ಕೂಡಿಗೆ, ಜು. 8: ಕೊಡಗು ಜಿಲ್ಲೆಯ ಗಡಿ ಚಿಕ್ಕಅಳುವಾರದಲ್ಲಿ 5 ವರ್ಷಗಳ ಹಿಂದೆ ಸ್ಥಾಪನೆಯಾದ ಸ್ನಾತಕೋತ್ತರ ಕೇಂದ್ರವು ಗ್ರಾಮಾಂತರ ಪ್ರದೇಶದ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಆಯ್ಕೆ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವು ರಾಜ್ಯದ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ, ನೆರೆ ರಾಜ್ಯದ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣದ ಸೌಲಭ್ಯವನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದೆ.

ಸುತ್ತಲು ಪ್ರಕೃತಿಯ ಆರಾಧನೆ ಯಂತೆ ಬೆಟ್ಟ-ಗುಡ್ಡಗಳಿಂದ ಕೂಡಿದ್ದು, ಪ್ರಶಾಂತವಾದ ಸ್ಥಳ. ಈ ಚಿಕ್ಕಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವು ಗ್ರಾಮಾಂತರ ಹಾಗೂ ಪಟ್ಟಣದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುತ್ತಿದೆ.

ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರವು ಕೊಡಗು ಜಿಲ್ಲೆಯ ಗಡಿಭಾಗದ ಹಾಸನ ಜಿಲ್ಲೆ, ಮೈಸೂರು ಜಿಲ್ಲೆಗಳ ವಿದ್ಯಾರ್ಥಿಗಳ ಸ್ನಾತಕೋತ್ತರ ವಿದ್ಯಾರ್ಜನೆಗೆ ಹೆಚ್ಚು ಪ್ರಯೋಜನಕಾರಿ ಯಾಗಲು 2014 ರಲ್ಲಿ ಪ್ರಾರಂಭಗೊಂಡಿದೆ.

ಜ್ಞಾನಕಾವೇರಿ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರಕ್ಕೆ 2012ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಶಂಕುಸ್ಥಾಪನೆ ನೆರವೇರಿಸಿ, ರಾಜ್ಯ ಸರ್ಕಾರದಿಂದ 5 ಕೋಟಿ ನೀಡುವದಾಗಿ ಭರವಸೆ ನೀಡಿ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ರಾಜ್ಯ ಸರ್ಕಾರದಿಂದ 5 ಕೋಟಿಯ ಬದಲು 1 ಕೋಟಿ ಬಿಡುಗಡೆಗೊಂಡಿದ್ದು, ಇನ್ನೂ 4 ಕೋಟಿ ಬಿಡುಗಡೆಯಾಗಬೇಕಿದೆಯಷ್ಟೆ. ಮಂಗಳೂರು ವಿಶ್ವವಿದ್ಯಾನಿಲಯದ ಯೋಜನೆಯಂತೆ ಈ ಸ್ನಾತಕೋತ್ತರ ಕೇಂದ್ರದ ಕಾಮಗಾರಿಯು ಪ್ರಾರಂಭಗೊಂಡು ಉತ್ತಮ ಕಟ್ಟಡವು ನಿರ್ಮಾಣಗೊಳ್ಳುತ್ತ ತಡೆಗೋಡೆ ಯೊಂದಿಗೆ ಮೊದಲ ಹಂತದ ಸ್ನಾತಕೋತ್ತರ ಕೇಂದ್ರ ಉದ್ಘಾಟನೆ ಯನ್ನು 2014 ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೆರವೇರಿಸಿದ್ದರು. ಈ ಕೇಂದ್ರವು ಸಮಾಜಕ್ಕೆ ನೂರಾರು ಪ್ರಜ್ಞಾವಂತ ನಾಗರಿಕರನ್ನು ನೀಡುವಲ್ಲಿ ದಾಪುಗಾಲಿ ಡುತ್ತಿದೆ. ಈ ಕೇಂದ್ರದಲ್ಲಿ 2014 ಶೈಕ್ಷಣಿಕ ವರ್ಷದಲ್ಲಿ 10 ವಿಭಾಗಗಳು ಇದ್ದು, ಈಗಾಗಲೇ ಜೀವರಸಾಯನ ಶಾಸ್ತ್ರ (ಎಂ.ಎಸ್ಸಿ) ಸೂಕ್ಷ್ಮಾಣು ಜೀವಶಾಸ್ತ್ರ (ಎಂ.ಎಸ್ಸಿ), ವಾಣಿಜ್ಯ (ಎಂ.ಕಾಂ), ಕನ್ನಡ (ಎಂ.ಎ) ಇತಿಹಾಸ (ಎಂ.ಎ) ರಾಜ್ಯಶಾಸ್ತ್ರ (ಎಂ.ಎ) ಸಮಾಜ ಕಾರ್ಯ (ಎಂ.ಎಸ್.ಡಬ್ಲ್ಯೂ), ಸ್ನಾತಕೋತ್ತರ ಪದವಿ ತರಗತಿಗಳನ್ನು ಹೊಂದಿದೆ. ಈ 2018ರ ಶೈಕ್ಷಣಿಕ ವರ್ಷದಲ್ಲಿ ಎಂ.ಎಸ್ಸಿ ಕಂಪ್ಯೂಟರ್‍ಸೈನ್ಸ್, ಎಂ.ಎಸ್ಸಿ ಪತ್ರಿಕೋದ್ಯಮ, ಎಂ.ಎಸ್ಸಿ ಪರಿಸರ ಸಂಬಂಧಪಟ್ಟ ವಿಭಾಗಗಳು ಪ್ರಾರಂಭಗೊಂಡಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಪದವಿ ತರಗತಿಗಳು ಆರಂಭಗೊಳ್ಳಲಿವೆ ಎಂದು ಪ್ರಭಾರ ನಿರ್ದೇಶಕ ಪ್ರೊ. ಬಿ.ಹೆಚ್. ಶೇಖರ್ ತಿಳಿಸಿದ್ದಾರೆ.

80 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸ್ನಾತಕೋತ್ತರ ಕೇಂದ್ರದಲ್ಲಿ ಇದೀಗ 500 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸ್ನಾತಕೋತ್ತರ ಕೇಂದ್ರಕ್ಕೆ ಸೇರಿದ ಎರಡು ವಿದ್ಯಾರ್ಥಿ ನಿಲಯಗಳಲ್ಲಿ ಒಂದು ಪುರುಷರಿಗೆ ಮತ್ತೊಂದು ಮಹಿಳಾ ವಿದ್ಯಾರ್ಥಿಗಳಿಗೆ ಬಳಸಲಾಗುತ್ತಿತ್ತು. ಇದೀಗ 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರೆ ಇರುವದರಿಂದ ಈ ಎರಡು ವಿದ್ಯಾರ್ಥಿ ನಿಲಯಗಳು ಮಹಿಳಾ ವಿದ್ಯಾರ್ಥಿಗಳಿಗೆ ಬಳಕೆಯಾಗುತ್ತಿದೆ. ಕೂಡಿಗೆಯ ಡಯಟ್ ಕೇಂದ್ರದಲ್ಲಿದ್ದ ವಿದ್ಯಾರ್ಥಿ ನಿಲಯವನ್ನು 100 ಪುರುಷ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ಇನ್ನುಳಿದ ಸ್ಥಳೀಯ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಬಂದು ಶಿಕ್ಷಣ ಪಡೆಯುತ್ತಿದ್ದಾರೆ.

ಇದರ ಜೊತೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಂಗಳೂರು ವಿಶ್ವವಿದ್ಯಾನಿಲಯದಿಂದ 2 ಬಸ್ ವ್ಯವಸ್ಥೆ ಮಾಡಲಾಗಿದೆ. ಕುಶಾಲನಗರದಿಂದ ಸ್ನಾತಕೋತ್ತರ ಕೇಂದ್ರಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೂಡಿಗೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರದಲ್ಲಿ ಅಂತರರಾಷ್ಟ್ರೀಯ (ವಿದೇಶಿ) ವಿದ್ಯಾರ್ಥಿಗಳು ಸಂಶೋಧನ ಅಧ್ಯಯನದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗೆಯೆ ಇತ್ತೀಚೆಗೆ ಕೇಂದ್ರದಲ್ಲಿ ನಡೆದ ಓಪನ್ ಹೌಸ್ ಕಾರ್ಯಕ್ರಮದಂದು ಕಳೆದ ಸಾಲಿಗಿಂತ ಹೆಚ್ಚು ವಿದ್ಯಾರ್ಥಿಗಳು ಅರ್ಜಿಗಳನ್ನು ಸ್ವೀಕರಿಸಿದ್ದಾರೆ.

ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವದಲ್ಲದೆ, ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪದವಿ ವಿದ್ಯಾರ್ಥಿಗಳನ್ನೊಳಗೊಂಡಂತೆ ವಿವಿಧ ಕ್ರೀಡಾಚಟುವಟಿಗಳು, ಸಾಂಸ್ಕøತಿಕ ಚಟುವಟಿಕೆಗಳು, ಆಯಾಯಾ ವಿಭಾಗದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ಧಾ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಓದಿನ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಅವಕಾಶ ಈ ಕೇಂದ್ರದಲ್ಲಿದೆ.

ರಾಜ್ಯ ಸರ್ಕಾರ ಬಿಡುಗಡೆಗೊಳಿಸ ಬೇಕಾಗಿದ್ದ ಹಣವನ್ನು ಆದಷ್ಟು ಬೇಗ ಬಿಡುಗಡೆಗೊಳಿಸಿದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಹಣದ ಜೊತೆಯಲ್ಲಿ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಹಕಾರಿ ಯಾಗುತ್ತದೆ. ಹಾಗೂ ಇದೀಗ 2 ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉದ್ಘಾಟನೆ ಮಾಡಲಾಗುವದು.

ಪ್ರಸ್ತುತ ಮಂಗಳೂರು ವಿಶ್ವವಿದ್ಯಾ ನಿಲಯದ ಪ್ರಬಾರ ಕುಲಪತಿಗಳಾದ ಡಾ. ಸಿ.ಕೆ. ಕಿಶೋರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೇಂದ್ರವು ಉತ್ತಮ ಮಟ್ಟದಲ್ಲಿ ಸಾಗುತ್ತಿದ್ದು, ಅನುಭವಿ ಹಾಗೂ ಉತ್ಸಾಹಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳ ಶ್ರಮದೊಂದಿಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಬಾರ ಕುಲಪತಿಗಳಾದ ಡಾ. ಸಿ.ಕೆ. ಕಿಶೋರ್ ಕುಮಾರ್ ಸುದ್ದಿಗಾರ ರೊಂದಿಗೆ ಮಾತನಾಡಿ, ವಿಶ್ವವಿದ್ಯಾ ನಿಲಯದ ಧನ ಸಹಾಯ ನಿಯಮಾವಳಿಯಾನುಸಾರ ಈ ಕೇಂದ್ರದಲ್ಲಿ ರ್ಯಾಗಿಂಗ್ ವಿರೋಧಿ ಕೋಶ, ಮಹಿಳಾ ಸಂರಕ್ಷಣಾ ಕೋಶ, ಸ್ಪರ್ಷ್ ಕ್ಯಾಂಟೀನ್ ಕಮಿಟಿ, ಮಾನವ ಹಕ್ಕುಗಳ ಕೋಶ, ವಿದ್ಯಾರ್ಥಿ ಕಲ್ಯಾಣ ಕೋಶ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಕೋಶ, ಗ್ರಾಮಗಳ ದತ್ತು ಪಡೆದು ಅಭಿವೃದ್ಧಿ ಯೋಜನೆ ಹಾಗೂ ಗ್ರಾಮಗಳ ಜ್ವಲಂತ ಸಮಸ್ಯೆಗಳನ್ನು ಕ್ರೋಢೀಕರಿಸಿ ಯೋಜನೆ ರೂಪಿಸಿ ಸರ್ಕಾರದ ಗಮನ ಹರಿಯುವಂತೆ ಮಾಡುವದು, ಸ್ವಚ್ಛತಾ ಅಭಿಯಾನ ಹೀಗೆ 10 ಸಮಿತಿಗಳನ್ನು ರಚಿಸಿ, ಜಾಗೃತಿ ಶಿಬಿರಗಳ್ನುಏರ್ಪಡಿಸುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಿದ್ದೇವೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಧುನಿಕ ಸುಸಜ್ಜಿತ ಪ್ರಯೋಗಾಲಯ, ಕ್ಯಾಂಟೀನ್ ಹಾಗೂ ವಾಹನ ಸೌಲಭ್ಯ ಕಲ್ಪಿಸಿ ಕೊಡಲಾಗುತ್ತಿದೆ. ಹಾಗೆಯೇ ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದ್ದು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸ್ನಾತಕೋತ್ತರ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. - ಕೆ.ಕೆ. ನಾಗರಾಜಶೆಟ್ಟಿ