ಮಡಿಕೇರಿ, ಆ.2 : ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಡೀಸೆಲ್ ಕಲಬೆರಕೆ ಯಾಗಿರುವ ಬಗ್ಗೆ ಕೂಲಂಕುಷ ಪರಿಶೀಲನೆಯಾಗು ವವರೆಗೆ ಬಂಕ್‍ನ್ನು ಸ್ಥಗಿತಗೊಳಿಸಬೇಕು ಮತ್ತು ಅಮಾಯಕರ ಮೇಲಿನ ಪ್ರಕರಣಗಳನ್ನು ವಜಾಗೊಳಿಸಬೇಕೆಂದು ಜಯ ಕರ್ನಾಟಕ ಸಂಘಟನೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ.ಬಿ.ಸುರೇಶ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಳೆದ ಜುಲೈ 21 ರಂದು ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ ಪೆಟ್ರೋಲ್ ಬಂಕ್‍ನಲ್ಲಿ ಡೀಸೆಲ್ ಕಲಬೆರಕೆಯಾಗಿ ಸ್ಥಳೀಯರ ಹಾಗೂ ಕೆಲ ಪ್ರವಾಸಿ ವಾಹನಗಳು ಕೆಟ್ಟು ನಿಂತ ಘಟನೆ ನಡೆದಿದ್ದು, ಈ ಬಗ್ಗೆ ವಾಹನ ಚಾಲಕರು ನಮ್ಮ ಸಂಘÀಟನೆಗೆ ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಘಟನೆ ವತಿಯಿಂದ ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರರಿಗೆ ವಿಷಯ ತಿಳಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಸೂಕ್ತ ಸ್ಪಂದನವು ದೊರಕಿತ್ತೆಂದು ತಿಳಿಸಿದರು.

ಹೀಗಿದ್ದೂ ಜು.22 ರಂದು ಮತ್ತೆ ಅದೇ ಪೆಟ್ರೋಲ್ ಬಂಕ್‍ನಲ್ಲಿ ಕಲಬೆರಕೆ ಡೀಸೆಲ್‍ಅನ್ನು ವಾಹನಗಳಿಗೆ ಹಾಕಿರುವದಾಗಿ ಆರೋಪಿಸಿದ ಸುರೇಶ್, ಇದರಿಂದ ವಾಹನಗಳು ನಿಂತು ಹೋದ ಘಟನೆಗಳು ನಡೆದ ಬಳಿಕ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿದಾಗ, ಪೆಟ್ರೋಲ್ ಬಂಕ್‍ನ ಮಂದಿ ನಮ್ಮನ್ನು ನಿಂದಿಸಿ, ದಬ್ಬಾಳಿಕೆ ನಡೆಸಿರುವದಾಗಿ ಆರೋಪಿಸಿದರು. ಸ್ಥಳದಲ್ಲಿದ್ದ ಶನಿವಾರಸಂತೆ ಪೊಲೀಸರು ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟು ತೆರಳಿದ್ದಾಗಿ ಮಾಹಿತಿ ನೀಡಿದರು.

ಈ ಎಲ್ಲಾ ಘಟನೆಗಳ ಬಳಿಕ ಪೆಟ್ರೋಲ್ ಬಂಕ್‍ನವರು ಬಂಕ್‍ನಲ್ಲ್ಲಿದ್ದ ಕೆಲ ಅಮಾಯಕ ಹುಡುಗರನ್ನು ಬಳಸಿಕೊಂಡು, ತಮ್ಮ ತಪ್ಪನ್ನು ಮರೆಮಾಚಲು ಪ್ರತಿಭಟನೆ ನಡೆಸಿದವರ ಪೈಕಿ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಇವುಗಳನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಡಿಪಾರ್ಟ್‍ಮೆಂಟ್ ಆಫ್ ಲೀಗಲ್ ಮೆಟ್ರೋಲಜಿ ಇಲಾಖೆಗೆ ದೂರು ಸಲ್ಲಿಸಿರುವದಾಗಿ ಮಾಹಿತಿಯನ್ನಿತ್ತರು. ಸುದ್ದಿಗೋಷ್ಠಿಯಲ್ಲಿ ಜಯ ಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಜಿನ್ನು ನಾಣಯ್ಯ, ಕೊಡ್ಲಿಪೇಟೆ ಘಟಕದ ಅಧ್ಯಕ್ಷ ಶೋಬಿತ್ ಕೆ.ಆರ್., ಸಂಚಾಲಕ ಅಬ್ದುಲ್ ಲತೀಫ್, ಚಾಲಕರಾದ ಆದರ್ಶ್ ಕೆ.ಬಿ.ಮತ್ತು ಶೌಕತ್ ಆಲಿ ಉಪಸ್ಥಿತರಿದ್ದರು.