ಬೆಂಗಳೂರು, ಜು. 9: ಕೊಡಗು ಜಿಲ್ಲೆಯಲ್ಲಿ ಹುಲಿ ಕಾಟ ನಿಲ್ಲಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ. ಹುಲಿ ನಿಯಂತ್ರಣ ಮಾಡುವದು ಹೇಗೆ ಎಂದು ನಮಗೆ ಗೊತ್ತು. ಮತ್ತೆ ಹುಲಿ ಮದುವೆ ಮಾಡಬೇಕೇ? ಹೀಗೆಂದು ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಮಾಜಿ ಸ್ಪೀಕರ್, ಶಾಸಕ ಕೆ.ಜಿ. ಬೋಪಯ್ಯ ಗುಡುಗಿದರು.
ದೇವರ ಕಾಡಲ್ಲಿ ಮೇಯಲು ಹೋದ ಹಸು ಹುಲಿಯ ಬಾಯಿಗೆ ಸಿಕ್ಕಿ ಮೃತಪಟ್ಟರೆ ಪರಿಹಾರ ಇಲ್ಲ ಎನ್ನುತ್ತೀರಿ. ಹಾಗಾದರೆ ಹುಲಿ ಜನವಸತಿ ಪ್ರದೇಶಕ್ಕೆ ನುಗ್ಗಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ತಿನ್ನುವದು ಸರಿಯೇ? ಎಂದು ಪ್ರಶ್ನಿಸಿದರು. ಕೊಡಗಿನಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಸರ್ಕಾರದಿಂದ ಅದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಹೇಳಿ. ಕೊಡವರೇ ನಿಯಂತ್ರಿಸುತ್ತಾರೆ. ಹಿಂದೆಲ್ಲಾ ಹುಲಿ ಮದುವೆ ಮಾಡಿಸಿದವರು ನಾವು. ಮತ್ತೆ ಹುಲಿ ಮದುವೆ ಮಾಡಿಸಬೇಕೇ? ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ ಎಂದರು.
ಹುಲಿ ಮಾತ್ರವಲ್ಲದೆ, ಆನೆಗಳು ಕೂಡ ಜನವಸತಿ ಪ್ರದೇಶಗಳಿಗೆ ನುಗ್ಗುತ್ತವೆ. ಹಿಂದಿನ ಸರ್ಕಾರ ವನ್ಯಜೀವಿಗಳ ಧಾಳಿಗೆ ತುತ್ತಾಗಿ ಹಸು ಮೃತಪಟ್ಟರೆ ನೀಡುವ ಪರಿಹಾರವನ್ನು 10 ಸಾವಿರ ರೂ.ಗೆ ಇಳಿಸಿದೆ. ಈ ಮೊತ್ತ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಬಾರಿ ಮಳೆ ಬಂದು ಕೃಷ್ಣರಾಜಸಾಗರ ಜಲಾಶಯ ತುಂಬುತ್ತದೆ. ಆದರೆ, ಆ ಮಳೆಯಿಂದ ತೊಂದರೆಗೊಳಗಾಗಿರುವ ಕೊಡಗಿನ ಜನರ ಕಣ್ಣೀರು ಒರೆಸಿ ಎಂದೂ ಇದೇ ವೇಳೆ ಅವರು ಮನವಿ ಮಾಡಿದರು. ಇತ್ತೀಚೆಗೆ ಬಿದ್ದ ಮಳೆಗೆ ಸಾಕಷ್ಟು ಮನೆಗಳು ಸಂಪೂರ್ಣ ಕುಸಿದು ಜನ ಪ್ಲಾಸ್ಟಿಕ್ ಶೀಟ್ ಕೆಳಗೆ ಬದುಕುತ್ತಿದ್ದಾರೆ. ಇತ್ತೀಚೆಗೆ ಕಂದಾಯ ಸಚಿವರು ಜಿಲ್ಲೆಗೆ ಆಗಮಿಸಿ 3 ದಿನಗಳಲ್ಲಿ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಇರುವ 5 ಕೋಟಿ ರೂ. ಜತೆಗೆ ಮತ್ತೆ 5 ಕೋಟಿ ರೂ. ಮಂಜೂರು ಮಾಡಿದರು. ಆದರೆ ಈ ಕ್ಷಣದವರೆಗೆ ನಯಾಪೈಸೆ ಪರಿಹಾರ ಬಿಡುಗಡೆಯಾಗಿಲ್ಲ ಎಂದರು.
ಏನಿದು ಹುಲಿ ಮದುವೆ?
ಕೊಡಗಿನಲ್ಲಿ ನರಿ ಮಂಗಲ (ಹುಲಿ ಮದುವೆ) ಎನ್ನುವದು ಪರಂಪರೆಯ ಆಚರಣೆ. ಹಿಂದೆ ಕಾಡಿಗೆ ಬೇಟೆಗೆ ಹೋದ ವೀರ ಯುವಕ ಹುಲಿ ಜತೆ ಸೆಣಸಾಡಿ ಅದನ್ನು ಕೊಂದು ಊರಿಗೆ ಮೆರವಣಿಗೆಯಲ್ಲಿ ತರುತ್ತಾನೆ ಬೇಟೆಗಾರನ ಗೌರವಾರ್ಥ ಹುಲಿಯ ಕಳೇ ಬರದ ಜತೆ ಶಾಸ್ತ್ರೋಕ್ತವಾಗಿ ಯುವಕನ ಮದುವೆಯನ್ನು ನೆರವೇರಿಸಲಾಗುತ್ತದೆ. ಇದಕ್ಕೆ ಕೊಡವ ಭಾಷೆಯಲ್ಲಿ ನರಿ (ಹುಲಿ) ಮಂಗಲ ಎಂದು ಕರೆಯುತ್ತಾರೆ.