ಭಾಗಮಂಡಲ, ಜು. 13: ತಲಕಾವೇರಿಯಲ್ಲಿ ಈಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಬ್ರಹ್ಮಗಿರಿ ಸಾನಿಧ್ಯ ಸ್ಥಳವಾಗಿದ್ದು ಆ ಸ್ಥಳವೇ ಆದ ಕಾರಣ ಹನ್ನೆರಡು ರಾಶಿಯ ಗಿಡ ಮತ್ತು ಇಪ್ಪತ್ತೇಳು ನಕ್ಷತ್ರಗಳ ಗಿಡಗಳನ್ನು ಹೇರಳವಾಗಿ ಬೆಳೆದು ದೇವತಾವನ ನಿರ್ಮಿಸಬೇಕು ಎಂದು ಕಂಡುಬಂದ ಹಿನ್ನೆಲೆಯಲಿ ಇಂದು ತಲಕಾವೇರಿಯಲ್ಲಿ ದೇವಾಲಯದ ಹಿಂಭಾಗದಲ್ಲಿ ದೇವತಾವನ ಗಿಡವನ್ನು ನೆಡುವದರ ಮೂಲಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಚಾಲನೆ ನೀಡಿದರು. ಅಲ್ಲದೇ ಕುಂಕುಮಾರ್ಚನೆಯನ್ನು ದೇವಾಲಯದ ಪೌಳಿಯಲ್ಲಿ ನಡೆಸಬೇಕೆಂದು ಕಂಡುಬಂದಿದ್ದು, ಅದರಂತೆಯೇ ಹಿರಿಯ ಅರ್ಚಕ ನಾರಾಯಣಾಚಾರ್ ನೇತೃತ್ವದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಇನ್ನು ಮುಂದೆ ಯಾವದೇ ಅರ್ಚನೆ ಕಾರ್ಯಕ್ರಮವನ್ನು ದೇವಾಲಯದ ಪೌಳಿಯಲ್ಲಿಯೇ ನಡೆಸಲಾಗುವದೆಂದು ತಿಳಿದು ಬಂದಿದೆ. ಈ ಸಂದರ್ಭ ವಲಯ ಅರಣ್ಯಾಧಿಕಾರಿ ಚಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಪಾರುಪತ್ಯೆಗಾರ ಪೊನ್ನಣ್ಣ, ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳೀಯರು ಉಪಸ್ಥಿತರಿದ್ದರು.