ಗೋಣಿಕೊಪ್ಪಲು, ಜು. 6: ಕಾಲೇಜು ವಿದ್ಯಾರ್ಥಿನಿಯೊರ್ವ ಳನ್ನು ಅಪರಿಸುವ ವಿಫಲಯತ್ನ ನಡೆದಿದ್ದು, ಗೋಣಿಕೊಪ್ಪಲುವಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಎಂದಿನಂತೆ ಕಾರೆಕಾಡು ಬಳಿಯಿಂದ ಗೋಣಿಕೊಪ್ಪಲುವಿನ ಒಂದನೇ ವಿಭಾಗದ ಜ್ಯೂಸ್ ಫ್ಯಾಕ್ಟರಿ ರಸ್ತೆಯಲ್ಲಿ ಮುಂಜಾನೆ 8-30 ರ ಸುಮಾರಿಗೆ ಕಾಲೇಜಿಗೆ ನಡೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ..
ಗೋಣಿಕೊಪ್ಪ ಕಡೆಗೆ ತೆರಳುತ್ತಿದ್ದ ಜೀಪ್ನಲ್ಲಿ ಆಗಮಿಸಿದ ಯುವಕರಿಬ್ಬರು ಸೇತುವೆ ಬಳಿ ಯಾವದೇ ಜನ ಸಂಚಾರ ಇಲ್ಲದಿರುವುದನ್ನು ಗಮನಿಸಿ ರಸ್ತೆ ಬದಿ ನಡೆದು ಕಾಲೇಜಿಗೆ ತೆರಳುತ್ತಿದ್ದ ಯುವತಿಯ ಬಳಿ ಜೀಪ್ನ್ನು ನಿಲ್ಲಿಸಿ ಬಲವಂತವಾಗಿ ಜೀಪ್ಗೆ ಹತ್ತಿಸುವ ಯತ್ನ ನಡೆಸಿದ್ದಾರೆ. ಯುವತಿ ಪ್ರತಿಭಟಿಸಿದರಾದರೂ ಯುವಕರಿಬ್ಬರು ಯುವತಿಯನ್ನು ಜೀಪಿನೊಳಗೆ ಬಲವಂತವಾಗಿ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೀಪ್ ಜ್ಯೂಸ್ ಫ್ಯಾಕ್ಟರಿ ಬಳಿ ತೆರಳುತ್ತಿದಂತೆ ಯುವತಿಯು ಜೋರಾಗಿ ಕಿರುಚಿಕೊಂಡಾಗ ಮುಂದಾಗಬಹುದಾದ ಅನಾಹುತವನ್ನು ಗಮನಿಸಿದ ಯುವಕರು ಯುವತಿಯನ್ನು ಜೀಪಿನಿಂದ ಕೆಳಗಿಳಿಸಿ ಜೀಪ್ ಸಹಿತ ತೆರಳಿದ್ದಾರೆ. ಗಾಬರಿಗೊಂಡ ಯುವತಿ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರ ದೂರಿನಂತೆ ಕಾರ್ಯಪ್ರವೃತ್ತರಾದ ಗೋಣಿಕೊಪ್ಪಲುವಿನ ವೃತ್ತ ನೀರಿಕ್ಷಕ ಹರಿಶ್ಚಂದ್ರ ತಮ್ಮ ಇಲಾಖೆಯ ಸಿಬ್ಬಂದಿÀಯೊಂದಿಗೆ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಆರೋಪಿಗಳ ಸುಳಿವು ಪಡೆಯಲು 3 ವಿಶೇಷ ತಂಡವನ್ನು ರಚಿಸಿರುವ ಪೊಲೀಸ್ ಅಧಿಕಾರಿಗಳು ಅಪರಿಚಿತ ಯುವಕರ ಚಹರೆಯನ್ನು ಯುವತಿಯಿಂದ ಪಡೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದಂತೆ ಪೊಲೀಸ್ ಠಾಣೆ ಬಳಿ ಸಾರ್ವಜನಿಕರು ಜಮಾಯಿಸಿದ್ದರು. ಪೊಲೀಸ್ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಾಹನ ಸಂಚರಿಸುವ ಮಾರ್ಗದಲ್ಲಿರುವ ಸಿಸಿಟಿವಿ ಸಹಾಯ ಪಡೆದಿದ್ದಾರೆ. ಮುಂಜಾನೆ ನಡೆದ ಈ ಘಟನೆಯಿಂದ ಸಾರ್ವಜನಿಕರು ಭಯಭೀತ ಗೊಂಡಿದ್ದಾರೆ.
ಅರ್ವತ್ತೊಕ್ಲುವಿನ ವಿದ್ಯಾಲಯ ವೊಂದರಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿಯಾಗಿರುವ ಆಕೆಯ ಹೆಸರನ್ನು ಕೇಳಲಾಗಿ, ಈ ವಿದ್ಯಾರ್ಥಿನಿ ತಾವು ಕರೆದೊಯ್ಯಲು ಮುಂದಾಗಿ ದ್ದಾಕೆ ಆಗಿರದೆ ಬೇರೆಯವಳಾಗಿದ್ದ ಕಾರಣ ಮಾರ್ಗ ಮಧ್ಯೆ ಈಕೆಯನ್ನು ಬಿಟ್ಟು ಹೋಗಿದ್ದರೆನ್ನಲಾಗಿದ್ದು, ವಿದ್ಯಾರ್ಥಿನಿಯ ಪೋಷಕರು ಮೊಕದ್ದಮೆ ದಾಖಲಿಸಲು ಹಿಂದೇಟು ಹಾಕುತ್ತಿರುವದಾಗಿಯೂ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.