ಮಡಿಕೇರಿ, ಜು. 10: ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಏಳನೇ ವಾರ್ಡ್‍ನ ಲೀಲಾ ಶೇಷಮ್ಮ ಹಾಗೂ ಎಂಟನೇ ವಾರ್ಡ್‍ನ ಕೆ.ಎಂ. ಗಣೇಶ್ ಅವರುಗಳ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಒಂದು ವರ್ಷದ ಹಿಂದೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇವರಿಬ್ಬರೂ ಜಾತ್ಯತೀತ ಜನತಾದಳ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಲೀಲಾಶೇಷಮ್ಮ ಹಾಗೂ ಕೆ.ಎಂ. ಗಣೇಶ್ ಅವರುಗಳ ನಗರಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೋರಿತ್ತು.

ಕೆಲವು ತಿಂಗಳುಗಳ ವಿಚಾರಣೆಯ ನಂತರ ತೀರ್ಪು ಹೊರ ಬಿದ್ದಿದ್ದು, ಇಬ್ಬರ ಸದಸ್ಯತ್ವವನ್ನು ಪಕ್ಷಾಂತರ ನಿಷೇದ ಕಾಯ್ದೆಯನ್ವಯ ರದ್ದುಪಡಿಸಿರುವದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ತೀರ್ಪಿನ ಪ್ರತಿ ಇನ್ನೂ ಕೂಡ ಕೈ ಸೇರಿಲ್ಲ. ಅದು ದೊರೆತ ಬಳಿಕ ಮುಂದಿನ ನಡೆಯ ಬಗ್ಗೆ ತೀರ್ಮಾನಿಸುವದಾಗಿ ಗಣೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.