ಮಡಿಕೇರಿ, ಜು. 8: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಂಗಡ ಪತ್ರ ಮಂಡಿಸುವದರೊಂದಿಗೆ, ರೈತರ ಸಾಲ ಮನ್ನಾ ಸೇರಿದಂತೆ ಕೆಲವು ಯೋಜನೆಗಳನ್ನು ಘೋಷಿಸುವ ಮೂಲಕ ರಾಜ್ಯದ ಜನತೆಗೆ ಒಂದು ರೀತಿ ಮನರಂಜನೆ ನೀಡಿದ್ದಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.
‘ಶಕ್ತಿ’ಯೊಂದಿಗೆ ಮೇಲಿನಂತೆ ವ್ಯಂಗ್ಯವಾಡಿದ ಅವರು, ಮುಖ್ಯಮಂತ್ರಿಗಳು ಓರ್ವ ಸಿನಿಮಾ ನಿರ್ಮಾಪಕರಾಗಿರುವ ಹಿನ್ನೆಲೆ, ಮುಂಗಡಪತ್ರದೊಂದಿಗೆ ರಾಜ್ಯದ ಜನತೆಗೆ ಕನಿಷ್ಟ ಮೂರು ತಿಂಗಳು ಮನರಂಜನೆ ನೀಡಿಯಾರು ಎಂದು ವ್ಯಂಗ್ಯವಾಡಿದರು. ಅಲ್ಲದೆ ರೈತರ ಸಾಲಮನ್ನಾ ಸಂಬಂಧ ಕರ್ನಾಟಕ ಸರಕಾರದ ಮಾರ್ಗಸೂಚಿಯನ್ನು, ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.
ಸರಕಾರದ ಸಾಲ ಮನ್ನಾ ಮಾರ್ಗಸೂಚಿ ಈ ಕೆಳಕಂಡಂತಿದೆ;
ರೈತರ ಕೃಷಿ ಸಾಲ ಮನ್ನಾ ಯೋಜನೆಗೆ ಮಾರ್ಗಸೂಚಿಗಳು-2018
ಇತ್ತೀಚಿನ ದಿನಗಳಲ್ಲಿ ಸತತ ಬರಗಾಲದಂತಹ ಅನೇಕ ಸವಾಲುಗಳು ಕೃಷಿ ವಲಯದಲ್ಲಿ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಿವೆ. ಈ ತೊಂದರೆಗೀಡಾದ ರೈತರನ್ನು ಅಭಿವೃದ್ಧಿಯ ಮುಖ್ಯ ವಾಹಿನಿಗೆ ತರುವದು, ಅವರನ್ನು ಸಾಲದ ಬಲೆಯಿಂದ ಮುಕ್ತಗೊಳಿಸುವದು ಕರ್ನಾಟಕ ಸರ್ಕಾರದ ಪ್ರಾಥಮಿಕ ಬದ್ಧತೆಯಾಗಿದೆ ಮತ್ತು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ.
ಈ ಉದ್ದೇಶವನ್ನು ಪೂರೈಸಲು ಕರ್ನಾಟಕ ಸರ್ಕಾರವು ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಸಾಲ ಮನ್ನಾ ಯೋಜನೆಯನ್ನು ಘೋಷಿಸುತ್ತಿದೆ. ಇದು ಕೃಷಿಯಲ್ಲಿ ಹೊಸ ಹೂಡಿಕೆ ಮಾಡಲು ಮತ್ತು ರೈತರನ್ನು ಉತ್ತೇಜಿಸುವದರ ಜೊತೆಗೆ ಸಹಿಷ್ಣುತೆ, ಉನ್ನತೀಕರಣ ಮತ್ತು ಸಬಲೀಕರಣವನ್ನು ಖಾತ್ರಿಪಡಿಸುತ್ತದೆ.
ಬರಗಾಲದಿಂದ ಸಂಕಷ್ಟ ದಲ್ಲಿರುವ ರೈತರ ನೆರವಿಗೆ ಸರ್ಕಾರವು ಸ್ಪಂದಿಸಿದ್ದು, 2017-18ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳಲ್ಲಿ ದಿ. 20.6.2017ರಂದು ರೈತರಿಂದ ಹೊರಬಾಕಿ ಹೊಂದಿದ ಬೆಳೆ ಸಾಲದಲ್ಲಿ ರೂ. 50,000.00 ರವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ಇದರಿಂದ 22,27,506 ರೈತರಿಗೆ ಒಟ್ಟು ರೂ. 8165.00 ಕೋಟಿಗಳ ಸಾಲ ಮನ್ನಾ ಪ್ರಯೋಜನವಾಗಿದೆ.
2017-18ನೇ ಸಾಲಿನಲ್ಲಿ 12.80 ಲಕ್ಷ ರೈತರಿಗೆ ರೂ. 4971.99 ಕೋಟಿಗಳ ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲಾಗಿದೆ.
ಬೆಳೆ ಸಾಲ ಮನ್ನಾ ಯೋಜನೆ -2018
ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ರೈತರ ಪ್ರತಿ ಕುಟುಂಬಕ್ಕೆ ಗರಿಷ್ಠ ರೂ. 2 ಲಕ್ಷದವರೆಗೆ ಸುಸ್ತಿ ಸಾಲಗಳಿಗೆ ವಿನಾಯಿತಿಯನ್ನು ಒದಗಿಸುತ್ತದೆ (ಕುಟುಂಬವೆಂದರೆ ರೈತ, ಆತನ ಪತ್ನಿ ಮತ್ತು ಅವಲಂಬಿತ ಮಕ್ಕಳು). 01.04.2009ರ ನಂತರ ತೆಗೆದುಕೊಂಡ ಮತ್ತು 31.12.2017ರಂದು ಬಾಕಿಯಿರುವ ಅವಧಿ ಮೀರಿದ ಬೆಳೆ ಸಾಲಗಳು, ಮರು ವರ್ಗೀಕರಣ ಮಾಡಲಾದ ಬೆಳೆ ಸಾಲಗಳು ಮತ್ತು ಎನ್‍ಪಿಎ ಬೆಳೆ ಸಾಲಗಳಿಗೆ ಈ ಯೋಜನೆ ಅನ್ವಯವಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಹಿಂದಿನ ಸಾಲಿನ ಕೃಷಿಸಾಲ ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸಿದ ರೈತರಿಗೆ ರೂ. 25,000/- ಅಥವಾ ಮರು ಪಾವತಿಸಿದ ಸಾಲಕ್ಕೆ ಸಮನಾದ ಮೊತ್ತ ಇವೆರಡರಲ್ಲಿ ಯಾವದು ಕಡಿಮೆಯೋ ಅದನ್ನು ಪ್ರೋತ್ಸಾಹ ಧನವಾಗಿ ನೀಡಲಾಗುವದು. ಸಹಕಾರ ಸಂಘಗಳ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಈಗಾಗಲೇ ಪಡೆದುಕೊಂಡಿರುವ ರೈತರು, ಈ ಯೋಜನೆಯ ಪ್ರಯೋಜನ ದೊರೆಯುವದಿಲ್ಲ.
ಬೆಳೆಗಳನ್ನು ಬೆಳೆಯಲು ನೀಡಿದ ಬೆಳೆಸಾಲ ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮತ್ತು ಗರಿಷ್ಟ 12ರಿಂದ 18 ತಿಂಗಳಲ್ಲಿ ಮರುಪಾವತಿಸುವ ಸಾಲವನ್ನು ಬೆಳೆಸಾಲ ಎಂದು ಅರ್ಥೈಸಲಾಗುವದು. ಇದು ಪ್ಲಾಂಟೇಶನ್ ಮತ್ತು ತೋಟಗಾರಿಕೆಯ ಬೆಳೆಗಳಿಗೆ ನೀಡಿದ ಬೆಳೆ ಸಾಲವನ್ನು ಒಳಗೊಂಡಿರುತ್ತದೆ.
ಯೋಜನೆ ಅಡಿಯಲ್ಲಿ ಬರುವ ಸಂಸ್ಥೆಗಳು
ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರ ಕ್ರೆಡಿಟ್ ಸೊಸೈಟಿಗಳು/ ರೈತರ ಸೇವೆ ಸಹಕಾರ ಸಂಘಗಳಿಂದ ಪಡೆದಿರುವ ಬೆಳೆ ಸಾಲಗಳು/ ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ಸಾಲಗಳು ಯೋಜನೆ ಯಡಿಯಲ್ಲಿ ಅರ್ಹತೆ ಪಡೆದಿರುತ್ತವೆ.
ಅರ್ಹ ಮೊತ್ತ ಮತ್ತು ಯೋಜನೆಯ ಅವಧಿ
ದಿನಾಂಕ 31.12.2017ರ ಅಂತ್ಯಕ್ಕೆ ಬ್ಯಾಂಕ್ ದಾಖಲೆಗಳಲ್ಲಿ ಬಾಕಿ ಇದ್ದ ಸಾಲ ಅಥವಾ ಒಂದು ಕುಟುಂಬಕ್ಕೆ ರೂ. 2 ಲಕ್ಷ ಇವೆರಡರಲ್ಲಿ ಕಡಿಮೆಯಿರುವ ಮೊತ್ತವು ಸಾಲ ಮನ್ನಾ ಮಾಡುವ ಗರಿಷ್ಠ ಮೊತ್ತವಾಗಿರುತ್ತದೆ.
ಯೋಜನೆಯ ಅಂದಾಜು ಫಲಾನುಭವಿಗಳು
ಸಾರ್ವಜನಿಕ ವಲಯ ಬ್ಯಾಂಕುಗಳು, ಖಾಸಗಿ ವಲಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ವಲಯಗಳೊಂದಿಗೆ ಬೆಳೆ ಸಾಲಗಳನ್ನು ಹೊಂದಿರುವ ರೈತರ ಒಟ್ಟು ಸಾಲವು ರೂ. 55,328 ಕೋಟಿಗಳೆಂದು ಅಂದಾಜಿಸಲಾಗಿದೆ. ಸಾಲ ಮನ್ನಾ ಯೋಜನೆಯಡಿಯಲ್ಲಿ ರೈತರ ಸುಸ್ತಿಯಿರುವ ಒಟ್ಟು ಸಾಲಗಳ ಸಂಖ್ಯೆ 17.32 ಲಕ್ಷಗಳು ಎಂದು ಅಂದಾಜಿಸಲಾಗಿದ್ದು, ಇದರ ಸಾಲ ಮೊತ್ತವು ರೂ. 30,266 ಕೋಟಿಗಳಾಗಿರುತ್ತವೆ. ಚಾಲ್ತಿ ಸಾಲಗಳನ್ನು ಹೊಂದಿದ 27.67 ಲಕ್ಷ ಸಾಲಗಾರರು ಮತ್ತು ತಮ್ಮ ಹಿಂದಿನ ಬೆಳೆ ಸಾಲವನ್ನು ಮರುಪಾವತಿ ಮಾಡಿದ ರೈತರಿಗೆ ರೂ. 6,893 ಕೋಟಿವರೆಗೆ ಪ್ರೋತ್ಸಾಹ ಧನ ನೀಡಲಾಗುವದು. ರೈತರ 44.89 ಲಕ್ಷ ಸಾಲ ಖಾತೆಗಳಿಗೆ, ಸಂಚಿತವಾಗಿ ರೂ.37,159/- ಕೋಟಿಗಳಷ್ಟು ಪ್ರಯೋಜನವಾಗುವ ಅಂದಾಜಿದೆ.
ಸೂಚನೆ: 1) ಅಂದಾಜು ಮೊತ್ತ ಸಹಕಾರ ವಲಯದ ಸಾಲಗಳನ್ನು ಒಳಗೊಂಡಿದೆ ಮತ್ತು ಅನುಷ್ಟಾನದ ಸಮಯದಲ್ಲಿ ವೈಯಕ್ತಿಕ ಖಾತೆಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ.
*ಎನ್‍ಪಿಎ: ಸಾಲಗಳು ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ ಬೆಳೆ ಸಾಲಗಳು
* ರಿಸ್ಟ್ರಕ್ಚರ್ಡ್ ಸಾಲಗಳು ಮರು ವರ್ಗೀಕರಿಸಿದ ಸಾಲಗಳು: ಹೆಚ್ಚು ವರ್ಷಗಳಿಗೂ ಅವಧಿ ಬೆಳೆ ಸಾಲಗಳು ಬರಗಾಲ ಪೀಡಿತ ಪ್ರದೇಶಗಳಲ್ಲಿ ಅವಧಿ ಮೀರಿದ ಮರುವರ್ಗೀಕರಿಸಿದ ಬೆಳೆ ಸಾಲಗಳು
2) ಅವಧಿ ಮೀರಿದ ಸಾಲಗಳು: ಒಂದು ವರ್ಷಕ್ಕಿಂತ ಕಡಿಮೆ ಅವಧಿ ಮೀರಿದ ಬೆಳೆ ಸಾಲಗಳು.
ಯೋಜನೆಯಲ್ಲಿ ಒಳಪಡದ ವರ್ಗಗಳು
ಈ ಯೋಜನೆಯಲ್ಲಿ ಕೆಳಗಿನವುಗಳು ಅರ್ಹವಾಗಿರುವದಿಲ್ಲ:-
1. ವೈಯಕ್ತಿಕ ರೈತ/ ಹಿಂದೂ ಅವಿಭಾಜ್ಯ ಕುಟುಂಬಗಳನ್ನು ಹೊರತುಪಡಿಸಿ ಎಲ್ಲಾ ಕಾನೂನುಬದ್ಧ ಸಂಸ್ಥೆಗಳು.
2. ರೈತರಿಗೆ ನೀಡಲಾದ ಒಡವೆ / ಆಭರಣದ ಸಾಲಗಳು.
3. ಟ್ರಸ್ಟ್‍ಗಳು, ಪಾಲುದಾರಿಕೆ ಗಳು, ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಟ್ / ನಗರ ಸಹಕಾರ ಬ್ಯಾಂಕುಗಳಿಂದ ನೀಡಲಾದ ಸಾಲಗಳು.
4. ರೂ. 4 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಆದಾಯ ತೆರಿಗೆ ಪಾವತಿದಾರರು ಪಡೆದ ಬೆಳೆ ಸಾಲಗಳು.
5. ವಾಹನಗಳ ಖರೀದಿಗಾಗಿ ಮತ್ತಿತರ ಆದ್ಯತೆಯಲ್ಲದ ಸಾಲಗಳು.
6. ಕೃಷಿ ಉತ್ಪನ್ನಗಳನ್ನು ಅಡವಿಟ್ಟುಕೊಂಡು ನೀಡಿರುವ ಸಾಲಗಳು.
7. ಕೇಂದ್ರ ಸರಕಾರದ ನೌಕರರಿಗೆ/ ಕರ್ನಾಟಕ ಸರ್ಕಾರದ ಉದ್ಯೋಗಿಗಳಿಗೆ ಅಥವಾ ಅದರ ಅಂಗಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯದ ಬ್ಯಾಂಕ್, ಶೈಕ್ಷಣಿಕ ಸಂಸ್ಥೆಗಳ ಉದ್ಯೋಗಿಗಳಿಗೆ ನೀಡಿದ ಸಾಲಗಳು.
8.
9. ಸ್ವಸಹಾಯ ಗುಂಪುಗಳು (ಎಸ್.ಹೆಚ್.ಜಿ.ಗಳು) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು ಪಡೆದ ಸಾಲಗಳು.
10.ಕಾಂಟ್ರಾಕ್ಟ್ ಫಾರ್ಮಿಂಗ್‍ಗಾಗಿ ಪಡೆದ ಸಾಲಗಳು.
11. ರೈತರಿಗೆ ಸಾಲ ನೀಡಲು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾದ ಸಾಲಗಳು.
12. ಮೀನುಗಾರಿಕೆ/ ಹೈನುಗಾರಿಕೆ ಮತ್ತು ಕೃಷಿ ಸಂಬಂಧಿತ ಇತರೆ ಸಾಲಗಳು.
13. ಸಾಲದ ಮೊತ್ತವನ್ನು ದುರ್ಬಳಕೆ ಮಾಡಿದ ಅಥವಾ ನಿಕ್ಷೇಪಗಳಲ್ಲಿ ಠೇವಣಿ ಮಾಡಲಾಗಿರುವ ಸಾಲಗಳು.
14. ವಂಚನೆ / ದುರ್ಬಳಕೆ ಒಳಗೊಂಡಿರುವ ಸಾಲಗಳು.
ಕರ್ನಾಟಕ ಸರ್ಕಾರವು 4 ವರ್ಷಗಳ ಅವಧಿಯಲ್ಲಿ, ವಾರ್ಷಿಕ/ ಅರೆ ವಾರ್ಷಿಕ ಕಂತುಗಳಲ್ಲಿ ಬ್ಯಾಂಕುಗಳಿಗೆ ಸಾಲ ಮನ್ನಾ ಮೊತ್ತವನ್ನು ಮರುಪಾವತಿಸುತ್ತದೆ.