ಮಡಿಕೇರಿ, ಜು. 6: ರಾಜ್ಯ ಸರಕಾರದ ಬೊಕ್ಕಸಕ್ಕೆ ಆದಾಯ ತರುವ ಪ್ರಮುಖ ಇಲಾಖೆಗಳ ಪೈಕಿ ಸಾರಿಗೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಪ್ರಾದೇಶಿಕ ಸಾರಿಗೆ ಇಲಾಖೆಯೂ ಒಂದಾಗಿದೆ. ಕೊಡಗು ಜಿಲ್ಲೆ ರಾಜ್ಯದ ಪುಟ್ಟ ಜಿಲ್ಲೆಯಾದರೂ ಹತ್ತು ಹಲವಾರು ಸಮಸ್ಯೆಗಳ ನಡುವೆಯೂ ಈ ಇಲಾಖೆಗೆ ಹೆಚ್ಚಿನ ಆದಾಯ ತಂದು ಕೊಡುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇರುವದು ಪ್ರಸ್ತುತದ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅದರಂತೆ ಕೊಡಗು ಜಿಲ್ಲೆ ಪುಟ್ಟದಾದರೂ ಇಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ನೋಂದಾಯಿಸಲ್ಪ್ಟಡುತ್ತವೆ. ಆದರೆ ಇಲ್ಲಿ ಗಮನಿಸುವಂತಹ ಮತ್ತೊಂದು ಪ್ರಮುಖ ವಿಚಾರವೆಂದರೆ ಪುಟ್ಟ ಜಿಲ್ಲೆಯಿಂದ ವಾರ್ಷಿಕವಾಗಿ ರಾಜ್ಯದ ಬೊಕ್ಕಸಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯ ಮೂಲಕ ಲಭಿಸುತ್ತಿರುವ ದೊಡ್ಡ ಮೊತ್ತದ ಆದಾಯ.ಜಿಲ್ಲೆಯಲ್ಲಿ ಈ ಇಲಾಖೆಗೆ ಕಳೆದ ಎರಡು ವರ್ಷಗಳಲ್ಲಿ ರೂ. 100 ಕೋಟಿಗೂ ಅಧಿಕ ಮೊತ್ತದ ರಾಜಸ್ವ (ಆದಾಯ) ಸಂಗ್ರಹವಾಗಿರುವದು ವಿಶೇಷವಾಗಿದೆ. ಅದರಲ್ಲೂ ಇಲಾಖೆಗೆ ರಾಜ್ಯದಿಂದ ನೀಡಲಾಗುತ್ತಿರುವ ಗುರಿಗಿಂತಲೂ ಹೆಚ್ಚಿನ ಮೊತ್ತ ಸಂಗ್ರಹವಾಗಿರುವದು ಕಂಡು ಬರುತ್ತದೆ. 2018ರ ಮೇ ಅಂತ್ಯದ ಅಂಕಿಅಂಶದಂತೆ ನೋಂದಾಯಿತ ವಾಹನಗಳ ಸಂಖ್ಯೆ 1,75,851 ತಲಪಿದೆ.

2016-17ನೇ ಸಾಲಿನಲ್ಲಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆಗೆ ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ರೂ. 47.50 ಕೋಟಿ ರಾಜಸ್ವ ಸಂಗ್ರಹದ ಗುರಿ ನೀಡಲಾಗಿತ್ತು. ಈ ಸಾಲಿನಲ್ಲಿ ನಿಗದಿತ ಗುರಿಯಾದ ರೂ. 47.50 ಕೋಟಿಗಿಂತ ರೂ. 51.56 ಕೋಟಿಯಷ್ಟು ರಾಜಸ್ವ ಸಂಗ್ರಹಣೆಯಾಗಿದ್ದು, ಹೆಚ್ಚುವರಿಯಾಗಿ ರೂ. 4.06 ಕೋಟಿ ಸಂಗ್ರಹದೊಂದಿಗೆ ಶೇಕಡ 108 ರಷ್ಟು ಸಾಧನೆಯಾಗಿತ್ತು.

2017-18ನೇ ಸಾಲಿನಲ್ಲಿ ಜಿಲ್ಲಾ ಸಾರಿಗೆ ಇಲಾಖೆಗೆ ರೂ. 54.20 ಕೋಟಿ ರಾಜಸ್ವ ಸಂಗ್ರಹದ ಗುರಿ ನೀಡಲಾಗಿದ್ದು, ಈ ಆರ್ಥಿಕ ವರ್ಷದಲ್ಲೂ ಶೇಕಡ 106 ರಷ್ಟು ಸಾಧನೆಯಾಗಿದೆ. 2017-18ನೇ ಸಾಲಿನಲ್ಲಿ ಒಟ್ಟು 57.97 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ನಿಗದಿತ ಗುರಿಗಿಂತ ಹೆಚ್ಚುವರಿಯಾಗಿ ರೂ. 3.77 ಕೋಟಿ ಸಂಗ್ರಹಾತಿಯಾಗಿದೆ. ಈ ಎರಡು ವರ್ಷದಲ್ಲಿ ಸಂಗ್ರಹವಾದ ಒಟ್ಟು ಮೊತ್ತ ರೂ. 109.53 ಕೋಟಿಯಾಗಿದೆ.

ಪ್ರಸಕ್ತ ಸಾಲಿನಲ್ಲಿ ರೂ. 59.13 ಕೋಟಿ ಗುರಿ

2018-19ನೇ ಸಾಲಿಗೆ ಒಟ್ಟು 59.13 ಕೋಟಿಯ ಗುರಿ ನೀಡಲಾಗಿದೆ. ಇದರಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸೇರಿ ಎರಡು ತಿಂಗಳಲ್ಲಿ ರೂ. 8.80 ಕೋಟಿ ರಾಜಸ್ವ ಸಂಗ್ರಹವಾಗಿದೆ. ರಾಜಸ್ವ ಸಂಗ್ರಹಾತಿ ಎಂದರೆ ಎಲ್ಲಾ ರೀತಿಯ ವಾಹನಗಳ ತೆರಿಗೆ, ಮಾಲೀಕತ್ವ, ಮಾಲೀಕತ್ವದ ಬದಲಾವಣೆ, ಚಾಲನಾ ಪರವಾನಗಿ ಶುಲ್ಕ, ಆರ್‍ಸಿ ಎಫ್‍ಸಿ ಫಿಟ್‍ನೆಸ್‍ನಂತಹ ವಿವಿಧ ಸೇವಾ ಶುಲ್ಕಗಳು ಒಳಗೊಂಡಿರುತ್ತವೆ. ಮಾತ್ರವಲ್ಲದೆ, ಕಾನೂನು ಬಾಹಿರ ಪ್ರಕ್ರಿಯೆಗಳಿಗೆ ಇಲಾಖೆ ವಿಧಿಸುವ ದಂಡದ ಮೊತ್ತವೂ ಇದರಲ್ಲಿ ಸೇರಲಿದೆ.

ಕೊಡಗಿನಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಬೇರೆ ರಾಜ್ಯಗಳಲ್ಲಿ ಅಲ್ಲಿ ನೋಂದಾಯಿಸಲ್ಪಡುವ ವಾಹನಗಳಿಗೆ ಪಾವತಿಸುವ ಲೈಫ್ ಟೈಮ್ ಟ್ಯಾಕ್ಸ್ ಪಾವತಿಸಿರುವ ವಾಹನಗಳು ಜಿಲ್ಲೆಗೆ ಬಂದಲ್ಲಿ ಇಲ್ಲಿ ಅಂತಹ ಬಿಳಿ ಫಲಕದ ವಾಹನಗಳಿಗೆ ತೆರಿಗೆ ಪಡೆಯಲಾಗುತ್ತಿಲ್ಲ. ದಿನಗಟ್ಟಲೆ ಅಥವಾ ತಿಂಗಳು ಗಟ್ಟಲೆ ಬೇರೆ ರಾಜ್ಯದಿಂದ ಆಗಮಿಸುವ ಬಿಳಿ ಫಲಕದ ವಾಹನಗಳಿಗೂ ಇಲ್ಲಿ ತೆರಿಗೆ ವಿಧಿಸಬಹುದಾಗಿದ್ದರೂ, ಜಿಲ್ಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ತಪಾಸಣೆಗೆ ಯಾವದೇ

(ಮೊದಲ ಪುಟದಿಂದ) ಚೆಕ್‍ಪೋಸ್ಟ್‍ಗಳು ಇಲ್ಲ. ಈ ಹಿನ್ನೆಲೆಯಲ್ಲಿ ಇಂತಹ ವಾಹನಗಳು ಜಿಲ್ಲೆಯ ಇಲಾಖೆಯ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುವ ಅವಕಾಶಗಳೂ ಇವೆ. ಇಲಾಖೆಯ ಅಧಿಕಾರಿಗಳು ಅಲ್ಲಲ್ಲಿ ತಪಾಸಣೆ ನಡೆಸಿದರಷ್ಟೇ ತೆರಿಗೆ ವಿಧಿಸಲು ಅವಕಾಶವಾಗುತ್ತವೆ. ಜಿಲ್ಲೆಯ ಗಡಿದಾಟಿ ಬೇರೆ ಜಿಲ್ಲೆಗಳಿಗೆ ಇಂತಹ ವಾಹನಗಳು ಸೇರುವ ಸಂದರ್ಭ ಅಲ್ಲಿ ತೆರಿಗೆ ಪಾವತಿಸುವಂತಾದರೂ ಇದು ಕೊಡಗಿನ ರಾಜಸ್ವ ಸಂಗ್ರಹದ ವ್ಯಾಪ್ತಿಯಿಂದ ಹೊರತಾಗಿರುತ್ತದೆ ಎನ್ನಲಾಗಿದೆ. ಜಿಲ್ಲೆಯ ಗಡಿಯೊಳಗೆ ಅಧಿಕೃತವಾಗಿ ವಿಧಿಸಲ್ಪಡುವ ತೆರಿಗೆಗಳು, ವಸೂಲಾತಿಯಾಗುವ ವಿವಿಧ ಸೇವಾ ಶುಲ್ಕಗಳು ಮತ್ತು ದಂಡಗಳು ಮಾತ್ರ ಜಿಲ್ಲಾ ರಾಜಸ್ವಕ್ಕೆ ಒಳಪಡಲಿದೆ.

ರಸ್ತೆಗಳು ಮಾತ್ರ ಅಧೋಗತಿ

ಪುಟ್ಟ ಜಿಲ್ಲೆಯಾದ ಕೊಡಗಿನಿಂದ ಸಾರಿಗೆ ಇಲಾಖೆಗೆ ವಾರ್ಷಿಕವಾಗಿ ಅಧಿಕ ಮೊತ್ತದ ಹಣ ಸಂಗ್ರಹಾತಿಯಾಗುತ್ತಿದ್ದರೂ ಜಿಲ್ಲೆಯ ರಸ್ತೆಗಳ ಸ್ಥಿತಿ ಮಾತ್ರ ಅಯೋಮಯವಾಗಿರುತ್ತವೆ. ವಾರ್ಷಿಕವಾಗಿ ಅಧಿಕ ಮಳೆಯಾಗುವದು ಸೇರಿದಂತೆ ಬೆಟ್ಟಗುಟ್ಟ ಪ್ರದೇಶಗಳಿಂದ ಕೂಡಿದ ಭೌಗೋಳಿಕತೆಯನ್ನು ಹೊಂದಿರುವ ಕೊಡಗಿನ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ರಾಜ್ಯ ಸರಕಾರ ಮುಂದಾಗದಿರುವ ಕುರಿತು ತೆರಿಗೆ ಪಾವತಿಸುವ ವಾಹನ ಮಾಲೀಕರು ವಿಷಾದ ವ್ಯಕ್ತಪಡಿಸುತ್ತಾರೆ. ದುಬಾರಿ ಮೊತ್ತದ ವಾಹನಗಳಿರಲಿ ಸಾಧಾರಣ ಮಟ್ಟದ ವಾಹನಗಳಿರಲಿ ಎಲ್ಲರೂ ಕಾನೂನು ಪ್ರಕಾರÀ ಸರಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಾರೆ. ಇದರಲ್ಲಿ ಯಾರೂ ತಪ್ಪೆಸಗುವದಿಲ್ಲ. ಆದರೆ ಜಿಲ್ಲೆಯ ರಸ್ತೆಗಳನ್ನು ಮಾತ್ರ ಯಾವದೇ ಸರಕಾರಗಳು ಸೂಕ್ತ ನಿರ್ವಹಣೆ ಮಾಡಲು ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಕೆಲವು ಭಾಗವನ್ನಾದರೂ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಮೀಸಲಿಡಬಹುದು. ಆದರೆ ಈ ಬಗ್ಗೆ ಯಾರೂ ಚಿಂತನೆ ಮಾಡುವದಿಲ್ಲ. ಇದರ ಬದಲಿಗೆ ಕೊಡಗನ್ನು ಕೇವಲ ‘ಚಿನ್ನದ ಮೊಟ್ಟೆ’ ಇಡುವ ಕೋಳಿ ಎಂಬಂತೆ ಪರಿಗಣಿಸುವದು ಎಷ್ಟು ಸರಿ. ಮಳೆಗಾಲ ಹೆಚ್ಚಿದ್ದರೂ ಇದೇ ನೆಪವಾಗಬಾರದು.

ಇತರ ಜಿಲ್ಲೆಗಳಂತೆ ಅಷ್ಟರ ಮಟ್ಟಿಗೆಯ ಸಮರ್ಪಕತೆ ಸಾಧ್ಯವಾಗದಿದ್ದರೂ ವಾಹನಗಳಿಗೆ ಧಕ್ಕೆಯಾಗದಂತೆಯಾದರೂ ಇಲ್ಲಿ ರಸ್ತೆಗಳನ್ನು ಸರಕಾರಗಳು ಅಭಿವೃದ್ಧಿ ಪಡಿಸಲು ವಿಶೇಷ ನಿಗಾವಹಿಸಬೇಕು ಎಂದು ರಸ್ತೆಗಳ ಅವ್ಯವಸ್ಥೆಯಿಂದ ವಾಹನಗಳಿಗೆ ಧಕ್ಕೆಯಾದ ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕೊಡಗು ಜಿಲ್ಲೆಯ ಸಾರಿಗೆ ಪ್ರಾಧಿಕಾರದಲ್ಲಿ ಇದುವರೆಗೆ ನೋಂದಾಯಿಸಲ್ಪಟ್ಟಿರುವ ವಿವಿಧ ನಮೂನೆಯ ವಾಹನಗಳ ಸಂಖ್ಯೆ ಒಟ್ಟು ಒಂದು ಲಕ್ಷದ ಎಪ್ಪತ್ತೈದು ಸಾವಿರದ ಎಂಟುನೂರ ಐವತ್ತೊಂದು ತಲಪಿದೆ.

ರಸ್ತೆ ಸಾರಿಗೆ ಪ್ರಾಧಿಕಾರದ ಮೂಲಗಳ ಪ್ರಕಾರ 2016ನೇ ಆರ್ಥಿಕ ವರ್ಷದ ವೇಳೆಗೆ ಕೊಡಗಿನಲ್ಲ್ಲಿ ಒಟ್ಟು ನೋಂದಾಯಿಸಲ್ಪಟ್ಟಿರುವ ವಾಹನಗಳ ಸಂಖ್ಯೆ 1.35 ಲಕ್ಷ ತಲಪಿದೆ. ಅನಂತರದಲ್ಲಿ 2017ನೇ ಆರ್ಥಿಕ ವರ್ಷಕ್ಕೆ ಜಿಲ್ಲೆಯಲ್ಲಿ ಒಟ್ಟು ವಾಹನಗಳು ಒಂದು ಲಕ್ಷ ಅರವತ್ತು ಸಾವಿರದ ಒಂಬೈನೂರ ತೊಂಬತ್ತೊಂಬತ್ತು (1,60,999) ಸಂಖ್ಯೆಯಲ್ಲಿ ನೋಂದಾಯಿಸಲ್ಪಟ್ಟಿವೆ. 2017ರಲ್ಲಿ ಇಪ್ಪತೈದು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ನೂತನ ವಾಹನಗಳು ನೊಂದಾಯಿಸಲ್ಪಟ್ಟು ಹಳೆಯ ದಾಖಲೆಯನ್ನು ಮೀತಿರುವದು ಕಂಡು ಬಂದಿದೆ. ಹಿಂದಿನ ಅವಧಿಗೆ ಇಲ್ಲಿ ಹೋಲಿಸಿದರೆ ಪ್ರಸಕ್ತ ಅವಧಿಗೆ 14,852 ವಾಹನಗಳು ನೋಂದಾಣಿ ಪಡೆದಿವೆ. ಒಟ್ಟು 1,75,851 ನೊಂದಾಯಿತ ವಾಹನಗಳಾಗಿವೆ.

ವಾಹನಗಳ ವಿವರ : ಜಿಲ್ಲೆಯಲ್ಲಿ ಮೋಟಾರ್ ಬೈಕ್‍ಗಳು, ಸ್ಕೂಟರ್‍ಗಳು ಇತರ ಮೊಪೆಡ್‍ಗಳು ಸೇರಿದಂತೆ ದ್ವಿಚಕ್ರ ವಾಹನಗಳ ಸಂಖ್ಯೆ 87,248 ರಷ್ಟು ನೋಂದಾಣಿಯಾಗಿವೆ. ಅಂತೆಯೇ 3,344 ಕಾರುಗಳು, 6,293 ಜೀಪುಗಳು, 7087 ಓಮ್ನಿ ಬಸ್‍ಗಳು, 2,626 ಟ್ರ್ಯಾಕ್ಟರ್‍ಗಳು, 3,203 ಟಿಲ್ಲರ್‍ಗಳು ಹಾಗೂ ಇನ್ನಿತರ ವಿವಿಧ ನಮೂನೆಯ ವಾಹನಗಳು ನೋಂದಾಯಿಸಲ್ಪಟ್ಟಿವೆ.

ಖಾಸಗಿ ಬಸ್‍ಗಳು : ಕೊಡಗು ಜಿಲ್ಲೆಯಾದ್ಯಂತ ಸಂಚರಿಸುವ ಖಾಸಗಿ ಬಸ್‍ಗಳ ಸಂಖ್ಯೆ 174 ಇದ್ದು, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ 292 ಹಾಗೂ ಇತರೆ 47 ಇವೆ. ಖಾಸಗಿ ಸಂಸ್ಥೆಗಳ 5 ಬಸ್‍ಗಳಿವೆ. ಈ ರೀತಿ ಜಿಲ್ಲೆಯಲ್ಲಿ ಒಟ್ಟು 520 ವಾಹನಗಳಿವೆ. ಉಳಿದಂತೆ ಮೋಟಾರ್ ಕ್ಯಾಬ್ಸ್ ವಾಹನಗಳು 1565, ಮ್ಯಾಕ್ಸಿ ಕ್ಯಾಬ್‍ಗಳು 509 ಸೇರಿದಂತೆ 2074 ಸಂಖ್ಯೆಯಲ್ಲಿ ಇವೆ. ಇನ್ನು ಲಘು ಸಾಗಾಣಿಕೆ ವಾಹನಗಳ ಸಹಿತ ಇತರ ವಾಹನಗಳು 9534 ಸಂಖ್ಯೆಯಲ್ಲಿವೆ. ಅಲ್ಲದೆ 45 ಆ್ಯಂಬುಲೆನ್ಸ್‍ಗಳು ಸಾರಿಗೆ ಪ್ರಾಧಿಕಾರದಲ್ಲಿ ನೋಂದಾಯಿಸಲ್ಪಟ್ಟಿವೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಏರುತ್ತಿರುವದು ಕಂಡು ಬಂದಿದೆ. ಇನ್ನು ಹೊರಗಿನಿಂದ ಕೊಡಗಿಗೆ ಪ್ರವಾಸಿಗರು ಆಗಮಿಸುವ ವಾಹನಗಳ ಸಹಿತ ನಿತ್ಯ ಲಕ್ಷಗಟ್ಟಲೆ ವಾಹನಗಳು ಈ ಜಿಲ್ಲೆಯಲ್ಲಿ ಸಂಚರಿಸುವಂತಾಗಿದೆ ಎಂಬದು ಗಮನಾರ್ಹ.