ಕಳೆದ ಹಲವಾರು ವರ್ಷಗಳಲ್ಲಿ ಕಾಣದಂತ ವರುಣನ ಆರ್ಭಟವನ್ನು ನಾವು ಈಗ ನೋಡುತ್ತಿದ್ದೇವೆ. ನಿಜವಾದ ಮಳೆಗಾಲ ಎಂದರೆ ಏನು ಎಂಬದನ್ನು ಇಂದು ನಮ್ಮ ನಾಡಿನ ಜನ ಅನುಭವಿಸುತ್ತಿದ್ದಾರೆ! ಮಳೆಯ ಅಬ್ಬರದ ಶಬ್ಧಕ್ಕೆ ಅದೆಷ್ಟೋ ಜನರ ಹೃದಯ ಸ್ತಭ್ದಗೊಂಡಿದೆ! ಪ್ರಕೃತಿ ದೇವತೆಯ ರೌದ್ರ ನರ್ತನದ ಎದುರು ತಲೆಬಾಗಲೇಬೇಕಾದ ಪರಿಸ್ಥಿತಿ ನಮ್ಮದು. ‘ಮಳೆ ಬಂದು, ಮಕ್ಕಳಾಗಿ ಯಾರೂ ಹಾಳಾಗಿಲ್ಲ’ ಎಂಬ ಗಾದೆ ಮಾತೊಂದಿದೆ. ಆದರೆ ಅದು ಎಷ್ಟರಮಟ್ಟಿಗೆ ಈಗಿನ ಸಮಾಜಕ್ಕೆ ಪ್ರಸ್ತುತವೋ ಗೊತ್ತಿಲ್ಲ.

ಈ ವರ್ಷದ ಮಳೆಯಿಂದ ಜೀವ ಹಾನಿಗಳೂ ಹಾಗೂ ನೈಸರ್ಗಿಕ ವಿಕೋಪಗಳು ಹೆಚ್ಚು ರಸ್ತೆಗಳ ಕಥೆ ಹೇಳುವದೇ ಬೇಡ. ಮಳೆಯಿಂದಾಗಿ ಹದಗೆಟ್ಟ ರಸ್ತೆಗಳೋ? ಇಲ್ಲಾ ಕಳಪೆ ಗುಣ ಮಟ್ಟದ ಕಾಮಗಾರಿ ಯಿಂದಲೋ? ತಿಳಿಯುತ್ತಿಲ್ಲಾ. ಬಹುಶಃ ಈಗಿನ ಗುತ್ತಿಗೆದಾರರು ಒಂದು ರೀತಿಯ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ರಸ್ತೆಯ ಡಾಂಬರೀಕರಣ ಮಾಡಿರಬಹುದು. ಏಕೆಂದರೆ ರಸ್ತೆಗಳ ಉದ್ದಗಲಕ್ಕೂ ಗುಂಡಿಗಳು! ಈ ರೀತಿಯ ಗುಂಡಿಗಳು ಇರುವದರಿಂದ ಅದರಲ್ಲಿರುವ ನೀತು ಇಂಗಿ ಭೂಮಿಯೊಳಗೆ ಸೇರಿ ನದಿ-ತೊರೆಗಳ ಹರಿಯುವಿಕೆಯನ್ನು ಹೆಚ್ಚು ಮಾಡಿ ಕನ್ನಂಬಾಡಿ ಕಟ್ಟೆ ತುಂಬಿ ‘ಕಾವೇರಿ’ ಗಲಾಟೆಯನ್ನು ತಡೆಗಟ್ಟುವ ಉದ್ದೇಶವಿರಬಹುದು! ಇಲ್ಲಾ ಸಂಬಂಧಪಟ್ಟ ಗುತ್ತಿಗೆದಾರರಿಗೆ ಪೂರೈಸಿದ ‘ಡಾಂಬರು’ 2015ನೇ ಇಸವಿಯದ್ದಿರಬಹುದು! ಇನ್ನೂ ಕೊಡಗಿನ ಮುಖ್ಯ ರಸ್ತೆಗಳ (ಅಂತರರಾಜ್ಯ ಹಾಗೂ ಅಂತರ ಜಿಲ್ಲೆ) ನಡುವೆ ಇದ್ದಂತಹ ಸೇತುವೆಗಳನ್ನು ಕೆಡವಿ ಹಾಕಿ ಮಳೆಗಾಲದ ಪ್ರಾರಂಭದಲ್ಲಿ ಹೊಸ ಕಾಮಗಾರಿ ಪ್ರಾರಂಭಸಿದರ ಮಹತ್ವ ಏನಿರಬಹುದು? ಮಳೆಗಾಲದಲ್ಲಿ ಕಾಂಕ್ರಿಟ್ ಚೆನ್ನಾಗಿ ನೀರು ಕುಡಿದು ಬಲಿಷ್ಟಗೊಂಡು ಯಾವದೇ ಭಾರೀ ವಾಹನಕ್ಕೂ ಜಗ್ಗದೇ ಇರಲೆಂದು ಇರಬಹುದೇ? ಈ ರೀತಿಯ ಅವೈಜ್ಞಾನಿಕ ಮುಂದಾಲೋಚನೆ ಗಳಿಲ್ಲದ ಮಂದ ಬುದ್ಧಿಯ ಅಧಿಕಾರಿಗಳಿಗೆ ಏನಾಗಿದೆಯೋ ಗೊತ್ತಿಲ್ಲ.

ಮೈಸೂರು ಜಿಲ್ಲೆಗೆ ಹೋಗುವ ದಾರಿ ಮಧ್ಯೆ ತಿತಿಮತಿಯಲ್ಲಿ ಹೊಸ ಸೇತುವೆ ಕಾಮಗಾರಿ ನಡೆಸುವ ಸಂದರ್ಭ ತಾತ್ಕಾಲಿಕ ಸೇತುವೆಯನ್ನು ಬೇಕು ಬೇಡ ಎಂದು ನಿರ್ಮಿಸಿದ ಕಾರಣ ಸೇತುವೆ ಕೊಚ್ಚಿಕೊಂಡು ಹೋಗಿದ್ದಲ್ಲದೇ ಎಲ್ಲಾ ಭಾರೀ ವಾಹನಗಳು ಜಿಲ್ಲೆಯ ನಾನಾ ಗ್ರಾಮೀಣ ರಸ್ತೆಗಳಲ್ಲಿ ಓಡಾಡು ವಂತಾಗಿದೆ.

ಮಳೆಗಾಲ ಮುಗಿಯುವ ದರೊಳಗೆ ಆ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗುವದರಲ್ಲಿ ಸಂಶಯವಿಲ್ಲ! ಇದರಿಂದ ಗುತ್ತಿಗೆದಾರರಿಗೆ, ಲೋಕೋಪಯೋಗಿ ಅಧಿಕಾರಿಗಳಿಗೆ ಇನ್ನಷ್ಟು ಅನುಕೂಲವೇ ಸರಿ. ‘ಹುಚ್ಚ್ ಮುಂಡೆ ಮಗನ್ ಮದುವೇಲಿ ಉಂಡೋನೇ ಜಾಣ’. ರಸ್ತೆಗಳು ಹಾಳಾದಷ್ಟು ಅನುದಾನದ ಮೊತ್ತವೂ ಹೆಚ್ಚಾಗುತ್ತದೆ. ಹಾಗೆಯೇ ಶೇಕಡಾವಾರು ಕಮಿಷನ್ ಕೂಡ ಹೆಚ್ಚಾಗುತ್ತದೆ. ಕಾಮಗಾರಿಯ ಗುಣಮಟ್ಟಗಳು ಮಾತ್ರ ಕುಸಿಯುತ್ತಲೇ ಇರುತ್ತವೆ. ಸಾಮಾನ್ಯ ಜನರು ಎಲ್ಲಿಯತನಕ ಇಂತಹವದನ್ನು ಪ್ರಶ್ನಿಸುವದಿಲ್ಲವೋ ಅಲ್ಲಿಯತನಕ ಕಳಪೆ ಕಾಮಗಾರಿ ನಿಲ್ಲುವದಿಲ್ಲ. ಜೂನ್ 5 ಕ್ಕೆ ವಿಶ್ವ ಪರಿಸರ ದಿನ, ಇದರ ಅಂಗವಾಗಿ ವಿಶ್ವದೆಲ್ಲೆಡೆ ಕಾರ್ಯಕ್ರಮಗಳು ನಮ್ಮಲ್ಲೂ ಅಧಿಕೃತ ಸರಕಾರಿ ಕಾರ್ಯಕ್ರಮಗಳು ನಡೆದವು. ಗಿಡ ನೆಟ್ಟು ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು, ಮರು ದಿನ ಪತ್ರಿಕೆಗಳಲ್ಲಿ ತುಂಬಾ ಬರೀ ಸಸಿಗಳದ್ದೇ ಕಾರುಬಾರು. ಹಸಿರು ಬೆಳೆಸಿ ಎಂಬ ಹೆಸರಿಗೋಸ್ಕರ ಕಾರ್ಯಕ್ರಮಗಳು! ಇದರ ಜೊತೆಯಲ್ಲೇ ಇನ್ನೊಂದೆಡೆ ಯಾವದೇ ಪತ್ರಿಕೆಗಳಲ್ಲೂ ಕಾಣದ ಚಿತ್ರಣ ಜಿಲ್ಲಾದ್ಯಂತ ಮರದ ದಿಮ್ಮಿಗಳನ್ನು ಪಕ್ಕದ ರಾಜ್ಯಕ್ಕೆ ಹೊತ್ತೊಯ್ಯುತ್ತಿರುವ ಭಾರೀ ಲಾರಿಗಳು, ಮಿತಿಮೀರಿದ ಭಾರದ ಜೊತೆಗೆ ಅಡ್ಡಾದಿಡ್ಡಿ ಚಲಿಸುವ ವಾಹನಗಳು.

ಮೊದಲೇ ಮಳೆಯ ಅಬ್ಬರಕ್ಕೆ ಸೋತು ಸೊರಗಿದ ಗ್ರಾಮೀಣ ರಸ್ತೆಗಳು ಅಪಾರ ತೂಕದ ಮರದ ದಿಮ್ಮಿಗಳ ಲಾರಿಗಳ ಭಾರವನ್ನು ಸಹಿಸಲಾಗದೇ ಕುಸಿಯ ತೊಡಗಿವೆ! ಅಷ್ಟಕ್ಕೂ ಜಿಲ್ಲೆಯ ರಸ್ತೆಗಳನ್ನು ಹಾಗೂ ಪರಿಸರವನ್ನು ರಕ್ಷಿಸುವ ಕಾಳಜಿ ಜಿಲ್ಲಾಡಳಿತಕ್ಕೆ ಇದ್ದರೆ ಜೂನ್ ತಿಂಗಳಿಂದ ಆಗಸ್ಟ್ ತಿಂಗಳ ಅಂತ್ಯದವರೆಗೆ ಜಿಲ್ಲೆಯಲ್ಲಿ ಮರ ಕಡಿತ ಹಾಗೂ ಸಾಗಾಟವನ್ನು ನಿಲ್ಲಿಸಬಹು ದಲ್ಲವೇ? ಇನ್ನೊಂದೆಡೆ ಅಕ್ರಮ ಮರಳು ಗಣಿಗಾರಿಕೆಯಿಂದ ನದಿಗಳ ಚಿತ್ರಣವೇ ಬದಲಾಗುತ್ತಿದೆ.

ಭೂ ಕುಸಿತಗಳು ಹೆಚ್ಚಾಗಿ ನದಿ ತಟದ ಮರಗಳು ಉರುಳುತ್ತಿವೆ. ಈ ರೀತಿ ಉರುಳಿದ ಮರ-ಗಿಡಗಳು ಅಕ್ಕಪಕ್ಕದ ಸೇತುವೆಗಳ ಕಂಬಗಳಿಗೆ ಸಿಲುಕಿಕೊಂಡು ನೀರು ಸೇತುವೆಯ ಅಡಿಪಾಯವನ್ನು ಕೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಗಳ ಪಕ್ಕದ ಮರದ ಎಲೆಗಳು ಹಾಗೂ ರೆಂಬೆಗಳಿಂದ ಬೀಳುವ ನೀರು ರಸ್ತೆಯನ್ನು ಹಾಳು ಮಾಡುತ್ತದೆ ಎಂಬ ಯಾವನೋ ಅವಿವೇಕಿಯ ಸಿದ್ಧಾಂತ ವನ್ನು ಅವೈಜ್ಞಾನಿಕವಾಗಿ ಬಳಸಿ ಕೊಂಡು ಮಡಿಕೇರಿಯಿಂದ ಕುಟ್ಟದ ವರೆಗೆ ಇದ್ದ ನೂರಾರು ವರ್ಷ ಹಳೆಯ ಹಲಸಿನ ಮರಗಳನ್ನು ಧರೆಗೆ ಉರುಳಿಸಿ ರಸ್ತೆಗಳನ್ನು ಹಾಳು ಮಾಡುದ್ದಲ್ಲದೇ ನುಂಗಣ್ಣರು ಮರದ ದಿಮ್ಮಿಗಳನ್ನು ತಿಂದು ತೇಗಿದರು. ನಮ್ಮ ಅಜ್ಜಂದಿರ ಕಾಲದಿಂದಲೂ ಸುರಿಯುತ್ತಿದ್ದ ಭಾರೀ ಮಳೆ - ಗಾಳಿಗಳಿಗೆ ಹಾಳಾಗದ ರಸ್ತೆಗಳು ಈಗ ಕೇವಲ ಒಂದೆರಡು ಬಿರುಸಿನ ಮಳೆಗೆ ಕೊಚ್ಚಿ ಹೋಗಲು ಕಾರಣವೇನು?

ಅನುದಾನುಗಳು ಅದೆಷ್ಟೋ ಕೋಟಿಗಳಲ್ಲಿ ಬಂದರೂ ಅದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿ ದೃಢವಾದ, ಬಲಿಷ್ಠವಾದ ಕಾಮಗಾರಿ ನಡೆಸುವವರು ಯಾರು? ಯಾವದೇ ಗುತ್ತಿಗೆದಾರರನ್ನು ಕೇಳಿದರೂ ನಮ್ಮ ಇಲಾಖೆಯಲ್ಲಿ ಕಮಿಷನ್ ಇಲ್ಲದೇ ಯಾವದೇ ಬಿಲ್ ಪಾಸಾಗುವದಿಲ್ಲ ಎಂಬ ಮಾತು ಕೇಳಿ ಬರುತ್ತದೆ. ಈ ಕಮಿಷನ್ ಹೋಗುವದಾದರೂ ಎಲ್ಲಿಗೆ? ಯಾರಿಗೆ? ಏತಕ್ಕಾಗಿ? ಜಿಲ್ಲಾಡಳಿತ ಹಾಗೂ ಜನಪ್ರತಿನಿ ಧಿಗಳು ಇನ್ನಾದರೂ ಕೋಟಿಗಟ್ಟಲೇ ಬರುವ ಅನುದಾನಗಳು ಲೂಟಿ ಯಾಗದ ರೀತಿ ನೋಡಿಕೊಂಡರೆ ಎಲ್ಲವೂ ಕ್ಷೇಮ. ಇದರ ಜೊತೆಯಲ್ಲೇ ಜನಸಾಮಾನ್ಯ ಎಚ್ಚೆತ್ತುಕೊಂಡರೆ ಇನ್ನಷ್ಟು ಒಳ್ಳೆಯದು. ಮಳೆಗೆ ಹಿಡಿಶಾಪ ಹಾಕುವ ಬದಲು ನಮ್ಮ ಬುದ್ಧಿಗೆ ಬಿಸಿ ಮುಟ್ಟಿಸಬೇಕು.

- ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ.