ಸೋಮವಾರಪೇಟೆ, ಜು. 28: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ-ಕೊರ್ಲಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಮತ್ತು ಜನ ಸಂಚಾರ ಸ್ಥಗಿತಗೊಂಡಿದೆ.

ಮಳೆಗೆ ಕಚ್ಚಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಕೆಸರುಮಯ ವಾಗಿದೆ. ಬೈಕ್, ಕಾರು ಸೇರಿದಂತೆ ಲಘು ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಫೋರ್ ವೀಲ್ ಜೀಪ್‍ಗಳನ್ನು ಹೊರತು ಪಡಿಸಿದರೆ ಗ್ರಾಮಕ್ಕೆ ತೆರಳಲು ಅನ್ಯ ಮಾರ್ಗವಿಲ್ಲದಂತಾಗಿದೆ.

ಗ್ರಾಮದಿಂದ ಶಾಲಾ ಕಾಲೇಜು ಗಳಿಗೆ ತೆರಳುವ ವಿದ್ಯಾರ್ಥಿಗಳು ಕೆಸರಿನ ನಡುವೆಯೇ ತೆರಳಬೇಕಾಗಿದ್ದು, ಗ್ರಾಮಸ್ಥರು ಹೊಂಡ ಗುಂಡಿಗಳ ರಸ್ತೆಯಲ್ಲಿ ಸಂಚರಿಸಬೇಕಿದೆ. ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಫಲಪ್ರದವಾಗಿಲ್ಲ.

ಕಳೆದ ಸಾಲಿನಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ರಸ್ತೆಯ ದುರವಸ್ಥೆಯ ಬಗ್ಗೆ ಖುದ್ದು ಗಮನ ಹರಿಸಿ ರೂ. 2ಲಕ್ಷ ಮಂಜೂರು ಮಾಡಿದ್ದರು. ಇದರ ಫಲವಾಗಿ ಒಂದಷ್ಟು ಕೆಲಸ ನಡೆದಿದ್ದು ಬಿಟ್ಟರೆ, ಸಂಚಾರಕ್ಕೆ ಯೋಗ್ಯವಾದ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ.

ಮುಖ್ಯ ರಸ್ತೆಯಿಂದ 2 ಕಿ.ಮೀ. ರಸ್ತೆ ತೀರಾ ದುಸ್ಥಿತಿಗೆ ತಲಪಿದ್ದು, ಗ್ರಾ.ಪಂ. ಅಧ್ಯಕ್ಷೆ ನಾಗರತ್ನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ ಅವರುಗಳು ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಈ ಬಗ್ಗೆ ಮನವಿ ಮಾಡಿದ ಮೇರೆ, ಶಾಸಕರು ತಕ್ಷಣ ರಸ್ತೆಗೆ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ಅಭಿಯಂತರ ಭಾಸ್ಕರ್ ಅವರಿಗೆ ಸೂಚಿಸಿದ್ದಾರೆ.

‘ನಾವು ಬೇರೇನೂ ಕೇಳೋದಿಲ್ಲ; ನಡೆದಾಡಲು ಸುಸಜ್ಜಿತ ರಸ್ತೆಯನ್ನಷ್ಟೇ ಮಾಡಿಕೊಡಿ’ ಎಂದು ಗ್ರಾಮದ ಪುನೀತ್ ಸೇರಿದಂತೆ ಇತರರು ಮನವಿ ಮಾಡಿದ್ದಾರೆ.