ಮಡಿಕೇರಿ, ಜು. 8: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವiಡಿಕೇರಿಯಲ್ಲಿ ತಾ. 7 ರಂದು ವೈದ್ಯ ಶಾಸ್ತ್ರ ವಿಭಾಗದ ವತಿಯಿಂದ ಮತ್ತು ಇಂಡಿಯನ್ ರೆಮಾಟಲಾಜಿ ಸಂಘದ ಸಹಯೋಗದೊಂದಿಗೆ ಸಂಧಿವಾತ ರೋಗದ ಮೇಲೆ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ, ಪ್ರಾಂಶುಪಾಲ ವಿಶಾಲ್ ಕುಮಾರ್, ಡಾ. ಮೋಹನ್ ಅಪ್ಪಾಜಿ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಕಾರ್ಯಕ್ರಮದ ಸಂಘಟಕ ಅಧ್ಯಕ್ಷ ಡಾ. ಲೋಕೇಶ್ ಹಾಗೂ ವಿಭಾಗ ಮುಖ್ಯಸ್ಥರು ಕಾರ್ಯಕ್ರಮ ಉದ್ಘಾಟಿಸಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಆಗಮಿಸಿದ ರೆಮಾಟಲಾಜಿ ತಜ್ಞ ವೈದ್ಯ ಡಾ. ವಿಕ್ರಮ್ ರಾಜ್ ಕೆ. ಜೈನ್, ಡಾ. ಶರತ್ ಕುಮಾರ್, ಡಾ. ಶಿವ ಪ್ರಸಾದ್, ಡಾ. ಸುಬ್ರಮಣಿ, ಡಾ. ಯೋಗೇಶ್ ಪ್ರೀತ್ ಸಿಂಗ್, ಡಾ. ಸುಬ್ರಮಣಿಯನ್ ಆರ್ ಇವರುಗಳು ಸಂಧಿವಾತ ರೋಗ ಮತ್ತು ಇನ್ನಿತರ ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಚಾರ ಸಂಕಿರಣದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಸುಮಾರು 80 ವೈದ್ಯರುಗಳು ಇತರ ಜಿಲ್ಲೆಗಳಿಂದ ಭಾಗವಹಿಸಿದ್ದರು.