ಶ್ರೀಮಂಗಲ, ಆ. 2: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿದೆ ಇದರಿಂದ ನಿರಾಶೆಗೊಂಡು ಪಕ್ಷದ ಕಾರ್ಯಕರ್ತರು ಎದೆಗುಂದದೆ ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕರೆ ನೀಡಿದರು.

ಪೊನ್ನಂಪೇಟೆಯಲ್ಲಿ ಕಾರ್ಯಕರ್ತರ ಅಹವಾಲನ್ನು ಆಲಿಸಿ ಪ್ರತಿಕ್ರಿಯಿಸಿದ ಅವರು, ವೀರಾಜಪೇಟೆ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಪಕ್ಷದ ಅಭ್ಯರ್ಥಿ ಸೋತಿದ್ದಾರೆ. ಹಿಂದಿನ ನಮ್ಮ ಸರ್ಕಾರವು ಬಹಳಷ್ಟು ಜನಪರ ಹಾಗೂ ರೈತಪರ ಯೋಜನೆಗಳನ್ನು ತಂದರೂ ಅದನ್ನು ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಎಲ್ಲೋ ವಿಫಲವಾಗಿದೆ. ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದು, ಜಿಲ್ಲೆಯ ಅಭಿವೃದ್ಧಿಗೆ ಬದ್ಧವಾಗಿದ್ದೇವೆ ಎಂದರು. ಮುಂದಿನ ಲೋಕಾಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಚುನಾವಣೆ ಎದುರಿಸಲಿದ್ದು ಬಹುತೇಕ ಕಡೆ ಗೆಲುವು ಸಾಧಿಸಲಿದೆ. ಕೊಡಗು-ಮೈಸೂರು ಕ್ಷೇತ್ರದಲ್ಲಿಯೂ ತಮ್ಮ ಮೈತ್ರಿ ಕೂಟದ ಅಭ್ಯರ್ಥಿ ಜಯಗಳಿಸುವದು ಖಚಿತವಾಗಿದೆ ಎಂದು ವೀಣಾ ಅಚ್ಚಯ್ಯ ಭವಿಷ್ಯ ನುಡಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೆಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಡೆಮಾಡ ಕುಸುಮ ಜೋಯಪ್ಪ, ಹುದಿಕೇರಿ ವಲಯ ಅಧ್ಯಕ್ಷ ಮೀದೇರಿರ ನವೀನ್, ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ಶ್ರೀಮಂಗಲ ವಲಯ ಅಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ, ಜಿ.ಪಂ. ಸದಸ್ಯ ಶ್ರೀಜಾ ಸಾಜಿ, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಪಕ್ಷದ ಮುಖಂಡರಾದ ಕೊಲ್ಲಿರ ಬೋಪಣ್ಣ, ಎರುಮು ಹಾಜಿ, ಅಜ್ಜಿಕುಟ್ಟಿರ ಪೊನ್ನಪ್ಪ, ಚೇರಂಡ ಮೋಹನ್, ಪುಲಿಯಂಡ ಜಗದೀಶ್, ಚಂದ್ರಸಿಂಗ್ ಮತ್ತಿತರರು ಹಾಜರಿದ್ದರು.