ಮಡಿಕೇರಿ, ಜು. 13: ಶಸ್ತ್ರ ಚಿಕಿತ್ಸೆಗೆ ದಾಖಲಾದ ರೋಗಿಯೊಬ್ಬರ ಬಳಿ ವೈದ್ಯರು ಹಣದ ಬೇಡಿಕೆಯಿಟ್ಟಿದ್ದಾರೆ ಎಂದು ಸ್ವತಹ ರೋಗಿಯೇ ವೀಡಿಯೋದಲ್ಲಿ ಹೇಳಿಕೆ ನೀಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಆ ವೀಡಿಯೋ ಈಗ ವೈರಲ್ ಆಗಿದೆ.

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೂಲವ್ಯಾಧಿ ಕಾಯಿಲೆಯಿದ್ದ ಹಿನ್ನೆಲೆಯಲ್ಲಿ ದಾಖಲಾಗಿದ್ದ ನಾಪೋಕ್ಲು ಚೆರಿಯಪರಂಬುವಿನ ಪ್ರಕಾಶ್ ಎಂಬವರಿಗೆ ತಾ. 11ರಂದು ಶಸ್ತ್ರ ಚಿಕಿತ್ಸೆ ಮಾಡುವದಾಗಿ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದರು. ಅದರಂತೆ ತಾ. 11ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಶಸ್ತ್ರ ಚಿಕಿತ್ಸೆ ಕೊಠಡಿ ಎದುರು ಕಾದು ಕುಳಿತರು. ಆದರೆ ಸಂಬಂಧಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲಿಲ್ಲ. ಈ ಬಗ್ಗೆ ಪ್ರಕಾಶ್ ಪ್ರಯಶ್ನಿಸಿದಾಗ ಇಂದು ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದರು.

ನಂತರ ಶಸ್ತ್ರ ಚಿಕಿತ್ಸೆ ಕೊಠಡಿಯಿಂದ ಹೊರ ಬಂದ ಅಲ್ಲಿನ ಸಿಬ್ಬಂದಿಯೊಬ್ಬರು ‘ದುಡ್ಡು ಕೊಟ್ಟಿದ್ದರೆ ಇಂದು ಆಪರೇಷನ್ ಆಗುತ್ತಿತ್ತು’ ಎಂದು ಪ್ರಕಾಶ್ ಅವರಿಗೆ ಹೇಳಿದ್ದರೆನ್ನಲಾಗಿದ್ದು, ಎಲ್ಲಾ ವಿವರವನ್ನು ಪ್ರಕಾಶ್ ವೀಡಿಯೋ ಮೂಲಕ ಹೇಳಿ ವಾಟ್ಸಾಪ್‍ನಲ್ಲಿ ಹರಿಯ ಬಿಟ್ಟರು. ಇದೀಗ ಆ ವೀಡಿಯೋ ವೈರಲ್ ಆಗಿದೆ. ಆಪರೇಷನ್ ಮಾಡಿಸಿಕೊಳ್ಳದೆ ಪ್ರಕಾಶ್ ಅವರು ಹಿಂತಿರುಗಿದ್ದಾರೆ.

ಸರ್ಜನ್ ಪ್ರತಿಕ್ರಿಯೆ

ಪ್ರಕರಣದ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಗದೀಶ್ ಅವರು ‘ಶಕ್ತಿ’ಗೆ ಈ ಕೆಳಗಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

ತಾ. 11ರಂದು ಒಟ್ಟು 7 ಮೂಲವ್ಯಾಧಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನಿಗದಿಪಡಿಸಲಾಗಿತ್ತು. ಆ ಪೈಕಿ 6 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ರಕಾಶ್ ಅವರಿಗೆ ಮರುದಿನ ಶಸ್ತ್ರ ಚಿಕಿತ್ಸೆ ಮಾಡುವದಾಗಿ ಸಂಬಂಧಿಸಿದ ವೈದ್ಯರು ತಿಳಿಸಿದ್ದಾರೆ, ಹೊರತು ಪ್ರಕಾಶ್ ಅವರು ಆರೋಪ ಮಾಡಿರುವಂತೆ ಹಣದ ಬೇಡಿಕೆಯಿಟ್ಟ ಬಗ್ಗೆ ದೃಢಪಟ್ಟಿಲ್ಲ. ಈ ಸಂಬಂಧ ಈಗಾಗಲೇ ವಿಚಾರಣೆ ಕೂಡ ಮಾಡಲಾಗಿದೆ. ಪ್ರಕಾಶ್ ಅವರಿಗೆ ಒಂದು ವಾರದ ಬಳಿಕ ಬಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ಮೂಲವ್ಯಾಧಿ ಶಸ್ತ್ರ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು 5 ಸಾವಿರ ರೂ. ನೀಡುವಂತೆ ರೋಗಿಯೊಬ್ಬರ ಬಳಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮರಾಠ ಮತ್ತು ಮರಾಠಿ ಸೇವಾ ಸಂಘ, ಬಡವರ ಜೀವದ ಜೊತೆ ಚೆಲ್ಲಾಟವಾಡುವ ವೈದ್ಯರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಎಂ.ಎಂ. ಪರಮೇಶ್ವರ್, ಕಳೆದ 11 ದಿನಗಳಿಂದ ಪ್ರಕಾಶ್ ಎಂಬವರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮೂಲವ್ಯಾಧಿ ಶಸ್ತ್ರ ಚಿಕಿತ್ಸೆಗಾಗಿ ಸಂಬಂಧಿಸಿದ ವೈದ್ಯರೊಬ್ಬರು 5 ಸಾವಿರ ರೂ. ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಒತ್ತಡ ಹೇರಿರುವದಾಗಿ ಆರೋಪಿಸಿದರು. ಆದರೆ, ಬಡತನದಿಂದ ಬಳಲುತ್ತಿರುವ ಪ್ರಕಾಶ್ ಅವರು ಹಣ ನೀಡಲು ನಿರಾಕರಿಸಿದಾಗ ವೈದ್ಯರು ಆಸ್ಪತ್ರೆಯಿಂದ ತೆರಳುವಂತೆ ದಬ್ಬಾಳಿಕೆ ನಡೆಸಿರುವದಾಗಿ ದೂರಿರುವ ಅವರು, ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವದಾಗಿ ತಿಳಿಸಿದರು.

ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿ ಪ್ರಕಾಶ್ ಮಾತನಾಡಿ, ವೈದ್ಯರು ಹಣಕ್ಕಾಗಿ ತಮ್ಮ ಮೇಲೆ ಒತ್ತಡ ಹೇರಿದ್ದರು, ನನಗೆ ಹಣ ನೀಡಲು ಸಾಧ್ಯವಾಗದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗದೆ ಆಸ್ಪತ್ರೆಯಿಂದ ಹೊರ ಬರಬೇಕಾಯಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ, ಎಂ.ವಿ.ಸಂಪತ್ ಕುಮಾರ್ ಉಪಸ್ಥಿತರಿದ್ದರು.