ಮಾನ್ಯರೆ, ತಾ. 2.7.2018 ರ ದಿನ ಸಮಯ 11 ಗಂಟೆಗೆ ಮಡಿಕೇರಿ ಜಿಲ್ಲಾ ಕೇಂದ್ರದ ಲೋಕಾಯುಕ್ತ ಅಧಿಕಾರಿಯಾದ ನೆಲ್ಲಮಕ್ಕಡ ಪೂಣಚ್ಚ ಅವರ ಸಿಬ್ಬಂದಿ ವರ್ಗದವರು ಅನೀರಿಕ್ಷಿತವಾಗಿ ವೀರಾಜಪೇಟೆ ತಾಲೂಕು ಕಚೇರಿಗೆ ಭೇಟಿ ನೀಡಿ ಅಲ್ಲಿಯ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗವನ್ನು ತಮ್ಮ ದಿನನಿತ್ಯದ ಕರ್ತವ್ಯದ ಬಗ್ಗೆ ವೀಕ್ಷಿಸಿದರು. ಈ ಸಂದರ್ಭ ಸರ್ವೆ ಕಚೇರಿಯಲ್ಲಿ ಅನೇಕ ಸರ್ವೆ ಸಿಬ್ಬಂದಿಯವರು ಕರ್ತವ್ಯದಲ್ಲಿ ಗೈರು ಹಾಜರಾಗಿ ಇದ್ದದ್ದು ಕಂಡುಬಂತು. ಇದಕ್ಕೆ ಅವರ ಉಸ್ತುವಾರಿ ಅಧಿಕಾರಿಯವರು ಸರಿಯಾದ ಉತ್ತರವನ್ನು ನೀಡದೆ ತಬ್ಬಿಬ್ಬಾಗಿದ್ದು ಕಂಡುಬಂತು. ಕೆಲವರು ಹೊರಗಡೆ ಕರ್ತವ್ಯಕ್ಕೆ ಹೋಗಿದ್ದಾರೆ, ಕೆಲವರು ರಜೆಯಲ್ಲಿ ಇದ್ದಾರೆ ಇತ್ಯಾದಿ ಸಬೂಬು ಹೇಳಿದರು. ಕೆಲವು ಸಿಬ್ಬಂದಿಯವರು ತಡವಾಗಿ ಲಿಖಿತ ರಜೆ ಅರ್ಜಿಯನ್ನು ತಂದು ಹಾಜರುಪಡಿಸಿದರು. 10 ಜನ ಸರ್ವೆಯವರ ಪೈಕಿ ಕೇವಲ 4 ಜನರು ಹಾಜರಿದ್ದುರು ಕಂಡುಬಂತು. ಈ ಬಗ್ಗೆಯೂ ವಿಚಾರಣೆ ನಡೆಸಿದರು. ಅಲ್ಲದೆ ಹಲವು ಕಡತಗಳನ್ನು ತುಂಬಾ ಸಮಯದಿಂದ ಬಾಕಿ ಇಟ್ಟುಕೊಂಡು ಜನರಿಗೆ ತೊಂದರೆ ಕೊಡುತ್ತಾ ಇರುವದಕ್ಕೆ, ಸಮಯಕ್ಕೆ ಸರಿಯಾಗಿ ಕಡತ ವಿಲೇಮಾಡುವಂತೆ ಲೋಕಾಯುಕ್ತ ಅಧಿಕಾರಿ ಪೂಣಚ್ಚ ಅವರು ಸರ್ವೆ ಅಧಿಕಾರಿ ಮರಿಸ್ವಾಮಿಯವರಿಗೆ ಎಚ್ಚರಿಕೆಯನ್ನು ನೀಡಿದರು.

ತಾಲೂಕು ಕಚೇರಿಯ ಸರ್ವೆ ಕಚೇರಿಯಲ್ಲಿ ಅಂದು ಮಂಗಳವಾರ ದಿನ ಕಚೇರಿಗೆ ಆಗಮಿಸಿದ ತುಂಬಾ ಸಾರ್ವಜನಿಕರು ನೆರೆದಿರುವದನ್ನು ಕಂಡು ನಾನು ಕೆಲವು ಅಕ್ಕಪಕ್ಕದ ಜನರನ್ನು ಮಾತನಾಡಿಸಿದಾಗ ತುಂಬಾ ಜನರಿಗೆ ಕಚೇರಿಗೆ 10-15 ಸಾರಿ ಅಲೆದಾಡಿದರೂ ಸಮಯಕ್ಕೆ ಸರಿಯಾಗಿ ಕೆಲಸ ಆಗುತ್ತಿಲ್ಲವೆಂಬದಾಗಿ ಅಳಲನ್ನು ತೋಡಿಕೊಂಡರು. ಹೊರಗಡೆ ಕುಳಿತುಕೊಳ್ಳುವದಕ್ಕೂ ಬೆಂಚು, ಕುರ್ಚಿಗಳಿಲ್ಲದೆ ಅನೇಕ ಪಾಪದ ಮಹಿಳೆಯರು, ವೃದ್ಧರು ನಿಂತು ಆಯಾಸಪಡುತ್ತಿರುವದು ಕಂಡುಬಂತು. ಹೊಸದಾಗಿ ನಿರ್ಮಿಸಿದ ಸರ್ವೆ ಕಚೇರಿಯ ಕೊಠಡಿಗಳು ತುಂಬಾ ಕಿರಿದಾಗಿದ್ದು, ಅಲ್ಲಿ ಜನರು ಒಳಗೆ ನಿಂತುಕೊಳ್ಳುವದಕ್ಕೂ ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ.

ಕುಟ್ಟ, ಶ್ರೀಮಂಗಲ, ಬಿರುನಾಣಿ ಕಡೆಗಳಲ್ಲಿಂದ ಅನೇಕ ಜನರು ದೂರದಿಂದ ಬಂದ ಬಸ್ ಚಾರ್ಜ್ ರೂ. 200 - 300 ಖರ್ಚು ಮಾಡಿಕೊಂಡು ಬಂದು ಕಚೇರಿಯಲ್ಲಿ ಕೆಲಸ ಆಗದೇ ಪರಿತಪಿಸುತ್ತಿದ್ದರು. ಅಲ್ಲದೆ ಅನೇಕ ನಿವೃತ್ತ ಸಿಬ್ಬಂದಿಯವರು ನಿಂತು ಬೇಸತ್ತು ಹೋಗಿರುವದು ಕಂಡುಬಂತು. ಇದನ್ನು ಗಮನಿಸಿದ ನಾನು ಖುದ್ದು ಲೋಕಾಯುಕ್ತ ಅಧಿಕಾರಿಯವರನ್ನು ಕಚೇರಿಯ ಒಳಗೆ ಹೋಗಿ ಭೇಟಿ ನೀಡಿ ಜನರಿಗೆ ಆಗುತ್ತಿರುವ ತೊಂದರೆಯನ್ನು ಮೌಖಿಕವಾಗಿ ಹೇಳಿಕೊಂಡೆ ಹಾಗೂ ವಾರಕ್ಕೆ ಒಂದು ಸಾರಿಯಾದರೂ ತಾವು ಈ ರೀತಿಯ ಅನಿರೀಕ್ಷಿತ ಭೇಟಿಯನ್ನು ತಾಲೂಕು ಕಚೇರಿಗಳಿಗೆ ಭೇಟಿ ನೀಡುತ್ತಿದ್ದರೆ ಅನೇಕ ಜನರಿಗೆ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಬಹುದೆಂಬ ವಿಚಾರವನ್ನು ಅವರ ಗಮನಕ್ಕೆ ತಂದಿರುತ್ತೇನೆ.

ನಾನು ಹಾಗೂ ನನ್ನ ನೆರೆಕರೆಯವರಾದ ಪೊನ್ನಂಪೇಟೆ ಕಾವೇರಿ ಕೂಟದ ಅಧ್ಯಕ್ಷ ಪೆಮ್ಮಂಡ ಪ್ರಸಾದ್, ಮಚ್ಚಿಯಂಡ ದೇವಯ್ಯ (ದಾದ) ಹಾಗೂ ಅಪ್ಪೇಂಗಡ ಸೋಮಯ್ಯ (ಆರ್.ಎಫ್.ಓ. ನಿವೃತ್ತ) ಇವರುಗಳು ನಮ್ಮ ಪೊನ್ನಂಪೇಟೆ ಕಾವೇರಿ ಕೂಟದ ಜಾಗದ ಆರ್.ಟಿ.ಸಿ.ಯ ಬಗ್ಗೆ ತಾಲೂಕು ಕಚೇರಿಗೆ ಕೆಲಸದ ನಿಮಿತ್ತ ಹೋದ ಸಮಯದಲ್ಲಿ ಈ ಘಟನೆಯನ್ನು ವೀಕ್ಷಿಸಿರುವೆವು ಹಾಗೂ ಜನರಿಗೆ ಆಗುವ ತೊಂದರೆಗಳನ್ನು ಲೋಕಾಯುಕ್ತ ಅಧಿಕಾರಿಯವರ ಗಮನಕ್ಕೆ ತಂದೆವು. ಮುಂದೆ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಜನರಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ ಯಾವದೇ ತೊಂದರೆಗಳು ಸಿಬ್ಬಂದಿಯಿಂದ ಆಗದೆ ಸುಗಮ ರೀತಿಯಲ್ಲಿ ಆಗಲಿ ಎಂದು ಆಶಯ.

- ಎ.ಬಿ. ದೇವಯ್ಯ, ನಿವೃತ್ತ ಸಬ್‍ಇನ್ಸ್‍ಪೆಕ್ಟರ್, ಪೊನ್ನಂಪೇಟೆ.

.