ವೀರಾಜಪೇಟೆ, ಜು. 7 : ಆರ್ಜಿ ಗ್ರಾಮ ಪಂಚಾಯಿತಿಯಲ್ಲಿ ಯಾವದೇ ಅಭಿವೃದ್ಧಿ ಕಾಮಗಾರಿಗಳಿಗೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ, ಕಚೇರಿಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವದರಿಂದ ಗ್ರಾಮಸ್ಥರು ಬಂದ ದಾರಿಗೆ ಸುಂಕವಿಲ್ಲ ವೆಂಬಂತೆ ಹಿಂತಿರುಗಬೇಕಾಗಿದೆ. ಫಲಾನುಭವಿಗಳಿಗೆ ಸರಕಾರದ ಯಾವದೇ ಸವಲತ್ತುಗಳನ್ನು ಒದಗಿಸುತ್ತಿಲ್ಲ ಪಂಚಾಯಿತಿಯ ಆಡಳಿತದಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಆರೋಪಿಸಿ ಉಪಾಧ್ಯಕ್ಷ ಬಿ.ಎಂ. ರಮೇಶ್ ಸೇರಿದಂತೆ 7 ಮಂದಿ ಸದಸ್ಯರುಗಳು ಇಂದಿನ ಮಾಸಿಕ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಆರ್ಜಿ ಗ್ರಾ.ಪಂ. ಮಾಸಿಕ ಸಭೆಯು ಇಂದು ಪಂಚಾಯಿತಿ ಅಧ್ಯಕ್ಷೆ ಎಚ್.ಎಂ. ಗಾಯಿತ್ರಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿಯೇ ಕೆಲವು ಸದಸ್ಯರು ಗಳು ಪ್ರತಿ ತಿಂಗಳು ಆಯೋಜಿಸ ಬೇಕಾದ ಸಭೆಯನ್ನು ನಾಲ್ಕು ತಿಂಗಳ ನಂತರ ಅಭಿವೃದ್ಧಿ ಅಧಿಕಾರಿ ಸಭೆ ಆಯೋಜಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದರು. ಈ ಅಧಿಕಾರಿಗೆ ಪಂಚಾಯಿತಿಯ ಕಾರ್ಯ ನಿರ್ವಹಿಸಲು ಯಾವದೇ ಆಸಕ್ತಿ ಇಲ್ಲ. ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆ. ಇವರು ಪಂಚಾಯಿತಿ ಕಚೇರಿಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವದರಿಂದ ಕಚೇರಿಯ ಕಡತ ವಿಲೇವಾರಿ ಯಾಗುತ್ತಿಲ್ಲ. ಪಂಚಾಯಿತಿಗೆ ನಿರ್ಧಿಷ್ಟ ಆದಾಯ ಬರುವ ಮಾಂಸ ಮೀನು ಹಾಗೂ ಸುಂಕ ಎತ್ತಾವಳಿಯ ವಾರ್ಷಿಕ ಲೈಸೆನ್ಸ್‍ನ್ನು ಈ ತನಕ ವಿತರಣೆ ಮಾಡಿಲ್ಲ. ಈ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಸದಸ್ಯರುಗಳು ಸಭೆಯಲ್ಲಿ ಒತ್ತಾಯಿಸಿದರು.

ಆರ್ಜಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿರುವ 99 ಮಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಯ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾನೂನುಬದ್ಧವಾಗಿ ಗೋಮಾಳದ ಪೈಸಾರಿಯಲ್ಲಿ ಮನೆ ಕಟ್ಟಿಕೊಂಡಿರುವ ಟೀನಾ ಎಂಬ ಮಹಿಳೆಗೆ ಪಂಚಾಯಿತಿ ಸಭೆಯಲ್ಲಿ ಸದಸ್ಯರುಗಳ ಒಮ್ಮತ ನಿರ್ಧಾರದಿಂದ ವಿದ್ಯುತ್ ಸೌಲಭ್ಯ ಪಡೆಯಲು ನಿಗಧಿತ ಶುಲ್ಕ ಪಡೆದು ನಿರಾಪೇಕ್ಷಣಾ ಪತ್ರ ನೀಡುವಂತೆ ತೀರ್ಮಾನಿಸಿದ್ದರೂ ಈ ತನಕ ನಿರಾಪೇಕ್ಷಣಾ ಪತ್ರ ನೀಡದೆ ಸತಾವಣೆ ನೀಡಲಾಗುತ್ತಿದೆ. ಅಭಿವೃದ್ಧಿ ಅಧಿಕಾರಿ ಟೀನಾಳಿಗೆ ಪರೋಕ್ಷವಾಗಿ ಹಣದ ಬೇಡಿಕೆ ಇಟ್ಟಿರುವದಾಗಿ ಸದಸ್ಯರುಗಳು ದೂರಿದ್ದಾರೆ. ಪಂಚಾಯಿತಿ ಕಚೇರಿಗೆ ಯಾವದೇ ಸಮಯದಲ್ಲಿ ಸದಸ್ಯರು ದೂರವಾಣಿ ಕರೆ ಮಾಡಿದರೂ ಅಧಿಕಾರಿಗಳು ಫೋನ್‍ನಲ್ಲಿ ಪ್ರತಿಕ್ರಿಯಿಸುವ ಗೋಜಿಗೆ ಹೋಗುವದಿಲ್ಲ. ಗ್ರಾಮಸ್ಥ ಫಲಾನುಭವಿಗಳಿಗೆ ನಿರಂತರ ಕಿರುಕುಳ ನೀಡುವದೇ ಈ ಅಧಿಕಾರಿಯ ಕಾಯಕವಾಗಿದೆ ಎಂದು ಸದಸ್ಯರುಗಳು ಆರೋಪಿಸಿದರು.

ಆರ್ಜಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರುವ ಅನ್ವರುಲ್‍ಹುದಾ ವಿದ್ಯಾ ಸಂಸ್ಥೆ ಕಾನೂನುಬದ್ದವಾಗಿ ಕಟ್ಟಡವನ್ನು ನಿರ್ಮಾಣ ಮಾಡಿಲ್ಲ. ಭೂ ಪರಿ ವರ್ತನೆ ಸೇರಿದಂತೆ ಇತರ ಯಾವದೇ ಅಗತ್ಯ ದಾಖಲೆಗಳು ಕಟ್ಟಡಕ್ಕೆ ಇಲ್ಲದಿರು ವದರಿಂದ ಸಂಸ್ಥೆಯು ಸಲ್ಲಿಸಿರುವ ನಿರಾಪೇಕ್ಷಣಾ ಪತ್ರದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅಧ್ಯಕ್ಷೆ ಗಾಯಿತ್ರಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಒಟ್ಟು 9 ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 11 ರಿಂದ 11.45 ರವರಗೆ ಸಭೆ ನಡೆದು 7 ಮಂದಿ ಸಭಾ ತ್ಯಾಗದ ನಂತರ ಸಭೆಗೆ ಕೋರಂ ಇಲ್ಲದೆ ಸಭೆಯನ್ನು ಮುಂದೂಡಲಾಯಿತು.