ಸಿದ್ದಾಪುರ, ಆ. 2: ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘವು ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದರು.

ಸಿದ್ದಾಪುರದ ಸೆಂಟನರಿ ಸಭಾಂಗಣದಲ್ಲಿ ಗುಹ್ಯ ಅಗಸ್ತ್ಯೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ರೂ. 76.05 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆ ಸಂಘದ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಶೇ. 100 ರಷ್ಟು ಫಸಲು ಸಾಲ ವಸೂಲಾತಿ ಮಾಡಿದ್ದು, ಡೀಸೆಲ್, ಪೆಟ್ರೋಲ್ ವ್ಯಾಪಾರದಲ್ಲಿ ರೂ. 18.35 ಕೋಟಿ ವ್ಯವಹಾರ ನಡೆಸಲಾಗಿದೆ.

ಸಂಘದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ತೇರ್ಗಡೆಯಾದ 36 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಬಡ ಕುಟುಂಬದ ಸದಸ್ಯರಿಗೆ ಚಿಕಿತ್ಸಾ ವೆಚ್ಚವನ್ನು ಸಂಘದಿಂದ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿದ ಕರಡಿಗೋಡು ಗ್ರಾಮದ ಕುಕ್ಕುನೂರು ಸುಬ್ಬಯ್ಯ, ಸಿದ್ದಾಪುರ ಗ್ರಾಮದ ವಿ.ಕೆ. ಜಮಾಲ್ ಹಾಗೂ ಗುಹ್ಯ ಗ್ರಾಮದ ಪಿ.ಟಿ. ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪ್ರಗತಿಪರ ಕೃಷಿಕ ಪಟ್ಟಡ ಶ್ಯಾಂ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ಮೂರು ಸ್ವ ಸಹಾಯ ಸಂಘ ಗುಂಪುಗಳಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭ ಉಪಾಧ್ಯಕ್ಷ ಎಂ.ಬಿ. ಜೋಯ್, ನಿರ್ದೇಶಕರಾದ ಕೆ.ಕೆ ಚಂದ್ರಕುಮಾರ್, ಕೆ.ಬಿ. ಈರಪ್ಪ, ಪಿ.ಕೆ. ಚಂದ್ರನ್, ಕೆ.ಎಸ್. ಸುನಿಲ್, ಮೂಸ, ಚೆಲುವಯ್ಯ, ಪ್ರತೀಶ್, ಪ್ರಮೀಳ, ಎನ್.ಟಿ ಪಾರ್ವತಿ, ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಪ್ರಸನ್ನ ಸೇರಿದಂತೆ ಇನ್ನಿತರರು ಇದ್ದರು.