ಮಡಿಕೇರಿ, ಜು. 28: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಕಮೀಷನ್ ಮಸೂದೆಯನ್ನು ವಿರೋಧಿಸಿ ಇಂದು ದೇಶಾದ್ಯಂತ ಕರೆ ನೀಡಲಾಗಿದ್ದ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗ (ಒಪಿಡಿ) ಬಂದ್ ಪ್ರತಿಭಟನೆಗೆ ಕೊಡಗು ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತಗೊಂಡಿತು.
ಜಿಲ್ಲೆಯ ಹಲವು ಖಾಸಗಿ ಆಸ್ಪತ್ರೆಗಳು ಇಂದು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಸೇವೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯವುಂಟಾಗಿತ್ತು. ಪ್ರಮುಖ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಇತರ ಘಟಕಗಳಲ್ಲೂ ಕಾರ್ಯನಿರ್ವಹಣೆ ನಡೆಯಲಿಲ್ಲ.ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳಲ್ಲಿ ಹೊರ ರೋಗಿಗಳ ಸೇವೆಯನ್ನು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ಪೂರ್ವ ನಿರ್ಧರಿತ ಶಸ್ತ್ರ ಚಿಕಿತ್ಸೆ ಸೇವೆಯನ್ನು ಮುಂದೂಡುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿತ್ತು. ಆದರೆ ತುರ್ತು ಚಿಕಿತ್ಸೆ ಸೇವೆಯನ್ನು ಎಂದಿನಂತೆ ನೀಡಲಾಗಿದೆ ಎಂದು ಭಾರತೀಯ ವೈದ್ಯ ಸಂಘದ (ಐಎಂಎ) ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ
(ಮೊದಲ ಪುಟದಿಂದ) ಡಾ. ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.
ಉದ್ದೇಶಿತ ಬಿಲ್ ಅನ್ನು ಈಗಾಗಲೇ ಸಂಸತ್‍ನಲ್ಲಿ ಮಂಡಿಸಲಾಗಿದೆ. ಇದನ್ನು ಅಂಗೀಕಾರ ಮಾಡಿದರೆ ಖಾಸಗಿ ವೈದ್ಯಕೀಯ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ ಎಂಬದು ಭಾರತೀಯ ವೈದ್ಯ ಸಂಘದ ಅಭಿಪ್ರಾಯವಾಗಿದೆ.
ಸಮಸ್ಯೆಯಾಗಿಲ್ಲ: ಡಿಎಚ್‍ಓ
ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವದೇ ಸಮಸ್ಯೆಗಳು ಉಂಟಾಗಿರುವದು ವರದಿಯಾಗಿಲ್ಲ. ಪ್ರತಿಭಟನೆಯ ಮಾಹಿತಿಯ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಸೂಕ್ತ ಮುಂಜಾಗ್ರತೆ ವಹಿಸಲು ಸೂಚನೆ ನೀಡಲಾಗಿತ್ತು. ಅಲ್ಲದೆ ಯಾವ ವೈದ್ಯರೂ ಇಂದು ರಜೆ ಮಾಡದಂತೆ ಸೂಚನೆ ನೀಡಲಾಗಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರ್ಗಿಹಳ್ಳಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಎಂದಿನಂತೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.