ಮಡಿಕೇರಿ, ಜು. 29: ಮನುಷ್ಯರೇ ಹಾಗೆ... ಹಲವರಿಗೆ ಹಲವಾರು ರೀತಿಯ ಹವ್ಯಾಸಗಳು ಇರುತ್ತವೆ. ಕೆಲವರಿಗೆ ಕ್ರೀಡೆಗಳು ಇಷ್ಟ... ಇನ್ನು ಕೆಲವರಿಗೆ ಪ್ರವಾಸ ತೆರಳುವದು, ಹೊಸ ಹೊಸ ಪ್ರದೇಶಗಳನ್ನು ವೀಕ್ಷಿಸುವದು ಇಷ್ಟವಾದರೆ ಮತ್ತೆ ಹಲವರಿಗೆ ಹೊಸ ಹೊಸ ಆವಿಷ್ಕಾರಗಳು... ವಾಹನ ಚಾಲನೆಯ ಗೀಳು... ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿರುವವರೂ ಇರುತ್ತಾರೆ. ಇಂತಹವರ ನಡುವೆ ಆಧುನಿಕ ಸಮಾಜದಲ್ಲಿ ಪಬ್... ಬಾರ್‍ಗಳಿಗೆ ತೆರಳುವ ಚಟ ಇರುವವರನ್ನೂ ಕಾಣಬಹುದು. ಮೋಜು- ಮಸ್ತಿಗಳಲ್ಲಿ ಕೆಲವರು ಕಾಲ ಕಳೆಯುತ್ತಾರೆ. ಇಂತಹ ಕೆಲವರು ಸಾಹಸ ಪ್ರವೃತ್ತಿಯ ಮನೋಭಾವ ಬೆಳೆಸಿಕೊಂಡಿರುತ್ತಾರೆ.

ಅಂತಹವರಲ್ಲಿ ಕೊಡಗಿನ ಮೂವರು ಸದ್ದಿಲ್ಲದೆ ತಮ್ಮ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ... ಸಾಹಸಮಯವಾದ ಪರ್ವತಾರೋಹಣ ಇವರಿಗೆ ಇಷ್ಟವಾದದ್ದು. ಈ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಇವರು ಇತರ ಯುವ ಪೀಳಿಗೆಯವರನ್ನೂ ಇಂತಹ ‘ಅಡ್ವೆಂಚರ್’ನತ್ತ ಪ್ರೇರೇಪಿಸುವದರೊಂದಿಗೆ ಈ ಮೂಲಕ ಉದ್ಯೋಗವನ್ನೂ ಕಂಡುಕೊಳ್ಳುತ್ತಿದ್ದಾರೆ.

ಮೂಲತಃ ಕಂಡಂಗಾಲದವರಾದ ನಂಬುಡುಮಾಡ ಸೋಮಣ್ಣ, ನಂಬುಡುಮಾಡ ಜಮ್ಸಿ ಹಾಗೂ ಯುವತಿ ನೆಲ್ಲಮಕ್ಕಡ ಮೇಘನಾ ಕಳೆದ ನಾಲ್ಕೈದು ವರ್ಷಗಳಿಂದ ಪರ್ವತಾರೋಹಣದ ಮೂಲಕ ಈ ಸಾಹಸ ತೋರುತ್ತಿದ್ದಾರೆ. ಈ ಮೂವರು ಇದೀಗ ಭಾರತದ ತುದಿಯಾಗಿರುವ ಲೇ-ಲಡಾಕ್‍ನಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ಕಾಂಗ್‍ಮರುಲಾ ಬೆಟ್ಟವನ್ನು ಏರಿದ್ದಾರೆ. ಇವರು ಹತ್ತಿರುವ ಪ್ರದೇಶದ ಎತ್ತರ 5150 ಮೀಟರ್ ಅಂದರೆ 16,890 ಅಡಿಗಳಷ್ಟು. ಇದನ್ನು ಯಶಸ್ವಿಯಾಗಿ ಕ್ರಮಿಸಿರುವ ಇವರು, ಮುಂದಿನ 6 ದಿನಗಳಲ್ಲಿ ಇದೇ ಪರ್ವತ ಶ್ರೇಣಿಯಲ್ಲಿ ಬರುವ 6250 ಮೀಟರ್ ಎತ್ತರವಿರುವ ಕಾಂಗ್ಯಾ ಸ್ಪೇ ಶಿಖರವನ್ನು ಏರುವ ಸಿದ್ಧತೆಯಲ್ಲಿದ್ದಾರೆ. ಇದಕ್ಕೂ ಮುಂಚಿತವಾಗಿ ಈ ಮೂವರು ಹಿಮಾಚಲ ಪ್ರದೇಶದ ಹನುಮಾನ್ ಕಿಡ್ಡಾ ಲೇನಲ್ಲಿ ಬರುವ ಸಾದರ್, ಸರ್ಪಾನ್‍ನಂತಹ ಪರ್ವತಗಳನ್ನೂ ಏರಿದ್ದಾರೆ.

ಬೆಂಗಳೂರಿನಲ್ಲಿ ಈ ಮೂವರು ಸೇರಿ ಹಿಮಾಲಯನ್ ಮ್ಯಾಡ್‍ನೆಸ್ ಎಂಬ ಸಾಹಸ ಸಂಸ್ಥೆಯನ್ನು ಹೊಂದಿದ್ದಾರೆ. ಈ ಮೂಲಕ ಯುವ ಪೀಳಿಗೆಯಲ್ಲಿ ಸಾಹಸ ಪ್ರವೃತ್ತಿಗಳಾದ ಟ್ರಕ್ಕಿಂಗ್, ಮೌಂಟನೀಯರಿಂಗ್, ಸೈಕ್ಲಿಂಗ್ ಇತ್ಯಾದಿಗಳನ್ನು ಬೆಳೆಸುವ ಅಭಿಲಾಷೆ ಇವರದ್ದು. ಇತರರನ್ನು ಕರೆದೊಯ್ಯಬೇಕಾದಲ್ಲಿ ಮೊದಲು ಅಲ್ಲಿನ ಅನುಭವ ತಮಗಿರಬೇಕು ಎಂಬ ಉದ್ದೇಶದೊಂದಿಗೆ ಇವರು ಮೊದಲು ಈ ಸಾಹಸ ಮಾಡುತ್ತಿದ್ದಾರೆ.

ಲೇಯ ಕಾಂಗ್‍ಮರುಲಾದಿಂದ ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ನಂಬುಡುಮಾಡ ಸೋಮಣ್ಣ ಅವರು

(ಮೊದಲ ಪುಟದಿಂದ) ತಮ್ಮ ಪ್ರಯಾಣದ ಸಂದರ್ಭ ಪರಿಸರವನ್ನು ಕಾಪಾಡುವದು, ಸ್ವಚ್ಛತೆಗೆ ಒತ್ತು ನೀಡುವ ಸಂದೇಶವನ್ನೂ ನೀಡುತ್ತಿರುವದಾಗಿ ಹೇಳಿದರು. ಇದು ಒಂದು ರೀತಿಯಲ್ಲಿ ‘‘ಫ್ಯಾಷನ್’’ ಎನಿಸಿದರೂ ಇತರರಿಗೆ ಮಾರ್ಗದರ್ಶನ ನೀಡಿ ಕರೆದೊಯ್ಯಲು ಪ್ರಯೋಜನಕಾರಿಯಾಗುತ್ತದೆ. ಆಯಾ ವಿಭಾಗದಲ್ಲಿ ಪರ್ವತಾರೋಹಣ ಸಂದರ್ಭ ಸ್ಥಳೀಯವಾಗಿ ಅನುಮತಿ ಪಡೆಯಬೇಕು. ಮಾತ್ರವಲ್ಲದೆ, ಅಲ್ಲಲ್ಲಿ ಬರುವ ಚೆಕ್‍ಪೋಸ್ಟ್‍ಗಳಲ್ಲಿ ನಿಗದಿತ ಶುಲ್ಕ ಪಾವತಿಸಬೇಕು. ಭಾರತೀಯರು ಮಾತ್ರವಲ್ಲದೆ, ವಿದೇಶಿಗರೂ ಹೆಚ್ಚಾಗಿ ಈ ಸಂದರ್ಭ ಸಿಗುತ್ತಾರೆ. ಈ ಅವಕಾಶದಲ್ಲಿ ಕೊಡಗು ಜಿಲ್ಲೆಯ ಇತಿಹಾಸ... ಇಲ್ಲಿನ ಜನರು ದೇಶಕ್ಕೆ ನೀಡಿರುವ ಕೊಡುಗೆಯ ಕುರಿತು ಇತರರಿಗೆ ವಿವರಿಸಲಾಗುತ್ತದೆ. ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಕುರಿತು ಬಹುತೇಕ ಮಂದಿಗೆ ಅರಿವು ಇದೆ. ಇತರರು ಈ ಪುಟ್ಟ ಜಿಲ್ಲೆಯ ಐತಿಹ್ಯ ಕೇಳಿ ಅಚ್ಚರಿ ವ್ಯಕ್ತಪಡಿಸುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡರು. ಅಲ್ಲಲ್ಲಿನ ವಾತಾವರಣ, ಪರಿಸರ ಕೂಡಾ ವಿಶಿಷ್ಟ ಅನುಭವ ಎಂದ ಅವರು, ಇದೀಗ ತಾವು ಏರಿದ ಶಿಖರದಲ್ಲಿ ರಾತ್ರಿ ವೇಳೆ ಉಷ್ಣಾಂಶ 3ರಿಂದ 5 ಡಿಗ್ರಿಯಷ್ಟಿತ್ತು ಎಂದರು. ತಾವು ಶಿಖರವೇರುವದನ್ನು ಅರಿತಿರುವ ಕೊಡವ ಸಂಘಟನೆಯೊಂದರ ಪ್ರಮುಖ ನೆರ್ಪಂಡ ಪ್ರತಿಕ್ ಪೊನ್ನಣ್ಣ ಕೊಡವನಾಡ್ ಎಂಬ ಧ್ವಜವನ್ನು ನೀಡಿದ್ದರು. ಇದನ್ನು ಅಲ್ಲಿ ಪ್ರದರ್ಶಿಸಿದ್ದಾಗಿ ಸೋಮಣ್ಣ ಸ್ಮರಿಸಿದರು. ಕೊಡಗು ಜಿಲ್ಲೆಯ ಯುವಕರಲ್ಲೂ ಈ ರೀತಿಯ ಸಾಹಸ ಪ್ರವೃತ್ತಿ ಮೂಡಿಸುವ ಅಭಿಲಾಷೆ ಹೊಂದಿರುವದಾಗಿ ಹೇಳಿದ ಸೋಮಣ್ಣ, ತಮಗೂ ಸೇರಿದಂತೆ ಈ ಕ್ಷೇತ್ರದಲ್ಲಿ ಆಸಕ್ತಿಯಿರುವ ಸಹಪಾಠಿಗಳಾದ ನಂಬುಡುಮಾಡ ಜಮ್ಸಿ ಹಾಗೂ ಅಮ್ಮತ್ತಿಯವರಾದ ನೆಲ್ಲಮಕ್ಕಡ ಮೇಘನಾಳಿಗೆ ಪೋಷಕರ ಬೆಂಬಲ, ಆಶೀರ್ವಾದ ಇರುವದಾಗಿ ‘ಶಕ್ತಿ’ಯೊಂದಿಗೆ ನುಡಿದರು. ಈ ಸಂದರ್ಭ ಅಲ್ಲಿಂದಲೇ ಅಲ್ಲಿನ ಕೆಲವು ಸುಂದರ ದೃಶ್ಯಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟರು.

ಚಾರಣದಲ್ಲಿ ಆಸಕ್ತಿ ಇರುವವರು ಸೋಮಣ್ಣ (09742994753) ಅವರನ್ನು ಸಂಪರ್ಕಿಸಬಹುದು.

-ಕಾಯಪಂಡ ಶಶಿ ಸೋಮಯ್ಯ.