ಕುಶಾಲನಗರ, ಜು. 27: ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಜನತೆಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮೈಸೂರು-ಕುಶಾಲನಗರ ನೂತನ ರೈಲ್ವೇ ಮಾರ್ಗದ ಕನಸು ಇದೀಗ ಮತ್ತೆ ಗರಿಗೆದರಿ ನಿಂತಿದೆ. ಅಂದಾಜು 86.50 ಕಿ.ಮೀ. ಅಂತರದ ಈ ಮಾರ್ಗಕ್ಕೆ ಕಳೆದ 7 ವರ್ಷಗಳಿಂದ ಹಲವು ತೊಡಕುಗಳು ಬರುತ್ತಿದ್ದು, ಈ ಯೋಜನೆಯನ್ನು ಮತ್ತೆ ರೈಲ್ವೇ ಇಲಾಖೆ ಕೈಗೆತ್ತಿಕೊಂಡಿದ್ದು, ರೂ. 667 ಕೋಟಿ ಅನುದಾನ ಕಲ್ಪಿಸಿದೆ. ಈ ಸಾಲಿನಿಂದ ಈ ನೂತನ ಮಾರ್ಗದ ಕಾಮಗಾರಿಗೆ ಗ್ರೀನ್ ಸಿಗ್ನಲ್ ದೊರೆಯುವದು ಬಹುತೇಕ ಸನ್ನಿಹಿತವಾಗಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದ ಮೂಲಗಳು ತಿಳಿಸಿವೆ.

ಈ ಹೊಸ ರೈಲು ಮಾರ್ಗ ಯೋಜನೆ ಸಂಬಂಧ 2011 ರಲ್ಲಿ ರೈಲ್ವೇ ಇಲಾಖೆ ಸರ್ವೆ ಕಾರ್ಯ ಕೈಗೊಂಡಿತ್ತು. ಮೈಸೂರು-ಕುಶಾಲನಗರ ರೈಲ್ವೇ ಯೋಜನೆಗೆ ಅಂದಾಜು ರೂ. 600 ಕೋಟಿ ವೆಚ್ಚವಾಗಲಿದೆ ಎನ್ನುವ ಅಂದಾಜು ಪಟ್ಟಿ ಕೂಡ ಸಲ್ಲಿಸಲಾಗಿತ್ತು. ಈ ನಡುವೆ 2012 ರಲ್ಲಿ ಅಂದಿನ ರೈಲ್ವೇ ಸಚಿವರಾಗಿದ್ದ ಕೆ.ಹೆಚ್. ಮುನಿಯಪ್ಪ ಯೋಜನೆಗೆ ಶಂಕುಸ್ಥಾಪನೆ ಕೂಡ ನೆರವೇರಿಸಿ ಕೆಲವೇ ವರ್ಷಗಳಲ್ಲಿ ಕುಶಾಲನಗರಕ್ಕೆ ರೈಲು ಬರುವದಾಗಿ ಸಾರ್ವಜನಿಕರಿಗೆ ಭರವಸೆ ಕೂಡ ನೀಡಿದ್ದರು.

ಇದೀಗ ಮೈಸೂರಿನಿಂದ ಕುಶಾಲನಗರಕ್ಕೆ ರೂ. 667 ಕೋಟಿ ವೆಚ್ಚದಲ್ಲಿ ರೈಲು ಮಾರ್ಗ ರೂಪಿಸುವದರೊಂದಿಗೆ ಬೆಳಗೊಳದಿಂದ ಇಲವಾಲ ಮೂಲಕ ಬಿಳಿಕೆರೆ, ಉದ್ದೂರು, ಹುಣಸೂರು, ಸತ್ತೆಗಾಲ ಮಾರ್ಗವಾಗಿ ಪಿರಿಯಾಪಟ್ಟಣ, ಬೈಲುಕೊಪ್ಪ ಸಮೀಪದ ದೊಡ್ಡಹೊನ್ನೂರು ಕೊಪ್ಪ ಮೂಲಕ ಚಿಕ್ಕಹೊಸೂರು ಮಾರ್ಗವಾಗಿ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸಲು ನಕ್ಷೆ ತಯಾರಿಸಲಾಗಿದೆ. ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಈ ಸಂದರ್ಭ ಪಿರಿಯಾಪಟ್ಟಣ- ಕುಶಾಲನಗರ ನಡುವೆ ಕೆಲವು ಭೂ ಮಾಲೀಕರು ಅಡ್ಡಿಯುಂಟು ಮಾಡಿರುವದು ಈ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಗಿತ್ತು. 1981 ರಲ್ಲಿಯೇ ಮೈಸೂರಿನಿಂದ ಜಿಲ್ಲೆಗೆ ರೈಲು ಮಾರ್ಗ ನಿರ್ಮಾಣದ ಬಗ್ಗೆ ಯೋಜನೆಯೊಂದು ಪ್ರಸ್ತಾವನೆಯಾಗಿತ್ತು. ಆದರೆ ಕಾರಣಾಂತರಗಳಿಂದ ಯೋಜನೆ ಕೈಬಿಡಲಾಗಿತ್ತು. ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಬಡಾವಣೆಯೆಂಬ ಹೆಗ್ಗಳಿಕೆಯಲ್ಲಿರುವ ಕುಶಾಲನಗರ ತನಕ ರೈಲ್ವೇ ಮಾರ್ಗ ಬಂದಲ್ಲಿ ಕಾಫಿ ಉದ್ದಿಮೆಗೆ ನೆರವಾಗುವ ಸಾಧ್ಯತೆ ಬಗ್ಗೆ ಕನಸು ಚಿಗುರೊಡೆದಿತ್ತು.

ರೈಲ್ವೇ ಭೂಪಟದಲ್ಲಿ ಹಳಿ ಇಲ್ಲದ ಜಿಲ್ಲೆ ಎನ್ನುವ ಖ್ಯಾತಿಗೆ ಒಳಗಾಗಿರುವ ಕೊಡಗು ಜಿಲ್ಲೆಗೆ ಕೆಲವೇ ವರ್ಷಗಳಲ್ಲಿ ರೈಲು ಬಂತು ರೈಲು ಎನ್ನುವದು ಖಚಿತ ಎನ್ನಲಾಗಿದೆ. ರೈಲ್ವೇ ಮಾರ್ಗದ ಬಗ್ಗೆ ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎನ್ನುತ್ತಾರೆ ಮೈಸೂರು-ಕೊಡಗು ಸಂಸತ್ ಸದಸ್ಯ ಪ್ರತಾಪ್ ಸಿಂಹ. ರಾಜ್ಯ ಸರಕಾರ ಯಾವದೇ ರೀತಿಯ ಸ್ಪಂದನೆ ನೀಡದಿರುವ ಹಿನ್ನೆಲೆ ಯೋಜನೆ ಹಿನ್ನಡೆ ಸಾಧಿಸುತ್ತಿದೆ ಎಂದು ಅವರು ಹೇಳಿದ್ದಾರೆ. 2010-11 ರಲ್ಲಿ ಮೈಸೂರು-ಕುಶಾಲನಗರ-ಮಡಿಕೇರಿ ರೈಲ್ವೇ ಯೋಜನೆ ಅನುಮೋದನೆಗೊಂಡಿದ್ದು, ಈ ಸಂಬಂಧ ಸರ್ವೆ ಕಾರ್ಯ ಪೂರ್ಣಗೊಂಡಿದೆ. ವರದಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮೈಸೂರು-ಕುಶಾಲನಗರ ರೈಲ್ವೇ ಯೋಜನೆಗೆ ರಾಜ್ಯ ಸರಕಾರ ಶೇ. 50 ರಷ್ಟು ಪಾಲುದಾರಿಕೆ ಹೊಂದಿದ್ದು ಈ ನಿಟ್ಟಿನಲ್ಲಿ ಯಾವದೇ ಹಣ ಬಿಡುಗಡೆಯಾಗಿಲ್ಲ ಎಂದು ಸೌತ್ ವೆಸ್ಟರ್ನ್ ರೈಲ್ವೇ ಪ್ರಯಾಣಿಕರ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಗುಡ್ಡೆಮನೆ ಮಣಿಕುಮಾರ್ ಮಾಹಿತಿ ನೀಡಿದ್ದಾರೆ.

ಈ ನಡುವೆ ಜಿಲ್ಲೆಯ ಪರಿಸರವಾದಿಗಳು ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಬೇಡ ಎನ್ನುವ ಬೇಡಿಕೆ ಮೂಲಕ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಕೊಡಗು ಜಿಲ್ಲೆ ಮೂಲಕ ಯಾವದೇ ರೈಲು ಮಾರ್ಗಕ್ಕೆ ಅವಕಾಶ ಕಲ್ಪಿಸಬಾರದು ಎನ್ನುವದು ಕೂರ್ಗ್ ವೈಲ್ಡ್‍ಲೈಫ್ ಸೊಸೈಟಿ ಅಧ್ಯಕ್ಷರಾದ ಕರ್ನಲ್ ಮುತ್ತಣ್ಣ ಅವರ ಆಗ್ರಹವಾಗಿದೆ.

ಕೇಂದ್ರದ ಎರಡು ಬಜೆಟ್‍ನಲ್ಲಿ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗದ ಬಗ್ಗೆ ಪ್ರಸ್ತಾಪವಾಗುವದರೊಂದಿಗೆ ಕೊಡಗು ಜಿಲ್ಲೆಯ ಕುಶಾಲನಗರದ ಅಳಿಯ ಎಂಬ ಖ್ಯಾತಿಯ ಮಾಜಿ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಅವರು ನೀಡಿದ ಭರವಸೆ ಕೂಡ ಈಡೇರುವ ಸಾಧ್ಯತೆ ಕಂಡುಬರುತ್ತಿದೆ. ಕನಿಷ್ಟ ಕುಶಾಲನಗರದ ತನಕ ರೈಲ್ವೇ ಸಂಪರ್ಕ ಬಂದಲ್ಲಿ ಜಿಲ್ಲೆಯ ವ್ಯಾಪಾರ ವಹಿವಾಟು ಹಾಗೂ ಕೈಗಾರಿಕಾ ಉದ್ಯಮಗಳು ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎನ್ನುತ್ತಾರೆ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಬಿ. ಅಮೃತ್‍ರಾಜ್.

ಇನ್ನೊಂದೆಡೆ ನೆರೆಯ ಟಿಬೇಟಿಯನ್ ನಾಗರಿಕರು, ಜಿಲ್ಲೆಯಲ್ಲಿ ನೆಲೆ ನಿಂತಿರುವ ನೆರೆ ರಾಜ್ಯಗಳ ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಮೈಸೂರು-ಕುಶಾಲನಗರ ರೈಲ್ವೇ ಸಂಪರ್ಕದ ಬಗ್ಗೆ ಶಬರಿಯಂತೆ ಕಾದು ಕುಳಿತಿದ್ದರೆ, ಇತ್ತ ರಾಜಕೀಯ ದೊಂಬರಾಟದ ನಡುವೆ ಮೈಸೂರು-ಕುಶಾಲನಗರ ರೈಲ್ವೇ ಯೋಜನೆ ಮಾತ್ರ ಕಳೆದ ಹಲವು ವರ್ಷಗಳಿಂದ ಹಳಿತಪ್ಪಿದಂತಾಗಿದೆ ಎನ್ನುವದು ಸಾರ್ವಜನಿಕರ ಮಾತಾಗಿದೆ.

- ಚಂದ್ರಮೋಹನ್