ಮಡಿಕೇರಿ, ಜು. 29: ಈಗಾಗಲೇ ನಾಲ್ಕಾರು ಕಳ್ಳತನ ಪ್ರಕರಣದಲ್ಲಿ ಗುರುತರ ಆರೋಪ ಎದುರಿಸುತ್ತಿದ್ದು, ಕಳೆದ ಮೇ 1 ರಂದು ಇಲ್ಲಿನ ದೇಚೂರು ನಿವಾಸಿ ಬೊಳಂದಂಡ ಜಯ ಅಪ್ಪಚ್ಚು ಎಂಬವರ ಮನೆಯಲ್ಲಿ ಕಳವು ಮಾಡಿರುವ ಆರೋಪಿಯನ್ನು ನಗರ ಠಾಣಾ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ನಿವೃತ್ತ ಸೈನ್ಯಾಧಿಕಾರಿಯಾಗಿರುವ ಮನೆ ಮಾಲೀಕರು ಬೆಂಗಳೂರಿಗೆ ತೆರಳಿದ್ದ ಸಂದರ್ಭ ಮೇ 1 ರಂದು ರಾತ್ರಿ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಅಪ್ಪಚ್ಚು ಅವರಿಗೆ ಸೇರಿದ ಒಂದು ರೈಫಲ್, ಒಂದು ಜೋಡಿ ನಳಿಕೆ ಕೋವಿ ಹಾಗೂ ರೂ. 40 ಸಾವಿರ ಮೌಲ್ಯದ ಚಿನ್ನಾಭರಣ ಸೇರಿದಂತೆ ಮನೆಯ ದೇವರ ಕೋಣೆಯಿಂದ ಕಾಣಿಕೆ ಸಹಿತ ದೋಚಿದ್ದರು.

ಅಲ್ಲದೆ, ಮನೆಯಿಂದ ಹೆಡ್‍ಲೈಟ್ ಹಾಗೂ ಅಮೂಲ್ಯ ‘ಟೂಲ್‍ಕಿಟ್’ (ಜರ್ಮನಿಯದ್ದು) ಕೂಡ ಅಪಹರಿಸಿದಲ್ಲದೆ, ಅಡುಗೆ ಮನೆಯಿಂದ ಚೌಚೌ ಇತ್ಯಾದಿಯೊಂದಿಗೆ ಅರ್ಧ ಬಾಟಲಿ ಮದ್ಯವನ್ನು ಅಲ್ಲೇ ಸೇವಿಸಿ ಇನ್ನೆರಡು ಬಾಟಲಿಯೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ನಡೆದು ಕೆಲವು ದಿನಗಳಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಆ ವೇಳೆ ಪ್ರೊಬೆಷನರಿ ಎಸ್‍ಪಿಯಾಗಿದ್ದ ಯತೀಶ್ ಮತ್ತು ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ಗಾಳಿಬೀಡು ಬಳಿಯ ಬಸ್ ತಂಗುದಾಣವೊಂದರಲ್ಲಿ ಕೋವಿ ಇತ್ಯಾದಿಯೊಂದಿಗೆ ವ್ಯಕ್ತಿಯೋರ್ವ ತನ್ನ ಸಹಚರನೊಂದಿಗೆ ಎದುರಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಒಂದು ರಿವಾಲ್ವರ್ ಹಾಗೂ ಕೋವಿ ಸಹಿತ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ದೇಚೂರುವಿನ ಕಳ್ಳತನ ಬಹಿರಂಗ ಗೊಂಡಿತ್ತು.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿ ಕಕ್ಕಬ್ಬೆ ಬಳಿಯ ನಾಲಾಡಿ ನಿವಾಸಿ, ಅಶೋಕ್ ಎಂದು ಗೊತ್ತಾಗಿದೆ. ಈತ ಹಲವು ದುಷ್ಕøತ್ಯಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೂ ಒಳಗಾಗಿದ್ದಾನೆ. ಪ್ರಸಕ್ತ ಜೈಲಿನಲ್ಲಿರುವ ಆರೋಪಿಯನ್ನು ಮಡಿಕೇರಿ ನಗರ ಠಾಣೆ ಪೊಲೀಸರು ನಿನ್ನೆ ನ್ಯಾಯಾಲಯದಿಂದ ದೇಚೂರು ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಈ ಸಂದರ್ಭ ಆರೋಪಿಯು, ಜಯಅಪ್ಪಚ್ಚು ಮನೆಯಿಂದ ಕಳ್ಳತನ ನಡೆಸಿ, ಮಧ್ಯರಾತ್ರಿಯಲ್ಲಿ ಬಾಡಿಗೆಗೆ ಆಟೋವೊಂದನ್ನು ಪಡೆದು ವಣಚಲುವಿಗೆ ಪ್ರಯಾಣಿಸಿರುವದು ಬೆಳಕಿಗೆ ಬಂದಿದೆ. ಮಧ್ಯರಾತ್ರಿ ಕೋವಿ ಇತ್ಯಾದಿ ಗಮನಿಸಿ ಆಟೋ ಚಾಲಕ ಸಂಶಯದಿಂದ ಪ್ರಶ್ನಿಸಲಾಗಿ, ಆರೋಪಿಯು ವಣಚಲುವಿಗೆ ಕಾಡುಪ್ರಾಣಿ ಬೇಟೆಗೆ ತೆರಳುತ್ತಿರುವ ದಾಗಿ ಹೇಳಿಕೊಂಡಿದ್ದ ನೆನ್ನಲಾಗಿದೆ.

ನಿನ್ನೆ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ನಗರ ಠಾಣಾ ಪೊಲೀಸರು ಮೇ 1ರ ಪ್ರಕರಣದ ಸಂಬಂಧ ಸ್ಥಳ ಮಹಜರು ಇತ್ಯಾದಿ ನಡೆಸಿ, ಮರಳಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ಆರೋಪಿಯಿಂದ ಟೂಲ್ಸ್‍ಕಿಟ್ ಹೊರತಾಗಿ ಇತರ ಎಲ್ಲ ಸ್ವತ್ತನ್ನು ಈಗಾಗಲೇ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.