ಮಡಿಕೇರಿ, ಜು. 6: ಬೆಲ್ಜಿಯಂನಲ್ಲಿ ಆರು ರಾಷ್ಟ್ರಗಳ ನಡುವೆ ಈ ತಿಂಗಳು ನಡೆಯಲಿರುವ 23 ವರ್ಷದೊಳಗಿನ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ಹಾಕಿ ತಂಡದಲ್ಲಿ ಕೊಡಗು ಜಿಲ್ಲೆಯ ಮೂವರು ಭಾಗವಹಿಸಲಿದ್ದು, ಜಿಲ್ಲೆಯ ಹಾಕಿ ಹಿರಿಮೆಗೆ ಮತ್ತೊಂದು ಮೈಲಿಗಲ್ಲಾಗಲಿದೆ.

23 ವರ್ಷದೊಳಗಿನ ಪುರುಷರ ಹಾಕಿ ತಂಡದಲ್ಲಿ ಇದೇ ಪ್ರಥಮ ಬಾರಿಗೆ ಸೋಮವಾರಪೇಟೆ ಮೂಲದವರಾದ ಯುವ ಹಾಕಿಪಟು ಆಭರಣ್ ಸುದೇವ್ ಬಿ. ಸ್ಥಾನ ಪಡೆದಿದ್ದರೆ, ಮಹಿಳಾ ತಂಡದಲ್ಲಿ ಈ ಹಿಂದೆ ಜ್ಯೂನಿಯರ್ ಏಷ್ಯಾಕಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಲ್ಲಮಾಡ ಲೀಲಾವತಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪುರುಷರ ತಂಡದ ಕೋಚ್ ಆಗಿ ವೀರಾಜಪೇಟೆಯವರಾದ ಹಲವಾರು ಪಂದ್ಯಾವಳಿಗಳಲ್ಲಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಬೊಳ್ಳಪಂಡ ಜೆ. ಕಾರ್ಯಪ್ಪ ಅವರು ಹಾಕಿ ಇಂಡಿಯಾದಿಂದ ನೇಮಕಗೊಂಡಿದ್ದಾರೆ.

ಪುರುಷರ ತಂಡದ ಆಟಗಾರ ಆಭರಣ್ ಹಾಗೂ ಕೋಚ್ ಬಿ.ಜೆ. ಕಾರ್ಯಪ್ಪ ತಾ. 6 ರಂದು ಬೆಲ್ಜಿಯಂಗೆ ತೆರಳಿದ್ದು, ಮಹಿಳಾ ತಂಡದ ಆಟಗಾರ್ತಿ ಲೀಲಾವತಿ ತಾ. 9 ರಂದು ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ. ತಾ. 14 ರಿಂದ 22ರವರೆಗೆ ಆರು ಆಹ್ವಾನಿತ ರಾಷ್ಟ್ರಗಳ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.