ಸಿದ್ದಾಪುರ, ಜು. 13: ನೆಲ್ಯಹುದಿಕೇರಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಎಲ್ಲೆ ಮೀರಿದೆ. ಕೂಡಲೇ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕು. ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿ ತಾ. 16 ರಂದು ನೆಲ್ಯಹುದಿಕೇರಿ ಬಂದ್ ನಡೆಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಮುಖಂಡ ಪಿ. ಆರ್. ಭರತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದ ಕಾಡು ಎಂ.ಜಿ. ಕಾಲೋನಿ, ನಲ್ವತ್ತೇಕರೆ, ಬರಡಿ ವಿಭಾಗದಲ್ಲಿರುವ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು, ಹಾಡುಹಗಲೇ ರಾಜಾರೋಷವಾಗಿ ಸುತ್ತಾಡುತ ಕೃಷಿ ಫಸಲುಗಳನ್ನು ನಾಶಪಡಿಸುತ್ತಿ ಎಂದರು. ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರಿಗೂ, ಕಾರ್ಮಿಕರಿಗೂ ನೆಮ್ಮದಿ ಇಲ್ಲದ ಪರಿಸ್ಥಿತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖಾಧಿಕಾರಿಗಳು ಕಾಡಾನೆಗಳನ್ನು ತೋಟದಿಂದ ಅಟ್ಟುತ್ತಿದ್ದು, ಕಾಡಾನೆಗಳು ಬಂದು ತೋಟದಿಂದ ಇನ್ನೊಂದು ತೋಟಕ್ಕೆ ತೆರಳಿ ದಾಂಧಲೆ ನಡೆಸುತ್ತಿದೆ ಹೊರತು ಸಮಸ್ಯೆಗಳು ಬಗೆಹರಿಯುತ್ತಿಲ್ಲ.

ಈ ಹಿನ್ನೆಲೆಯಲ್ಲಿ ನಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು. ಆನೆ - ಮಾನವ ಸಂಘರ್ಷ ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸÀಬೇಕೆಂದು ಒತ್ತಾಯಿಸಿ ತಾ. 16 ರಂದು ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಗ್ರಾಮಸ್ಥರನ್ನು ಹಾಗೂ ಬೆಳೆಗಾರರನ್ನು ಒಗ್ಗೂಡಿಸಿ ನೆಲ್ಯಹುದಿಕೇರಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವದೆಂದರು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಭರವಸೆಯನ್ನು ನೀಡದಿದ್ದಲ್ಲಿ 12 ಗಂಟೆಯ ಬಳಿಕ 1 ಗಂಟೆಗಳ ಕಾಲ ರಸ್ತೆ ನಡೆಸಿ ಪ್ರತಿಭಟಿಸಲಾಗುವದೆಂದರು.

ಗ್ರಾಮಸ್ಥರಾದ ಬೆಳೆಗಾರ ಹೊಸಮನೆ ವಸಂತ್‍ಕುಮಾರ್ ಮಾತನಾಡಿ, ನೆಲ್ಯಹುದಿಕೇರಿ ಗ್ರಾಮದಲ್ಲಿ 50ಕ್ಕೂ ಅಧಿಕ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕೃಷಿ ಫಸಲು ನಾಶಪಡಿಸಿದೆ. ಇದಲ್ಲದೇ ಒಂಟಿ ಸಲಗವೊಂದಿದ್ದು, ಮನುಷ್ಯನ ಮೇಲೆ ಧಾಳಿ ನಡೆಸುತ್ತಿದೆ. ಇತ್ತೀಚೆಗೆ ಮಹಮ್ಮದ್ ಆಲಿ ಎಂಬವರ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ. ಅಲ್ಲದೇ ಅನೇಕ ಬೈಕ್ ಸವಾರರ ಮೇಲೆ ಧಾಳಿ ನಡೆಸಿದೆಂದರು. ಇದ್ದರಿಂದಾಗಿ ಶಾಲೆಗಳಿಗೆ ಮಕ್ಕಳಿಗೆ ತೆರಳಲು ಕಷ್ಟವಾಗಿದೆ. ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿದೆಂದರು. ಗ್ರಾ.ಪಂ. ಸದಸ್ಯ ಎ.ಕೆ. ಹಕ್ಕಿಂ ಮಾತನಾಡಿ ನೆಲ್ಯಹುದಿಕೇರಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಗ್ರಾಮದಲ್ಲಿ ಸಂಜೆಯಾಗುತ್ತಲೇ ಭಯದ ವಾತಾವರಣ ಮೂಡಿದೆ. ಈ ನಿಟ್ಟಿನಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖಾಧಿಕಾರಿಗಳ ಗಮನ ಹರಿಸಿ ಶಾಶ್ವತ ಯೋಜನೆ ರೂಪಿಸಲು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಸರ್ವಪಕ್ಷದ ಸದಸ್ಯರುಗಳು ರಾಜಕೀಯ ರಹಿತವಾಗಿ ಒಗ್ಗೂಡಿ ತಾ. 16 ರಂದು ನೆಲ್ಯಹುದಿಕೇರಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಂಡಿದ್ದೇವೆ ಎಂದರು. ಗೋಷ್ಠಿಯಲ್ಲಿ ಬೆಳೆಗಾರರಾದ ಜಯಕುಮಾರ್, ಟಿ.ಸಿ. ಅಶೋಕ್ ಹಾಜರಿದ್ದರು.