ಮಡಿಕೇರಿ, ಜು. 8: ಹುಣಸೂರಿನಿಂದ ಗೋಣಿಕೊಪ್ಪಲು ಕಡೆಗೆ ಬರುತ್ತಿದ್ದ ಬೈಕ್‍ವೊಂದಕ್ಕೆ ಎದುರಿನಿಂದ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮರಣಹೊಂದಿದ ದುರ್ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಪೊನ್ನಂಪೇಟೆ ಬಳಿಯ ಈಚೂರು ಗ್ರಾಮದ ಇ. ತಿಮ್ಮಶೆಟ್ಟಿ ಎಂಬವರ ಪುತ್ರ ಪುರುಷೋತ್ತಮ (23) ಎಂಬಾತನೇ ಮೃತ ದುರ್ದೈವಿ.ನಿನ್ನೆ ರಾತ್ರಿ ತಿತಿಮತಿ ಹೆದ್ದಾರಿಯ ನಾಗರಹೊಳೆ ಉದ್ಯಾನವನದ ಸ್ವಾಗತ ಕಮಾನು ಬಳಿ ಬೈಕ್ (ಕೆಎ 12 ಕ್ಯೂ 2328) ಬರುತ್ತಿದ್ದಾಗ, ಎದುರಿನಿಂದ ವೇಗವಾಗಿ ಬಂದ ಲಾರಿ (ಕೆಎಲ್ 58 ಡಿ 8861) ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ವೇಳೆ ಬೈಕ್ ಸವಾರ ಪುರುಷೋತ್ತಮ ಮಾರಣಾಂತಿಕ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತನು ಪೊನ್ನಂಪೇಟೆಯ ಶಾಮಿಯಾನ ಮಳಿಗೆಯೊಂದರಲ್ಲಿ ಕಾರ್ಮಿಕನಾಗಿದ್ದನೆಂದು ತಿಳಿದು ಬಂದಿದೆ.ಆರೋಪಿ ಲಾರಿ ಚಾಲಕ ವಾಹನ ನಿಲ್ಲಿಸಿ ಪರಾರಿಯಾಗಿದ್ದು, ಬೈಕ್ ಹಿಂಬದಿ ಸವಾರ ಕಿರಣ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇನ್ಸ್‍ಪೆಕ್ಟರ್ ಹರಿಶ್ಚಂದ್ರ ಮತ್ತು ಸಿಬ್ಬಂದಿ ಸ್ಥಳ ಮಹಜರು ನಡೆಸಿ ಕಾನೂನು ಕ್ರಮಕೈಗೊಂಡಿದ್ದಾರೆ.