ವೀರಾಜಪೇಟೆ, ಜು. 29: ಕಳೆದ 5 ವರ್ಷಗಳ ಹಿಂದೆ ಕಾಕೋಟುಪರಂಬುವಿನ ಏಲಕ್ಕಿ ತೋಟದಲ್ಲಿ ಪ್ರಿಯತಮೆ ಶಾಲಿನಿ (17) ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರನಾದ ಆರೋಪಿ ತೊತ್ತೇರ ಜಿ. ದೇವಯ್ಯ ಎಂಬಾತನನ್ನು ಕೊಲೆ ಆರೋಪದಿಂದ ಬಿಡುಗಡೆಗೊಳಿಸಿರುವ ಇಲ್ಲಿನ ಅಪರ ಮತ್ತು ಎರಡನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಪೊಲೀಸರು ಆರೋಪಿಸಿರುವ ಎರಡನೇ ಪ್ರಕರಣದ ಐ.ಪಿ.ಸಿ ವಿಧಿ

(ಮೊದಲ ಪುಟದಿಂದ) 309ರ ಆತ್ಮಹತ್ಯೆ ಪ್ರಯತ್ನಕ್ಕೆ ಒಂದು ವರ್ಷ ಸಾದಾ ಸಜೆ ಹಾಗೂ ರೂ. 3000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಕಾಕೋಟುಪರಂಬುವಿನ ಕಳ್ಳೀರ ತಿಮ್ಮಯ್ಯ ಅವರ ಲೈನು ಮನೆಯಲ್ಲಿ ವಾಸವಿದ್ದ ತೊತ್ತೇರ ಗಣಪತಿ ಅವರ ಮಗ ದೇವಯ್ಯ ಅಲಿಯಾಸ್ ಕಿರಣ್ ಇಲ್ಲಿನ ಕಾವಾಡಿ ಗ್ರಾಮದ ಸೋಮೆಯಂಡ ಎನ್. ದೇವಯ್ಯ ಅಲಿಯಾಸ್ ಡಾನ್ ಎಂಬವರ ಪುತ್ರಿ ಶಾಲಿನಿಯನ್ನು ಎಂಟು ತಿಂಗಳು ಗಳಿಂದ ಪ್ರೀತಿಸುತ್ತಿದ್ದನು. ತಾ.12-02-2013 ರಂದು ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ ಕಂಪ್ಯೂಟರ್ ತರಬೇತಿಯಲ್ಲಿದ್ದ ಶಾಲಿನಿಯನ್ನು ಅಪರಾಹ್ನ 1-45 ಗಂಟೆಗೆ ಕರೆದುಕೊಂಡು ಕಾಕೋಟು ಪರಂಬುವಿನ ಕೆ.ಜಾನಕಿ ಏಲಕ್ಕಿ ತೋಟಕ್ಕೆ ತೆರಳಿ ಅಲ್ಲಿ ಮದುವೆಯ ವಿಷಯದಲ್ಲಿ ಇಬ್ಬರ ನಡುವೆ ಜಗಳ ಉಂಟಾಗಿದೆ. ಮದುವೆಗೆ ಸ್ವಲ್ಪ ಸಮಯಾವಕಾಶಬೇಕೆಂದು ದೇವಯ್ಯ ತಿಳಿಸಿದ್ದರಿಂದ ಕೋಪಗೊಂಡ ಶಾಲಿನಿ ತನ್ನನ್ನು ಈಗಲೇ ಮದುವೆಯಾಗು ವಂತೆ ಹಠ ಹಿಡಿದಳು. ಇದನ್ನು ಸಹಿಸದ ದೇವಯ್ಯ ಆಕೆಯ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಕೊಲೆ ಮಾಡಿ, ಅವಳು ಸಾವನ್ನಪ್ಪಿದ ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ವಿಫಲಗೊಂಡಿದ್ದ. ಈ ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸರು ಪ್ರಿಯತಮೆಯ ಕೊಲೆಗಾಗಿ ಐ.ಪಿ.ಸಿ.302 ಹಾಗೂ ಆತ್ಮಹತ್ಯೆ ಯತ್ನಕ್ಕಾಗಿ ಐ.ಪಿ.ಸಿ 309 ವಿಧಿ ಪ್ರಕಾರ ಪ್ರಕರಣ ದಾಖಲಿಸಿ ಸರ್ಕಲ್ ಇನ್ಸ್‍ಪೆಕ್ಟರ್ ಪಿ.ಪಿ.ಸಂತೋಷ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಪ್ರಿಯತಮೆಯ ಕೊಲೆಗೆ ಸಾಕ್ಷ್ಯಾಧಾರಗಳಿಲ್ಲವೆಂದು ಕೊಲೆ ಆರೋಪದಿಂದ ಬಿಡುಗಡೆ ಗೊಳಿಸಿದ್ದಾರೆ. ಐ.ಪಿ.ಸಿ 309ಕ್ಕೆ ಒಂದು ವರ್ಷ ಸಜೆ ಹಾಗೂ ರೂ. 3000 ದಂಡ ತಪ್ಪಿದರೆ ಒಂದು ತಿಂಗಳ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಸರಕಾರದ ಪರವಾಗಿ ಅಭಿಯೋಜಕ ಡಿ.ನಾರಾಯಣ್ ವಾದಿಸಿದರು.