ಮಡಿಕೇರಿ, ಜು. 8: ಯೂರೋಪ್‍ನ ಫಿನ್‍ಲ್ಯಾಂಡ್‍ನಲ್ಲಿ ತಾ. 17 ರವರೆಗೆ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್‍ಗೆ ಕೊಡಗಿನ ಯುವ ಅಥ್ಲೇಟ್ ಕಾಕೇರ ಪ್ರಜ್ವಲ್ ಮಂದಣ್ಣ ಸ್ಥಾನ ಪಡೆದಿದ್ದಾರೆ.

ಪೊನ್ನಂಪೇಟೆ ಸನಿಹದ ಮತ್ತೂರಿನ ನಿವಾಸಿ ಕಾಕೇರ ರವಿ ಹಾಗೂ ತಾರಾ ದಂಪತಿಯ ಪುತ್ರ ಪ್ರಜ್ವಲ್ ಮಂದಣ್ಣ ಪ್ರಸ್ತುತ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದು, ಕ್ರೀಡಾ ಸಾಧನೆಯ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 21 ಪುರುಷರು ಹಾಗೂ 19 ಮಹಿಳಾ ಸ್ಪರ್ಧಿಗಳನ್ನು ಒಳಗೊಂಡ ಭಾರತ ಅಥ್ಲೆಟಿಕ್ಸ್ ತಂಡದಲ್ಲಿ ಪ್ರಜ್ವಲ್ 4x100 ಮೀಟರ್ ರಿಲೇಯಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ. 2018 ರ ಮೇ ತಿಂಗಳಲ್ಲಿ ಶ್ರೀಲಂಕಾದಲ್ಲಿ ಜರುಗಿದ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್‍ನಲ್ಲಿ 100 ಮೀಟರ್ ಓಟ ಹಾಗೂ 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನಗಳಿಸಿದ್ದರು. ಈ ಮೂಲಕ ಜಪಾನ್‍ನಲ್ಲಿ ಜೂನ್‍ನಲ್ಲಿ ನಡೆದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದ ಪ್ರಜ್ವಲ್ ಅವರನ್ನು ಒಳಗೊಂಡ ತಂಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕಗಳಿಸಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್‍ಗೆ ಅರ್ಹತೆ ಪಡೆದಿದೆ. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೊನ್ನಂಪೇಟೆಯ ಸಂತ ಅಂಥೋಣಿ ಶಾಲೆಯಲ್ಲಿ ಪೂರೈಸಿದ್ದಾರೆ.