ಮಡಿಕೇರಿ, ಜು. 6: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಜೆ.ಡಿ.ಎಸ್.-ಕಾಂಗ್ರೆಸ್ ದೋಸ್ತಿ ಸರಕಾರದ ಚೊಚ್ಚಲ ಬಜೆಟ್ ಪ್ರಕಟಗೊಂಡಿದೆ. ಬಹನಿರೀಕ್ಷಿತವಾಗಿದ್ದ ಈ ಬಜೆಟ್‍ನಲ್ಲಿ ಹಲವಾರು ಸಮಸ್ಯೆಗಳಿಂದ ಪರಿತಪಿಸುತ್ತಿರುವ ಕೊಡಗಿನ ಜನತೆಗೆ ಏನಾದರೂ ವಿಶೇಷ ಪ್ರಯೋಜನ ಲಭಿಸಬಹುದು ಎಂದು ಜನತೆ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಆದರೆ, ಕೊಡಗು ಜಿಲ್ಲೆಯ ಪಾಲಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಕಟಿಸಿರುವ ಬಜೆಟ್‍ನಲ್ಲಿ ಏನೂ ಇಲ್ಲ. ಬಜೆಟ್ ಅನ್ನು ಕಾತರದಿಂದ ಎದುರು ನೋಡುತ್ತಿದ್ದವರು ಇದೀಗ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಸಾಲಮನ್ನಾ ಹೊರತುಪಡಿಸಿ ವಿಶೇಷವಾಗಿ ಏನಿದೆ ಎಂದು ಕೇಳಿದರೆ, ಜಿಲ್ಲೆಯವರಿಗೆ ಕಾವೇರಿಗೆ ನೀರುಣಿಸುವದಷ್ಟೇ ಕೆಲಸ. ಬೇರೇನೂ ಇಲ್ಲ ಎಂಬಂತಿದೆ ಈ ಬಜೆಟ್.
ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಕಾಡಾನೆ ಹಾವಳಿಯಿಂದ ಜನ ಕಂಗೆಡುವಂತಾಗಿರುವದು ಒಂದೆಡೆಯಾದರೆ, ಮತ್ತೊಂದೆಡೆ ವ್ಯಾಘ್ರನ ಹಾವಳಿಯೂ ಭೀತಿಯ ವಾತಾವರಣ ಸೃಷ್ಟಿಸಿದೆ. ಅತಿವೃಷ್ಟಿ ಹಾಗೂ ವಾತಾವರಣದ ಏರು-ಪೇರಿನಿಂದಾಗಿ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಜಿಲ್ಲೆಯ ಬೆಳೆಗಾರರು, ಕೃಷಿಕರು ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. ಕೃಷಿ ಫಸಲುಗಳೊಂದಿಗೆ ಜಿಲ್ಲೆಯಲ್ಲಿನ ರಸ್ತೆಗಳು ಜರ್ಝರಿತವಾಗಿವೆ. ಬಜೆಟ್‍ಗೆ ಮುನ್ನ ಕೊಡಗಿಗೆ ಸರಕಾರದ ಪ್ರಮುಖ ಖಾತೆಗಳಾದ ಕಂದಾಯ, ಅರಣ್ಯ ಹಾಗೂ ಲೋಕೋಪಯೋಗಿ ಸಚಿವರು ಭೇಟಿ ನೀಡಿ ತೆರಳಿದ್ದರು. ಅತಿವೃಷ್ಟಿ, ಕಾಡಾನೆ ಧಾಳಿ, ವಾಘ್ರನ ಧಾಳಿಗೆ ಈಗಾಗಲೇ ಇಲ್ಲಿ ಜನರ ಪ್ರಾಣ ಹಾನಿಯಾಗಿವೆ. ಅರ್ಧದಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು ಅದೆಷ್ಟೋ ಇವೆ. ಮಾತ್ರವಲ್ಲದೆ ದಿನಂಪ್ರತಿ ಜಾನುವಾರುಗಳು ಬಲಿಯಾಗುತ್ತಿವೆ. ಸಾರಿಗೆ ಸಂಪರ್ಕ ವ್ಯವಸ್ಥೆಗೂ ಧಕ್ಕೆಯಾಗಿದೆ. ರಸ್ತೆ, ಸೇತುವೆಗಳು ಹಾನಿಗೀಡಾಗಿದ್ದು, ಅಂತರರಾಜ್ಯ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಶಾಲಾ-ಕಾಲೇಜುಗಳಿಗೂ ದಿನಗಟ್ಟಲೆ ರಜೆ ಘೋಷಿಸಲ್ಪಟ್ಟಿವೆ. ಜನತೆ ಹಲವಾರು ದಿನಗಳನ್ನು ವಿದ್ಯುತ್ ಇಲ್ಲದೆ ಕಾರ್ಗತ್ತಲಿನಲ್ಲಿ ಕಳೆದಿದ್ದಾರೆ. ಈ ಸಮಯದಲ್ಲಿ ಹೊಸ ಸರಕಾರದ ಹೊಸ ಬಜೆಟ್ ಮಂಡನೆಯಾಗುತ್ತಿರುವದರಿಂದ ಕೊಡಗಿಗೆÀ ಕನಿಷ್ಟ ಏನಾದರೊಂದು ವಿಶೇಷ ಸವಲತ್ತು ಸಿಗಬಹುದು ಎಂಬ ಆಶಾಭಾವನೆ ಜನತೆಯಲ್ಲಿತ್ತು. ಆದರೆ, ಕೊಡಗಿನವರಿಗೆ ಏನೂ ಬೇಡವೇ ಬೇಡ ಎಂಬ ಪೂರ್ವಾಗ್ರಹ ಪೀಡಿತ ನಿಲುವಿನಂತೆ ಜುಲೈ 5ರ ಈ ಬಜೆಟ್ ಭಾಸವಾಗುತ್ತಿದೆ.
ರಾಜ್ಯಕ್ಕೆ, ದೇಶಕ್ಕೆ ಕೊಡಗು ಜಿಲ್ಲೆಯ ಜನರು ವೈಯಕ್ತಿವಾಗಿಯೂ - ಪ್ರಕೃತಿದತ್ತವಾಗಿಯೂ ಹಲವಾರು ವಿಚಾರಗಳಲ್ಲಿ ಕೊಡುಗೆ ನೀಡಿದ್ದಾರೆ. ದೇಶ ಸೇವೆ ಇರಲಿ, ಕ್ರೀಡೆ ಇರಲಿ, ವಿವಿಧ ರೂಪದ ತೆರಿಗೆಗಳ ಮೂಲಕ ರಾಜ್ಯ ಬೊಕ್ಕಸ ತುಂಬುವಲ್ಲಿ ಹೆಚ್ಚಿನ ಕೊಡುಗೆಯಾಗಲಿ ಈ ರೀತಿಯಾಗಿ ಒಂದಲ್ಲಾ ಒಂದು ರೀತಿಯಲ್ಲಿ ಕರ್ನಾಟಕಕ್ಕೆ ಕೊಡಗಿನ ಕೊಡುಗೆ ಇದ್ದೇ ಇದೆಯಾದರೂ, ಸರಕಾರಗಳಿಗೆ ಕೊಡಗು ಮಾತ್ರ ನಗಣ್ಯವಾಗಿರುವದು ವಿಷಾದಕರವೆನಿಸಿದೆ.
ರಾಜ್ಯವ್ಯಾಪಿಯಾಗಿ ಘೋಷಿಸಲಾಗಿರುವ ಯೋಜನೆಗಳನ್ನು ಹೊರತುಪಡಿಸಿದರೆ, ಕೊಡಗಿಗೆ ಏನೇನೂ ಇಲ್ಲವೇ ಇಲ್ಲ. ಕೇವಲ ಐದೂವರೆ ಲಕ್ಷ ಜನ ಸಂಖ್ಯೆಯೊಂದಿಗೆ ರಾಜ್ಯದ ಪುಟ್ಟ ಜಿಲ್ಲೆಯವರಾದ ನಿಮಗೇನೂ ಬೇಡ.. ರಾಜಕೀಯವಾಗಿಯೂ ಇಲ್ಲಿ ವಿಭಿನ್ನ ನಿಲುವಿದೆ. ನೀವು ಕೇವಲ ಕಾವೇರಿಗೆ ನೀರು ಹರಿಸಿದರೆ ಸಾಕು ಎಂಬಂತಹ ಧೋರಣೆಯನ್ನು ಸರಕಾರ ಪ್ರಕಟಿಸಿದಂತಿದೆ.
ಕಾವೇರಿ ನದಿ ನೀರಿನ ವಿಚಾರದಲ್ಲಿ ತೋರುವ ಆಸಕ್ತಿಯನ್ನು ಕಾವೇರಿಯ ಉಗಮಸ್ಥಾನವಾದ ತಲಕಾವೇರಿ ಕ್ಷೇತ್ರ ಸೇರಿದಂತೆ ನಾಡಿಗೆ ನೀರುಣಿಸುವ ಈ ಜಿಲ್ಲೆಯನ್ನೇ ಕಡೆಗಣಿಸುವದನ್ನು ನಾಡಿನ ಜನತೆ ಇದೀಗ ಖಾರವಾಗಿಯೇ ಪ್ರಶ್ನಿಸಿಬೇಕಾದ ಅನಿವಾರ್ಯತೆ ಎದುರಾಗಿದೆ.
- ಶಶಿ ಸೋಮಯ್ಯ