ಮಡಿಕೇರಿ, ಜು. 11: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಹುಲಿಗಳ ಹಾವಳಿ ಹೆಚ್ಚಾಗಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ? ಹಾಗಿದ್ದಲ್ಲಿ, ಸರ್ಕಾರ ಕಾಡಾನೆಗಳು ಹಾಗೂ ಹುಲಿಗಳ ಧಾಳಿಗಳನ್ನು ತಡೆಗಟ್ಟಲು ಕೈಗೊಂಡ ಕ್ರಮಗಳೇನು? ಎಂದು ಕೆ.ಜಿ. ಬೋಪಯ್ಯ ಅವರು ಅರಣ್ಯ ಸಚಿವರಲ್ಲಿ ಮಾಹಿತಿ ಪಡೆದಿದ್ದಾರೆ.

ಅರಣ್ಯ ಸಚಿವ ಶಂಕರ್ ಅವರು ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಹುಲಿಗಳ ಧಾಳಿಯನ್ನು ತಡೆಗಟ್ಟಲು ಇಲಾಖೆಯಿಂದ ಸುಧಾರಿತ ಸೌರಶಕ್ತಿ ಬೇಲಿ ನಿರ್ಮಾಣ/ ನಿರ್ವಹಣೆ, ಆನೆ ತಡೆ ಕಂದಕ ನಿರ್ಮಾಣ/ನಿರ್ವಹಣೆ, ವನ್ಯ ಜೀವಿಗಳಿಗೆ ಕುಡಿಯುವ ನೀರಿಗಾಗಿ ಕೆರೆಗಳ ನಿರ್ಮಾಣ/ ನಿರ್ವಹಣೆ, ಕಳ್ಳಬೇಟೆ ತಡೆ ಶಿಬಿರಗಳಿಗೆ ಹಾಗೂ ರ್ಯಾಪಿಡ್ ರೆಸ್ಪಾನ್ಸ್ ತಂಡ, ಕಾಡಾನೆ ಹಿಮ್ಮೆಟ್ಟಿಸುವ ತಂಡಗಳಿಗೆ ವೈರ್‍ಲೆಸ್ ನೆಟ್‍ವರ್ಕಿಂಗ್ ಮೂಲಕ ಮಾಹಿತಿ ಸಂವಹನ ಮಾಡಲಾಗುತ್ತಿದೆ, ಕಾಡಾನೆ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ, ಕಾಡಾನೆಗಳ ಮಾಹಿತಿಯನ್ನು ಸಂಗ್ರಹಿಸಲು 24 ಗಂಟೆ ಕಾರ್ಯ ನಿರ್ವಹಿಸುವ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ, ಕೊಡಗು ಜಿಲ್ಲೆಯ ಮಡಿಕೇರಿ ವಿಭಾಗದಲ್ಲಿ 2 ಆನೆ ಗುಂಪುಗಳು ಒಟ್ಟು 8 ಆನೆ ಗುಂಪುಗಳ ಒಂದೊಂದು ಗುಂಪಿನ ಒಂದು ವಯಸ್ಕ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಿ 24 ಗಂಟೆ ಆನೆ ಹಿಂಡಿನ ಚಲನ-ವಲನಗಳ ಮೇಲೆ ನಿಗಾ ವಹಿಸಿ, ಈ ಆನೆಗಳು ಯಾವ ಯಾವ ಪ್ರದೇಶಗಳಲ್ಲಿ ಚಲಿಸುತ್ತಿವೆ ಎಂಬ ವಿಷಯವನ್ನು ಎಂ.ಎಂ.ಎಸ್. ಮುಖಾಂತರ ಸ್ಥಳೀಯ ಜನರಿಗೆ ಆಗಿಂದ್ದಾಗ್ಗೆ ಮಾಹಿತಿ ನೀಡಲಾಗುತ್ತಿದೆ, ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಆಗ್ಗಿಂದಾಗ್ಗೆ ಆನೆ ಶಿಬಿರಗಳಿಗೆ ಕಳುಹಿಸಲಾಗಿರುತ್ತದೆ, ರೈತರಿಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಶೇ. 50 ರಷ್ಟು ಧನ ಸಹಾಯವನ್ನು ಇಲಾಖೆಯಿಂದ ನೀಡಲಾಗುತ್ತಿದೆ, ಹುಲಿ ಹಾವಳಿಯನ್ನು ತಡೆಗಟ್ಟುವಲ್ಲಿ ಸುಧಾರಿತ ಸೌರಬೇಲಿಯನ್ನು ಪ್ರಾಯೋಗಿಕವಾಗಿ ವೀರಾಜಪೇಟೆ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಅಲ್ಲದೇ ಬೋನುಗಳನ್ನು ಬಳಸಿ ಸೆರೆ ಹಿಡಿಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇನ್ನು ಮುಂದೆ ರೈಲು ಬ್ಯಾರಿಕೇಡ್ ಜೊತೆಗೆ ಸೋಲಾರ್ ತಂತಿಗಳನ್ನು ಬಳಸಿ ಹುಲಿ ನುಸಳದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವದು ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸೌಭಾಗ್ಯ, ಡಿಡಿಯುಜಿಜೆವೈ ಯೋಜನೆಯಲ್ಲಿ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆಯೇ? ಹಾಗಿದ್ದಲ್ಲಿ ಆ ಯೋಜನೆಯಡಿ ಎಷ್ಟು ಜನರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ? ಎಂಬ ಪ್ರಶ್ನೆಗೆ ಮುಖ್ಯಮಂತ್ರಿಯವರು ಹೌದು ಸೌಭಾಗ್ಯ ಯೋಜನೆಯಲ್ಲಿ ರಾಜ್ಯದ 97.298 ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ? ಎಷ್ಟು ಜನರು ಈ ಯೋಜನೆಯಡಿ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ್ದಾರೆ? ಎಷ್ಟು ಜನರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದಕ್ಕಾಗಿ ಬಿಡುಗಡೆಯಾದ ಹಣ ಎಷ್ಟು? (ಕಳೆದ ಮೂರು ವರ್ಷಗಳ ಜಿಲ್ಲಾವಾರು ಮತ್ತು ತಾಲೂಕುವಾರು ವಿವರಗಳನ್ನು ಒದಗಿಸುವದೇ?) ಎಂಬ ಪ್ರಶ್ನೆಗೆ

ಕೊಡಗು ಜಿಲ್ಲೆಯಲ್ಲಿ ಸೌಭಾಗ್ಯ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು 4293 ಅರ್ಜಿಗಳು ನೋಂದಾಯಿಸಲ್ಪಟ್ಟಿದೆ. ಈ ಅರ್ಜಿಗಳಲ್ಲಿ ಆರ್ಥಿಕ ಕಾರ್ಯಸಾಧ್ಯತೆಯಿರುವ ಅರ್ಜಿಗಳನ್ನು ಹಾಲಿ ಪ್ರಗತಿಯಲ್ಲಿರುವ ಡಿಡಿಯುಜಿಜೆವೈ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿಗಣಿಸಲಾಗುತ್ತಿದ್ದು ಇದುವರೆಗೂ ಒಟ್ಟು 1.888 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಡಿಡಿಯುಜಿಜೆವೈ ಯೋಜನೆಯಲ್ಲಿ ಎಲ್ಲಾ ರೀತಿಯ ಕಾಮಗಾರಿಗಳಿಗಾಗಿ ಒಟ್ಟು ರೂ.16.12 ಕೋಟಿಗಳು ಮಂಜೂರಾಗಿರುತ್ತದೆ,

ಆರ್ಥಿಕ ಕಾರ್ಯ ಸಾಧ್ಯತೆಯಿಲ್ಲದೆ ಅರ್ಜಿಗಳಿಗೆ ಸೌಭಾಗ್ಯ ಯೋಜನೆಯಲ್ಲಿ ಸೌರಶಕ್ತಿ ವಿದ್ಯುತ್ ಸರಬರಾಜು ಕಲ್ಪಿಸಲು ಅವಕಾಶವಿರುತ್ತದೆ. ಆದರೆ ಕೊಡಗು ಜಿಲ್ಲೆಯಲ್ಲಿ ಸೌರಶಕ್ತಿ ಪರಿಣಾಮಕಾರಿ ಆಗಿರುವದಿಲ್ಲವಾದ್ದರಿಂದ ಇಂತಹ ಅರ್ಜಿಗಳಿಗೆ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಡಿ.ಪಿ.ಆರ್ ತಯಾರಿಸಲಾಗುತ್ತಿದೆ.

ಮಡಿಕೇರಿ ತಾಲೂಕಿನಲ್ಲಿ 1631, ಸೋಮವಾರಪೇಟೆ ತಾಲೂಕಿನಲ್ಲಿ 1610 ಮತ್ತು ವೀರಾಜಪೇಟೆ ತಾಲೂಕಿನಲ್ಲಿ 1052, ಒಟ್ಟಾಗಿ 4293 ಅರ್ಜಿಗಳು ಬಂದಿವೆ. ಸೌಭಾಗ್ಯ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಪ್ರಸಕ್ತ ವರ್ಷದಿಂದ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಕಳೆದ 3 ವರ್ಷಗಳಿಂದ ಕಾಡಾನೆಗಳ ಧಾಳಿಯಿಂದ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ? ಗಾಯಗೊಂಡವರು ಎಷ್ಟು? ಎಂಬ ಪ್ರಶ್ನೆಗೆ ಕಳೆದ 3 ವರ್ಷಗಳಿಂದ ಕಾಡಾನೆಗಳ ಧಾಳಿಯಿಂದ 20 ಮಾನವ ಪ್ರಾಣಹಾನಿ ಹಾಗೂ 17 ಗಾಯಗೊಂಡ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದರು.

ಎಷ್ಟು ಜನರಿಗೆ ಪರಿಹಾರ ವಿತರಿಸಲಾಗಿದೆ? ಪರಿಹಾರ ವಿತರಣೆ ಮಾಡಲು ಎಷ್ಟು ಬಾಕಿ ಇದೆ? ಎಂಬ ಪ್ರಶ್ನೆಗೆ ಅರಣ್ಯ ಸಚಿವರು, ಕಳೆದ 3 ವರ್ಷಗಳಿಂದ ಕಾಡಾನೆಗಳ ಧಾಳಿಯಿಂದ ಉಂಟಾದ ಮಾನವ ಪ್ರಾಣಹಾನಿ ಹಾಗೂ ಗಾಯಗೊಂಡ ಎಲ್ಲಾ ಪ್ರಕರಣಗಳಲ್ಲಿ ದಯಾತ್ಮಕ ಧನ ಪಾವತಿಸಲಾಗಿದೆ.2015-16 ನೇ ಸಾಲಿನಲ್ಲಿ 9 ಪ್ರಾಣಹಾನಿ ಪ್ರಕರಣಗಳು ದಾಖಲಾಗಿದ್ದು, 45 ಲಕ್ಷ ರೂ.ಗಳನ್ನು ವಿತರಿಸಲಾಗಿದ್ದು 07 ಗಾಯಗೊಂಡ ಪ್ರಕರಣಗಳಿದ್ದು 1.256 ಲಕ್ಷ ರೂಗಳನ್ನು ವಿತರಿಸಲಾಗಿದೆ. 2016-17 ನೇ ಸಾಲಿನಲ್ಲಿ 6 ಪ್ರಾಣಹಾನಿ ಪ್ರಕರಣಗಳು ದಾಖಲಾಗಿದ್ದು, 30ಲಕ್ಷ ರೂಗಳನ್ನು ವಿತರಿಸಲಾಗಿದ್ದು 5 ಗಾಯಗೊಂಡ ಪ್ರಕರಣಗಳಿದ್ದು 2.666 ಲಕ್ಷ ರೂಗಳನ್ನು ವಿತರಿಸಲಾಗಿದೆ. 2017-18ನೇ ಸಾಲಿನಲ್ಲಿ 05 ಪ್ರಾಣಹಾನಿ ಪ್ರಕರಣಗಳು ದಾಖಲಾಗಿದ್ದು, 25ಲಕ್ಷ ರೂಗಳನ್ನು ಹಾಗೂ 15 ಗಾಯಗೊಂಡ ಪ್ರಕರಣಗಳಿದ್ದು 6.125 ಲಕ್ಷ ರೂಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.