ಸೋಮವಾರಪೇಟೆ, ಜು. 8: ಭಾರತಾಂಭೆಯ ರಕ್ಷಣೆಯ ಜವಾಬ್ದಾರಿ ಹೊತ್ತು ತಮ್ಮ ಯೌವನವನ್ನೇ ದೇಶಕ್ಕಾಗಿ ಮುಡಿಪಾಗಿಡುವ ಯೋಧರ ಸ್ಮರಣೆ, ಯುದ್ಧ ಸೇರಿದಂತೆ ಸೇವೆಯ ಅವಧಿಯಲ್ಲೇ ದೇಶಕ್ಕಾಗಿ ಬಲಿದಾನಿಗಳಾದ ಅಮರ ಜವಾನರ ನೆನಪು, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಅಪ್ರತಿಮ ದೇಶಭಕ್ತ ಸೈನಿಕರಿಗೆ ನಮಿಸುವ ಸದುದ್ದೇಶದಿಂದ ಯೋಧರ ತವರು ಕೊಡಗಿನ ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ನಡೆದ ಯೋಧ ನಮನ ಕಾರ್ಯಕ್ರಮ ಭಾವಸ್ಪರ್ಶಿಯಾಗಿತ್ತು.

ಯೋಧಾಭಿಮಾನಿ ಬಳಗದ ಸಮಾನ ಮನಸ್ಕರ ತಂಡದಿಂದ ಮಂಜಿನ ನಗರಿ ಮಡಿಕೇರಿಯ ಕೊಡವ ಸಮಾಜದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮ ರಾಷ್ಟ್ರಾಭಿಮಾನಿಗಳ ಕಣ್ಣಂಚನ್ನು ತೇವಗೊಳಿಸಿತು.ಯುದ್ಧ ಸೇರಿದಂತೆ ಸೈನಿಕ ಸೇವೆಯಲ್ಲಿದ್ದಾಗಲೇ ಹುತಾತ್ಮರಾದ ಕೊಡಗಿನ 15 ಮಂದಿ ವೀರ ಯೋಧರ ಕುಟುಂಬ ಸದಸ್ಯರು, ಸೇವೆ ಯಲ್ಲಿಯೇ ಉಂಟಾದ ಶತ್ರು ಗಳೊಂದಿಗಿನ

(ಮೊದಲ ಪುಟದಿಂದ) ಕಾಳಗದಲ್ಲಿ ಕೈ, ಕಾಲು, ಕಣ್ಣುಗಳನ್ನು ಕಳೆದುಕೊಂಡು ಬಹು ಅಂಗಾಂಗ ವೈಫಲ್ಯ, ಭಾಗಶಃ ಅಂಗಾಂಗ ವೈಫಲ್ಯಕ್ಕೆ ಒಳಗಾದ ಸೈನಿಕರನ್ನು ಬಳಗದಿಂದ ಸನ್ಮಾನಿಸುವ ಸಂದರ್ಭ ಭಾರತ್ ಮಾತಾ ಕೀ ಜೈ ಎಂಬ ಜಯಘೋಷ ಸಭಾಂಗಣದಲ್ಲಿ ಅನುರಣಿಸಿತು.

ಪುರುಷೋತ್ತಮ್ ಅವರಿಂದ ಮೂಡಿಬಂದ ‘ಓ ನನ್ನ ದೇಶ ಬಾಂಧವರೆ ಕಣ್ಣೀರ ಕಥೆಯನು ಕೇಳಿ..’ ಯೋಧ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ, ಕುಂದಾಪುರದ ಕಲಾವಿದ ಮಹೇಶ್ ಮೂರ್ತಿ ಅವರು ತಮ್ಮ ಕುಂಚದಿಂದ ಸೈನಿಕರು ಹಾಗೂ ಸಮಾಜದ ನಡುವಿನ ವ್ಯತ್ಯಾಸವನ್ನು ಬಿಂಬಿಸುವ ಚಿತ್ರವನ್ನು ಬಿಡಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದರು.

ದೇಶಕ್ಕಾಗಿ ಬಲಿದಾನಿಗಳಾದ ಕೊಡಗಿನ 15 ಮಂದಿ ವೀರ ಸೈನಿಕರ ಕುಟುಂಬ ಸದಸ್ಯರನ್ನು ಬಳಗದ ಸದಸ್ಯರು ಆತ್ಮೀಯತೆಯೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು. ಪತಿಯನ್ನು ಕಳೆದುಕೊಂಡ ಯೋಧನ ಪತ್ನಿ, ಸಹೋದರನನ್ನು ಕಳೆದುಕೊಂಡ ಮನೆಯ ಮಗ, ಮಗನನ್ನು ಕಳೆದುಕೊಂಡ ತಂದೆ, ತಾಯಿಯರನ್ನು ಫಲತಾಂಬೂಲ ನೀಡಿ, ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

1979ರಲ್ಲಿ ನಡೆದ ಕಾಳಗದಲ್ಲಿ ಶತ್ರುಗಳ ಗುಂಡೇಟಿನಿಂದ ಹುತಾತ್ಮರಾದ ಕೊಡಗಿನ ನಾಣಮ್ಮಯ್ಯ, 2001ರಲ್ಲಿ ಕುಪ್ವಾರದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭ ಗುಂಡೇಟಿಗೆ ಬಲಿಯಾದ ರ್ಯಾಂಕ್ ಸಿಪಾಯಿ ಡಿ.ಎಂ. ದೇವಪ್ಪ, 2000 ಇಸವಿಯಲ್ಲಿ ಸೇವೆಯಲ್ಲಿದ್ದಾಗಲೇ ಮಡಿದ ಲ್ಯಾನ್ಸ್ ನಾಯಕ್ ಶಿವರಾಮ್, ಆಪರೇಷನ್ ರಕ್ಷಕ್‍ನಲ್ಲಿ ಭಾಗಿಯಾಗಿದ್ದ ಚಂಗಪ್ಪ, ಆಪರೇಷನ್ ಪರಾಕ್ರಮ್‍ನಲ್ಲಿದ್ದ ಲ್ಯಾನ್ಸ್ ನಾಯಕ್ ಎ.ಎನ್.ಬಿದ್ದಪ್ಪ, 2002ರಲ್ಲಿ ಕಾಶ್ಮೀರದಲ್ಲಿ ಶತ್ರುಗಳು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟದಿಂದ ಮರಣಹೊಂದಿದ ಹವಾಲ್ದಾರ್ ದೇವಯ್ಯ, ಬಂಡಿಪೋರಾದಲ್ಲಿ ಆತಂಕವಾದಿಗಳೊಂದಿಗೆ ಹೋರಾಡುತ್ತಾ ಸಾವನ್ನಪ್ಪಿದ ಕೆ.ಎಸ್. ರವೀಂದ್ರ, 1999ರಲ್ಲಿ ಮರಣ ಹೊಂದಿದ ಲ್ಯಾನ್ಸ್ ನಾಯಕ್ ಶಂಭು ಪಿ.ಎಸ್. ಅವರುಗಳ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು.

ಇದರೊಂದಿಗೆ 2011ರಲ್ಲಿ ಎ.ಕೆ. 47ನಿಂದ ಆಕಸ್ಮಿಕವಾಗಿ ಸಿಡಿದ ಗುಂಡಿಗೆ ಬಲಿಯಾದ ಬಿ.ಎಸ್.ಎಫ್.ನ ಪದ್ಮನಾಭ್, 2000 ಇಸವಿಯಲ್ಲಿ ಗುಜರಾತ್‍ನ ಗಾಂಧಿನಗರದಲ್ಲಿ ಹುತಾತ್ಮರಾದ ಎಂ.ವಿ. ಬಿದ್ದಪ್ಪ, 1974ರಲ್ಲಿ ನಿಧನರಾದ ಸಿಆರ್‍ಪಿಎಫ್‍ನ ಸಿ. ಸೋಮಣ್ಣ, 2004ರ ಆಪರೇಷನ್ ರಕ್ಷಕ್‍ನಲ್ಲಿ ದೇಶಕ್ಕಾಗಿ ಬಲಿದಾನಿಯಾದ ಲ್ಯಾನ್ಸ್ ನಾಯಕ್ ಎಡದಂಟೆ ಪ್ರಭಾಕರ್ ಮಾದಪ್ಪ, 2004ರಲ್ಲಿ ನಾಸಿಕ್ ಪ್ಯಾರಾ ಹ್ಯಾಂಡ್ ಗ್ಲೈಡಿಂಗ್ ಕೋರ್ಸ್ ಸೇವೆ ಸಂದರ್ಭ ಮರಣಹೊಂದಿದ ಡ್ರಿಲ್ ಉಸ್ತಾದ್ ಎನ್.ಜಿ. ಅಶೋಕ್, ಜಮ್ಮು ಕಾಶ್ಮೀರದಲ್ಲಿ 2007ರಲ್ಲಿ ನಿಧನರಾದ ರ್ಯಾಂಕ್ ನಾಯಕ್ ಕನ್ನಿಕಂಡ ತಿಮ್ಮಯ್ಯ ಅವರುಗಳ ಕುಟುಂಬ ಸದಸ್ಯರನ್ನು ಬಳಗದ ವತಿಯಿಂದ ಅಭಿನಂದಿಸಲಾಯಿತು.

ಇದರ ಜತೆಗೆ 1965ರಲ್ಲಿ ನಡೆದ ಕದನದಲ್ಲಿ ಎಡಗಾಲಿಗೆ ಗುಂಡೇಟು ಬಿದ್ದ ಎಂ.ಕೆ. ಅಚ್ಚಯ್ಯ, 1974ರಲ್ಲಿ ನಡೆದ ಅಪಘಾತದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡ ಪಿ.ಯು. ಚಿಣ್ಣಪ್ಪ, 2005ರಲ್ಲಿ ಗನ್‍ಶಾಟ್‍ಗೆ ಒಳಗಾದ ಕೆ.ಎ. ಸುಬ್ಬಯ್ಯ, ಇಂಡೋ ಟಿಬೇಟ್ ಬಾರ್ಡರ್ ಪೊಲೀಸ್ ಫೋರ್ಸ್‍ನ ಕೆ.ಆರ್. ಸುನಿ, ಸಿ.ಆರ್.ಪಿ.ಎಫ್, 6ನೇ ಬೆಟಾಲಿಯನ್‍ನ ಈರಪ್ಪ, ಬಲಗಾಲಿನ ಗಾಯಕ್ಕೆ ಒಳಗಾದ ಸೋಮಯ್ಯ, ಬಿಎಸ್‍ಎಫ್‍ನ ಮಾಜೀ ಇನ್ಸ್‍ಪೆಕ್ಟರ್ ಪುಲಿಯಂಡ ಎಂ. ಚಂಗಪ್ಪ, ಇಂಡೋ ಟಿಬೇಟ್ ಬಾರ್ಡರ್‍ನಲ್ಲಿ ಕಣ್ಣುಗಳ ದೃಷ್ಟಿ ಕಳೆದುಕೊಂಡ ಕೋಚನ ಎಸ್. ಕಾರ್ಯಪ್ಪ, ಕಾರ್ಗಿಲ್ ವಾರ್ ಸಮಯದಲ್ಲಿ ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಗ್ರೆನೇಡ್ ಸಿಡಿದು ಬಲಗಣ್ಣಿನ ದೃಷ್ಟಿ ಕಳೆದುಕೊಂಡ ರಾಜಶೇಖರ್ ಅವರುಗಳನ್ನು ಸನ್ಮಾನಿಸಲಾಯಿತು.

ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿರುವ ಮಾಜೀ ಯೋಧರ ಸಂಘದ ಸದಸ್ಯರುಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನರಲ್ ಕಾರ್ಯಪ್ಪ ಹಾಗೂ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಅತೀ ವಿಶಿಷ್ಟ್ ಸೇವಾ ಮೆಡಲ್ ವೀರಚಕ್ರ ಪುರಸ್ಕøತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ ಉದ್ಘಾಟಿಸಿದರು.ಯಾರಿಗಾಗಿ ನಮ್ಮವರ ಬಲಿದಾನ ಯೋಧ ನಮನ ಕಾರ್ಯಕ್ರಮದ ಬಗ್ಗೆ ಆಧ್ಯಾತ್ಮಿಕ ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ಮತ್ತು ಸಾಫ್ಟ್‍ವೇರ್ ಉದ್ಯೋಗಿ, ಸಾಮಾಜಿಕ ಚಿಂತಕ ಅರ್ಜುನ್ ದೇವಾಲದಕೆರೆ ವಿಚಾರ ಮಂಡಿಸಿ, ಕೊಡಗಿನ ಸೈನಿಕ ಪರಂಪರೆಯ ಗತ ವೈಭವವನ್ನು ಕೊಂಡಾಡಿದರು. ಒಟ್ಟಾರೆ ಸೈನಿಕರ ತವರು ಎಂದೇ ಖ್ಯಾತಿ ಗಳಿಸಿರುವ, ಅಪ್ರತಿಮ ದೇಶಭಕ್ತ ಸೈನಿಕರನ್ನು ಕೊಡುಗೆಯಾಗಿ ನೀಡಿರುವ ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮವಾಗಿ ನಡೆದ ಯೋಧ ನಮನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಸೈನಿಕರ ಕುಟುಂಬಗಳ ಸಮ್ಮಿಲನದೊಂದಿಗೆ ಸೈನಿಕ ಸೇವೆಯನ್ನು ಸ್ಮರಿಸುವ ಸಂದರ್ಭ ಬಹುತೇಕ ಯೋಧಾಭಿಮಾನಿಗಳ ಕಣ್ಣಾಲಿಗಳು ತೇವಗೊಂಡವು.

ಕಾರ್ಯಕ್ರಮದ ನಡು ನಡುವೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಜೈ ಜವಾನ್ ಘೋಷಣೆಗಳು ಮೊಳಗಿದವು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ದೇಶಕ್ಕಾಗಿ ಹುತಾತ್ಮರಾದ ಯೋಧರ ಆತ್ಮಗಳಿಗೆ ಶಾಂತಿಕೋರಿ ಮೌನಾಚರಿಸಲಾಯಿತು. ಯೋಧಾಭಿಮಾನಿ ಬಳಗದ 40ಕ್ಕೂ ಅಧಿಕ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.