯವಿಲ್ಲ. ಈ ಹಿನ್ನೆಲೆ ಎಲ್ಲರೂ ಮನೋಮಾಲಿನ್ಯ ತ್ಯಜಿಸಬೇಕು ಎಂದು ಯಸಳೂರು ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಸೋಮವಾರಪೇಟೆ ರೋಟರಿ ಹಿಲ್ಸ್ ವತಿಯಿಂದ ಅಲೋಕಾ ಹಾಲ್‍ನಲ್ಲಿ ಆಯೋಜಿಸಿದ್ದ ಬದುಕಿನ ನೈತಿಕತೆ ವಿಷಯದಲ್ಲಿ ಉಪನ್ಯಾಸ ನೀಡಿದರು. ದ್ವೇಷ, ಅಸೂಯೆ, ವಂಚನೆ, ಸ್ವಾರ್ಥ, ಶೋಷಣೆ, ಭೇದಭಾವ ಮನೋಮಾಲಿನ್ಯಕ್ಕೆ ಕಾರಣವಾಗಿದ್ದು, ಇವುಗಳನ್ನು ತ್ಯಜಿಸಿದರೆ ಜೀವನ ಸಾರ್ಥಕವಾಗುತ್ತದೆ. ಹುಟ್ಟು-ಸಾವಿನ ಮಧ್ಯದ ಬದುಕಿನಲ್ಲಿ ಮಾತಿನಿಂದ, ಬರಹದಿಂದ, ಸೇವೆಯಿಂದ, ಮಾನವೀಯತೆ, ಮನಸ್ಸಿನಿಂದ ಎಲ್ಲರನ್ನು ಗೆಲ್ಲಬೇಕು. ಶ್ರಮ, ಗುರಿ, ಏಕಾಗ್ರತೆ ಇದ್ದರೆ ಜೀವನವನ್ನು ಗೆಲ್ಲಬಹುದು. ದುಡ್ಡಿನ ಹಿಂದೆ ಹೋಗಿ ಮಾನವೀಯತೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಪಿ.ಕೆ. ರವಿ ವಹಿಸಿದ್ದರು. ಕಾರ್ಯದರ್ಶಿ ಪಿ. ನಾಗೇಶ್, ವಲಯ ಸೇನಾನಿ ಭರತ್ ಭೀಮಯ್ಯ ಉಪಸ್ಥಿತರಿದ್ದರು.