ಕೂಡಿಗೆ/ ಕುಶಾಲನಗರ, ಜು. 6: ದಿಡ್ಡಳ್ಳಿ ನಿರಾಶ್ರಿತರು ನೆಲೆಸಿರುವ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಭೇಟಿ ನೀಡಿದರು.

ಬ್ಯಾಡಗೊಟ್ಟದಲ್ಲಿ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಮನೆ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಆದಷ್ಟು ಬೇಗ ಎಲ್ಲಾ ವ್ಯವಸ್ಥೆಯುಳ್ಳ ಮನೆಗಳನ್ನು ತಾತ್ಕಾಲಿಕ ಮನೆಗಳಲ್ಲಿ ನೆಲೆಸಿರುವ ಗಿರಿಜನರಿಗೆ ಹಸ್ತಾಂತರಿಸಬೇಕು. ಕುಡಿಯುವ ನೀರು, ವಿದ್ಯುಚ್ಛಕ್ತಿ ಮತ್ತು ಪಡಿತರ ಚೀಟಿ, ಆಧಾರ್ ಕಾರ್ಡ್‍ಗಳನ್ನು ಒದಗಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೊತೆಗೆ ಪಡಿತರ ವ್ಯವಸ್ಥೆಯ ಮೂಲಕ ಒದಗಿಸುತ್ತಿರುವ ಗುಣಮಟ್ಟದ ಪೌಷ್ಠಿಕಾಂಶದ ಆಹಾರ ಸಾಮಗ್ರಿಗಳು ವಿತರಣೆ ಯಾಗುತ್ತಿರುವದರ ಬಗ್ಗೆ ಅಲ್ಲಿನ ನಿವಾಸಿಗಳನ್ನು ವಿಚಾರಿಸಿದರು.

ನಂತರ ಬಸವನಹಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮನೆಗಳ ಕಾಮಗಾರಿ ಆಗಿರುವ ಬಗ್ಗೆ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ವಿವರಗಳನ್ನು ಪಡೆದುಕೊಂಡರು. ಕಾಮಗಾರಿ ಪ್ರಗತಿಯ ಬಗ್ಗೆ ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್ ಮಾಹಿತಿ ನೀಡಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕುಮಾರ್ ತಾತ್ಕಾಲಿಕ ಮನೆಗಳಲ್ಲಿ ನೆಲೆಸಿರುವವರಿಗೆ ಪ್ರತಿ ಕುಟುಂಬಕ್ಕೆ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ತುಪ್ಪ, ತೊಗರಿಬೇಳೆ, ಹಲಸಂದೆ ಕಾಳು, ಹೆಸರುಕಾಳು, ನಂದಿನಿ ತುಪ್ಪ, ಕೋಳಿ ಮೊಟ್ಟೆಗಳನ್ನು ಮಾಸಿಕವಾಗಿ ಪೌಷ್ಠಿಕಾಂಶದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ವರದಿ ಮಾಡಿದರು.

ವಿತರಣೆಯಾಗುತ್ತಿರುವ ಪಡಿತರ ವಸ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಫಲಾನುಭವಿಗಳನ್ನು ಖುದ್ದು ಪ್ರಶ್ನಿಸಿ ಅವರಿಂದ ಮಾಹಿತಿ ಪಡೆದರು. ಮನೆಗಳಿಗೆ ಭೇಟಿ ನೀಡಿ ಅವರು ಪಡೆದುಕೊಂಡಿರುವ ಪಡಿತರ ಸಾಮಗ್ರಿಗಳನ್ನು ಅಧಿಕಾರಿಗಳ ಮುಂದೆಯೇ ಪರಿಶೀಲಿಸಿದ ಸಂದರ್ಭ ಪಡಿತರ ವಸ್ತುಗಳು ಕಡಿಮೆ ಇದ್ದುದ್ದನ್ನು ಗಮನಿಸಿ, ಜಿಲ್ಲಾಧಿಕಾರಿಗಳು ಪಡಿತರ ವ್ಯವಸ್ಥೆಯ ಸುಧಾರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ಮಹೇಶ್, ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣರೈ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಮ್, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಕುಶಾಲನಗರ ಗ್ರಾಮಲೆಕ್ಕಿಗ ಗೌತಮ್ ಇದ್ದರು.