ಗೋಣಿಕೊಪ್ಪ ವರದಿ, ಜು. 7: ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಗೋಣಿಕೊಪ್ಪ ಭಾಗದ ಪತ್ರಕರ್ತರನ್ನು ಇಲ್ಲಿನ ಭಗತ್ ಸಿಂಗ್ ಯುವಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹೈನುಗಾರಿಕೆ ವರದಿ ಪ್ರಶಸ್ತಿ ಪಡೆದ ವಿಜಯವಾಣಿ ವರದಿಗಾರ ಸಣ್ಣುವಂಡ ಕಿಶೋರ್ ನಾಚಪ್ಪ, ಮಾನವೀಯ ವರದಿ ಪ್ರಶಸ್ತಿ ಪಡೆದ ಕೊಡಗು ಧ್ವನಿ ವಾರ ಪತ್ರಿಕೆಯ ರಾಕೇಶ್ ಕೊಡಗು ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಭಗತ್ ಸಿಂಗ್ ಯುವಕ ಸಂಘದ ಕಾರ್ಯಾಧ್ಯಕ್ಷ ಸಿಂಗಿ ಸತೀಶ್ ಮಾತನಾಡಿ, ಉತ್ತಮ ವರದಿ ಮೂಲಕ ಸಮಾಜಕ್ಕೆ ವೃತ್ತಿಪರವಾಗಿ ಸೇವೆ ನೀಡುತ್ತಿರುವದನ್ನು ಪರಿಗಣಿಸಿ ಸನ್ಮಾನಿಸಲಾಗುತ್ತಿದೆ. ಈ ಭಾಗದಲ್ಲಿ ಇವರಿಂದ ಮತ್ತಷ್ಟು ವರದಿಗಳು ಸಮಾಜಕ್ಕೆ ಸಿಗುವಂತಾಗಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗುಧ್ವನಿ ವಾರಪತ್ರಿಕೆ ಸಂಪಾದಕ ಹೆಚ್.ಕೆ. ಜಗದೀಶ್ ಮಾತನಾಡಿ, ಗ್ರಾಮ ಮಟ್ಟದಲ್ಲಿನ ಮಾಧ್ಯಮ ಪ್ರತಿನಿಧಿಗಳನ್ನು ಗುರುತಿಸಿ ಪ್ರೋತ್ಸಾಹಿ ಸುತ್ತಿರುವದು ಉತ್ತಮ ಬೆಳೆವಣಿಗೆ. ಸಮಾಜದಲ್ಲಿ ತೊಡಗಿಕೊಂಡಾಗ ಸಂಘಟನೆಗಳ ಪ್ರೋತ್ಸಾಹ ಅಗತ್ಯವಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಣ್ಣುವಂಡ ಕಿಶೋರ್ ನಾಚಪ್ಪ, ಸಂಘ-ಸಂಸ್ಥೆ ಹಾಗೂ ಮಾಧ್ಯಮ ಒಟ್ಟಾಗಿ ತೊಡಗಿಕೊಂಡಾಗ ಸಮಾಜ ಮತ್ತಷ್ಟು ಅಭಿವೃದ್ಧಿ ಕಾಣಲು ಸಾಧ್ಯವಿದೆ. ಸಂಘದ ಸಾಮಾಜಿಕ ಚಟುವಟಿಕೆಗಳು ಮಾಧ್ಯಮದಲ್ಲಿ ಹೆಚ್ಚು ಪ್ರಕಟವಾಗುವಂತೆ ನೋಡಿ ಕೊಳ್ಳಬೇಕಾಗಿದೆ ಎಂದರು. ಕಿರಿಯ ವಯಸ್ಸಿನಲ್ಲಿ ಪ್ರಶಸ್ತಿ, ಸನ್ಮಾನಗಳು ಮತ್ತಷ್ಟು ಹುರುಪು ತರುತ್ತಿದೆ ಎಂದು ರಾಕೇಶ್ ಕೊಡಗು ಅಭಿಪ್ರಾಯಪಟ್ಟರು.
ಈ ಸಂದರ್ಭ ಭಗತ್‍ಸಿಂಗ್ ಯುವಕ ಸಂಘ ಅಧ್ಯಕ್ಷ ಕಿಶೋರ್, ಕಾರ್ಯದರ್ಶಿ ಸಿ.ಕೆ. ವೇಣುಗೋಪಾಲ್, ಪದಾಧಿಕಾರಿ ಗಳಾದ ಮುಕುಂದನ್, ವೇಣುಗೋಪಾಲ್ ಮೆನನ್ ಹಾಗೂ ವಿನಯ್ ಇದ್ದರು.