ಮೈಸೂರು ಪೌರ ಕಾರ್ಮಿಕರ ಸಂಘಟನೆ ಬೆಂಬಲವೀರಾಜಪೇಟೆ, ಜು. 6: ವೀರಾಜಪೇಟೆ ಪಟ್ಟಣ ಪಂಚಾ ಯಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ 27 ಮಂದಿ ಪೌರ ಸೇವಾ ನೌಕರರನ್ನು 2017ರ ಡಿಸೆಂಬರ್ ತಿಂಗಳಲ್ಲಿ ಹಠಾತ್ತನೆ ವಜಾಗೊಳಿಸಿದ್ದನ್ನು ವಿರೋಧಿಸಿ ವಜಾಗೊಂಡ ಇಲ್ಲಿನ ಪೌರ ಸೇವಾ ನೌಕರರು ಸಂಘಟನೆ ಹಮ್ಮಿಕೊಳ್ಳುವ ಎಲ್ಲ ಹೋರಾಟಕ್ಕೆ ಮೈಸೂರು ಪೌರ ಕಾರ್ಮಿಕರ ಸಂಘಟನೆ ಮುಕ್ತ ಬೆಂಬಲ ನೀಡಲಿದೆ ಎಂದು ಸಂಘಟನೆಯ ರಾಜ್ಯ ಸಮಿತಿಯ ಉಪಾಧ್ಯಕ್ಷ ಶಿವಣ್ಣ ಹೇಳಿದರು. ವೀರಾಜಪೇಟೆ ಪುರಭವನ ದಲ್ಲಿ ವೀರಾಜಪೇಟೆ ಶಾಖೆಯ ವತಿಯಿಂದ ಏರ್ಪಡಿಸಿದ್ದ ವಜಾಗೊಂಡ ಪೌರ ಕಾರ್ಮಿಕರ ಸಭೆಯಲ್ಲಿ ಆರು ತಿಂಗಳುಗಳಿಂದ ಸಂಬಳವಿಲ್ಲದೆ ಕಾರ್ಮಿಕರ ಬದುಕು ದುಸ್ತರವಾಗಿದೆ. ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಈಗ ಆಸರೆ ಇಲ್ಲದಂತಾಗಿದೆ.

ರಾಜ್ಯ ಸರಕಾರ ಪೌರ ಕಾರ್ಮಿಕರ ಮನವಿಗೆ ಸ್ಪಂದಿಸುತ್ತಿಲ್ಲವಾದ್ದರಿಂದ ಹೋರಾಟವೇ ಮಾರ್ಗವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಸಂಘಟನೆಯ ಉನ್ನತ ಸಮಿತಿ ಅಧ್ಯಕ್ಷ ಎನ್. ಮಾರ ತಿಳಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್ ಮಾತನಾಡಿ, ಸರಕಾರದ ಆದೇಶದಂತೆ ಗುತ್ತಿಗೆ ಆಧಾರದ ಪೌರ ಕಾರ್ಮಿಕರನ್ನು ಸೇವೆಯಲ್ಲಿ ಮುಂದುವರೆಸಲಾಗಿಲ್ಲ. ಇದು ಕೇವಲ ಕೊಡಗು ಜಿಲ್ಲೆಗೆ ಸೀಮಿತವಲ್ಲ. ಆದೇಶ ರಾಜ್ಯದ ಎಲ್ಲ ಪಟ್ಟಣ ಪಂಚಾಯಿತಿಗಳಿಗೆ ಸ್ಥಳೀಯ ಸಂಘ-ಸಂಸ್ಥೆಗಳಿಗೆ ಅನ್ವಯಿಸಿದೆ.

ಪೌರ ನೌಕರರ ಸೇವೆಯ ಕುರಿತು ಸರಕಾರದಿಂದಲೇ ನಿರ್ಧಾರ ವಾಗಬೇಕಾಗಿದೆ. ಈಗಿನ ಸರಕಾರ ಪೌರ ಕಾರ್ಮಿಕರ ಸೇವೆಗೆ ಸಂಬಂಧಿಸಿದಂತೆ ಸ್ಪಷ್ಟ ಆದೇಶ ಹೊರಡಿಸಿದರೆ ಪಟ್ಟಣ ಪಂಚಾಯಿತಿ ಕಾರ್ಮಿಕರಿಗೆ ಸೇವೆಯನ್ನು ಕಲ್ಪಿಸುವದರೊಂದಿಗೆ ನಿಗದಿತ ಸಂಬಳವನ್ನು ನೀಡಲಿದೆ. ಇದರಲ್ಲಿ ಪಟ್ಟಣ ಪಂಚಾಯಿತಿಯ ಯಾವದೇ ಪಾತ್ರವಿಲ್ಲ ಎಂದರು.

ಸಭೆಯಲ್ಲಿ ಶಾಖೆಯ ಸಂಘಟನೆಯ ಅಧ್ಯಕ್ಷ ಹೆಚ್.ಜಿ. ನವೀನ್‍ಕುಮಾರ್, ಕಾರ್ಯದರ್ಶಿ ವಿನೋದ್, ನಾಗೇಶ್ ಮತ್ತಿತರರು ಹಾಜರಿದ್ದರು. ಮೈಸೂರು ಸಂಘಟ ನೆಯ ಕಾರ್ಯದರ್ಶಿ ಅರುಣ್ ಕುಮಾರ್, ರಾಜೀವ್, ದಿನೇಶ್ ಕುಮಾರ್ ಇತರರು ಉಪಸ್ಥಿತರಿದ್ದರು.