ವೀರಾಜಪೇಟೆ, ಜು. 11: ಕುಟ್ಟದ ನಾಥಂಗಲ್ ಕಾಫಿ ತೋಟಕ್ಕೆ ಕರಿಮೆಣಸು ಕುಯ್ಯಲು ಕೇರಳದ ವಯನಾಡಿನಿಂದ ಬಂದಿದ್ದ ಮೂರು ಮಂದಿ ಸೇರಿ ಸಂಗಡಿಗ ಸುರೇಶ್ ಎಂಬಾತನ ತಲೆಗೆ ಜಜ್ಜಿ ಕೊಲೆ ಮಾಡಿದ ಜಾನ್ ಅಲಿಯಾಸ್ ಆಶ್ಲೆಜಾನ್, ವಿಜಯಾ ಹಾಗೂ ರಘು ಎಂಬ ಮೂವರಿಗೆ ಜೀವಾವಧಿ ಶಿಕ್ಷೆ, ರೂ. 30,000 ದಂಡ ವಿಧಿಸಿ ಎರಡನೇ ಜಿಲ್ಲಾ ಮತ್ತು ಅಪರ ಸೆಷನ್ಸ್ ನ್ಯಾಯಾಧೀಶೆ ಬಿ.ಜಿ. ರಮಾ ತೀರ್ಪು ನೀಡಿದ್ದಾರೆ.

ಕಳೆದ ತಾ: 21-3-2017ರಂದು ಕೇರಳದ ವಯನಾಡಿನಿಂದ ಈ ಮೂರು ಮಂದಿ ಕುಟ್ಟದ ನಾಥಂಗಲ್‍ಗೆ ಬಂದು ಕಾಫಿ ತೋಟದಲ್ಲಿ ಕರಿಮೆಣಸು ಕುಯ್ಯುವ ಕೆಲಸಕ್ಕೆ ಸೇರಿದ್ದರು. ತಾ: 26.3.2017ರಂದು ರಾತ್ರಿ 8 ಗಂಟೆಗೆ ಆಶ್ಲೆಜಾನ್ ಎಂಬಾತನು ತನ್ನ ಕೊಠಡಿಯ ಮುಂದೆ ಪಾತ್ರೆ ಬೆಳಗುತ್ತಿದ್ದಾಗ ಅಲ್ಲಿಗೆ ಸಂಗಡಿಗ ರೊಂದಿಗೆ ಬಂದ ಸುರೇಶ್ ಪಾತ್ರೆ ಬೆಳಗುತ್ತಿರುವದು ಸರಿ ಇಲ್ಲ ಎಂದು ಹೀಯಾಳಿಸಿ ಅವಮಾನ ಮಾಡಿದ ರೀತಿಯಲ್ಲಿ ನಿಂದಿಸಿದ್ದಾನೆ. ಇದನ್ನು ಸಹಿಸದ ಆಶ್ಲೆಜಾನ್ ಅಲ್ಲಿಯೇ ಇದ್ದ ಸುರೇಶನಿಗೆ (36) ಸಂಗಡಿಗರೊಂದಿಗೆ ಸೇರಿ ಸೈಜು ಕಲ್ಲಿನಿಂದ ತಲೆಯ ಭಾಗಕ್ಕೆ ಜಜ್ಜಿ ಮೂವರು ಸೇರಿ ದಾರುಣ ರೀತಿಯಲ್ಲಿ ಕೊಲೆ ಮಾಡಿ ಮೃತದೇಹವನ್ನು ಕೈ ಕಾಲು ಕಟ್ಟಿ ತೋಟದ ಬಳಿಯ ಕೆರೆಯಲ್ಲಿ ಕಲ್ಲು ಕಟ್ಟಿ ಮುಳುಗಿಸಿದ್ದಾರೆ. ಮಾರನೇ ದಿನ ತೋಟದ ಮಾಲೀಕರನ್ನು ಭೇಟಿ ಮಾಡಿದ ಜಾನ್ ಕೇರಳದ ವಯನಾಡಿನಲ್ಲಿ ಸಂಗಡಿಗ ಸುರೇಶನ ತಂದೆ ಸಾವನ್ನಪ್ಪಿದ್ದಾರೆ. ತಕ್ಷಣ ಹಣ ತರುವಂತೆ ಹೇಳಿರುವದರಿಂದ ರೂ. 1500 ನಗದು ಪಡೆದು ಕೇರಳಕ್ಕೆ ಮರಳಿ ತಲೆಮರೆಸಿಕೊಂಡಿದ್ದಾರೆ.

ಮಾರ್ಚ್30ರಂದು ತೋಟದ ಮಾಲೀಕರಾದ ಎಂ.ಸುಬ್ಬಯ್ಯ ಅವರು ತೋಟದಲ್ಲಿ ಸಂಚರಿಸಿ ಕೆರೆಯ ಬಳಿಗೆ ಬರುವಾಗ ಸುರೇಶನ ಮೃತ ದೇಹವನ್ನು ಕಂಡು ಕುಟ್ಟ ಪೋಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಹಜರು ನಡೆಸಿ ಕೊಲೆ ಪ್ರಕರಣ ದಾಖಲಿಸಿದರು.

ನಂತರ ಕೇರಳದ ಕ್ಯಾಲಿಕಟ್‍ನ ಮನೆಯೊಳಗೆ ತಲೆಮರೆಸಿಕೊಂಡಿದ್ದ ಆರೋಪಿ ಆಶ್ಲೆಜಾನ್‍ನನ್ನು 2017ರ ಮೇ 5ರಂದು ಬಂಧಿಸಿದರೆ ಆರೋಪಿ ನೀಡಿದ ವಿಳಾಸದಲ್ಲಿದ್ದ ವಿಜಯಾ ಹಾಗೂ ರಘು ಎಂಬಿಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.

ಪ್ರಕರಣದಲ್ಲಿ ತನಿಖಾಧಿಕಾರಿ ಯಾಗಿ ನೇಮಕಗೊಂಡ ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಐ.ಪಿ.ಸಿ 304 ಹಾಗೂ 201 ರ ಪ್ರಕಾರ ಆರೋಪಿಗಳಿಗೆ 2 ವರ್ಷ ಸಜೆ, ತಲಾ 5000 ದಂಡ, ತಪ್ಪಿದರೆ 6 ತಿಂಗಳು ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಸಲಾಗಿದ್ದು, ಮೃತ ಸುರೇಶನ ತಾಯಿಗೆ ದಂಡದ ರೂಪದಲ್ಲಿ ಬರುವ ಹಣದಲ್ಲಿ ರೂ. 25000 ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಸರಕಾರದ ಪರ ಅಭಿಯೋಜಕರಾದ ಡಿ.ನಾರಾಯಣ್ ವಾದಿಸಿದರು.