ಬಜೆಟ್ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು, ಜು. 6: ನೂತನ ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕರಾವಳಿ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿಯ ಜನಪ್ರತಿನಿಧಿಗಳು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಈ ಸಂದಭ ಮಾತನಾಡಿದ ಬಿಜೆಪಿಯ ಶಾಸಕರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಕರಾವಳಿ ಜಿಲ್ಲೆಗೆ ಯಾವದೇ ಅನುದಾನ ಮತ್ತು ಘೋಷಣೆ ಮಾಡಿಲ್ಲ. ಹಲವು ಸಂಪನ್ಮೂಲ ಮತ್ತು ಪವಿತ್ರ ಕ್ಷೇತ್ರಗಳನ್ನು ಒಳಗೊಂಡು ರಾಜ್ಯಕ್ಕೆ ಆದಾಯ ತರುವ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವದು ಈ ಸರ್ಕಾರದ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಇಡೀ ರಾಜ್ಯಕ್ಕೆ ತಾಯಿಯ ಸ್ಥಾನದಲ್ಲಿ ನಿಲ್ಲಬೇಕಾದ ಸರ್ಕಾರ ನಿನ್ನೆಯ ಬಜೆಟ್‍ನಲ್ಲಿ ಕರಾವಳಿ ಸೇರಿದಂತೆ ಆರೇಳು ಜಿಲ್ಲೆಗಳಿಗೆ ಮಲತಾಯಿ ಧೋರಣೆ ತಳೆದಿದೆ. ಕರಾವಳಿಯ ಜೀವನಾಡಿಯಾಗಿರುವ ಮೀನುಗಾರಿಕೆಗೆ ಅನುದಾನ ನೀಡದಿದ್ದ ಮೇಲೆ ಆ ಇಲಾಖೆ ಏಕಿದೆ, ಅದನ್ನು ರದ್ದುಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಲು ಸಲಹೆ

ಬೆಂಗಳೂರು, ಜು. 6: ಜೂಜಾಡುವದನ್ನು, ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವದನ್ನು ಕಾನೂನು ಬದ್ಧಗೊಳಿಸುವ ಕಾನೂನು ಆಯೋಗದ ಶಿಫಾರಸ್ಸನ್ನು ಬೆಂಬಲಿಸಿರುವ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾ. ಎನ್.ಸಂತೋಷ್ ಹೆಗ್ಡೆ, ವೇಶ್ಯಾವಾಟಿಕೆಯನ್ನು ಕೂಡ ಕಾನೂನು ಬದ್ಧಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ವ್ಯಸನಗಳನ್ನು ಸರ್ಕಾರ, ಕಾನೂನಿನ ಮೂಲಕ ನಿರ್ನಾಮ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಕಾನೂನಿನ ಮೂಲಕ ಇಂತಹ ವಿಷಯಗಳನ್ನು ನಿಯಂತ್ರಿಸಬಹುದು ಎಂದುಕೊಂಡರೆ ಅದು ತಪ್ಪಾಗುತ್ತದೆ ಎಂದು ನ್ಯಾ. ಹೆಗ್ಡೆ ಹೇಳಿದ್ದಾರೆ. ನೇರ ಹಾಗೂ ಪರೋಕ್ಷ ಕಾಯ್ದೆಯಡಿ ಜೂಜಾಡುವದು, ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವದನ್ನು ಕಾನೂನುಬದ್ಧಗೊಳಿಸಬೇಕೆಂದು ಕಾನೂನು ಆಯೋಗ ಶಿಫಾರಸ್ಸು ಮಾಡಿತ್ತು. ಇದನ್ನು ಅತ್ಯುತ್ತಮ ಶಿಫಾರಸ್ಸು ಎಂದು ಹೇಳಿರುವ ಸಂತೋಷ್ ಹೆಗ್ಡೆ, ಕಾನೂನಿನ ಮೂಲಕ ಇಂತಹ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದಲ್ಲಿ ಅಕ್ರಮ ವ್ಯವಸ್ಥೆಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ.

ನವಾಜ್ ಷರೀಫ್‍ಗೆ 10 ವರ್ಷ ಜೈಲು

ಇಸ್ಲಾಮಾಬಾದ್, ಜು. 6: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಪುತ್ರಿ ಮರ್ಯಮ್ ಅವರಿಗೆ ಏಳು ವರ್ಷ ಶಿಕ್ಷೆ ವಿಧಿಸಿ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೊ(ಎನ್‍ಎಬಿ) ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಲಂಡನ್‍ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್‍ಗಳನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಹಾಗೂ ಪುತ್ರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪನಾಮ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿ ನವಾಜ್ ಷರೀಫ್ ಅವರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ನವಾಜ್ ಷರೀಫ್ ಅವರು ಅಕ್ರಮ ಸಂಪಾದನೆ ಮತ್ತು ತೆರಿಗೆ ವಂಚನೆಯಿಂದ ಗಳಿಸಿದ ಕಪ್ಪು ಹಣವನ್ನು ಅಂತರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಹಾಗೂ ಲಂಡನ್ ಸೇರಿದಂತೆ ಹಲವು ದೇಶಗಳಲ್ಲಿ ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವದನ್ನು ಪನಾಮ ಪೇಪರ್ಸ್ ಲೀಕ್ ಮಾಡಿತ್ತು.

ಎನ್‍ಕೌಂಟರ್‍ನಲ್ಲಿ 3 ನಕ್ಸಲರ ಸಾವು

ರಾಯ್ಪುರ್, ಜು. 6: ಛತ್ತೀಸ್‍ಘಡ್ ದಂತೇವಾಡಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‍ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ. ರಾಜಧಾನಿ ರಾಯ್ಪುರ್‍ನಿಂದ ಸುಮಾರು 450 ಕಿ.ಮೀ. ದೂರದಲ್ಲಿರುವ ದಂತೇವಾಡದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಜಿಲ್ಲೆಯ ರಿಸರ್ವ್ ಗಾರ್ಡ್ (ಡಿಆರ್‍ಜಿ) ಜವಾನ ಸಹ ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಠೆಕಲ್ಯಾಣ್ ಪೆÇೀಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಡಿಆರ್‍ಜೆ ಹಾಗೂ ಜಿಲ್ಲಾ ರಕ್ಷಣಾ ದಳ ಜಂಟಿಯಾಗಿ ಭಾಗವಹಿಸಿದ್ದವು. ನಕ್ಸಲರ ಮೃತದೇಹಗಳು ಜತೆಗೆ ಮೂರು ಆಯುಧಗಳನ್ನು ಸಹ ಭದ್ರತಾಪಡೆ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‍ಟಿಗೆ

ನವದೆಹಲಿ, ಜು. 6: ಹಂತ ಹಂತವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವ್ಯಾಪ್ತಿಗೆ ತರುವ ವಿಚಾರವನ್ನು ಜಿಎಸ್‍ಟಿ ಮಂಡಳಿ ಪರಿಗಣಿಸಲಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಹಸ್ಮುಖ್ ಆಧಿಯಾ ಹೇಳಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ಇದ್ದು, ಆ ಕುರಿತು ಚರ್ಚಿಸಲಾಗುತ್ತಿದೆ. ಎಲ್ಲವೂ ಹಂತ ಹಂತವಾಗಿ ಜಾರಿಗೆ ಬರಲಿವೆ ಎಂದು ಆಧಿಯಾ ತಿಳಿಸಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಅಧ್ಯಕ್ಷ ಎಸ್. ರಮೇಶ್ ಅವರು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಜಿಎಸ್‍ಟಿ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. ಸದ್ಯ ಪೆಟ್ರೋಲ್, ಡೀಸೆಲ್, ಕಚ್ಚಾ ತೈಲ, ನೈಸರ್ಗಿಕ ಅನಿಲ್ ಮತ್ತು ವಾಯುಯಾನ ಟರ್ಬೈನ್ ಇಂಧನವನ್ನು ಜಿಎಸ್‍ಟಿಯಿಂದ ಹೊರಗಿಡಲಾಗಿದೆ.

ಆಸಿಯಾ ಅಂದ್ರಾಬಿ ಎನ್‍ಐಎ ವಶಕ್ಕೆ

ನವದೆಹಲಿ, ಜು. 6: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಭಾಷಣೆ ಮಾಡಿ ಕುಖ್ಯಾತಿಗಳಿಸಿದ್ದ ನಿಷೇಧಿತ ದುಕತರಾನ್-ಏ-ಮಿಲತ್ ಸಂಘಟನೆಯ ಮುಖ್ಯಸ್ಥೆ ಆಸಿಯಾ ಅಂದ್ರಾಬಿಯನ್ನು ಎನ್‍ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಸಿಯಾ ಅಂದ್ರಾಬಿಯೊಂದಿಗೆ ಆಕೆಯ ಇಬ್ಬರು ಸಹವರ್ತಿಗಳಾದ ಸೋಫಿ ಫಹ್ಮಿದಾ ಹಾಗೂ ನಹಿದಾ ನಸ್ರಿನ್ರನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್‍ನಲ್ಲಿ ದೇಶದ ವಿರುದ್ಧ ಯುದ್ಧ ಸಾರಿದ್ದ ಆಸಿಯಾಳನ್ನು ಶ್ರೀನಗರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಆಸಿಯಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕಾಶ್ಮೀರ ಹೈಕೋರ್ಟ್ ಕಳೆದ ತಿಂಗಳು ವಜಾಗೊಳಿಸಿತ್ತು. ಇದಕ್ಕೂ ಮೊದಲು ಕೇಂದ್ರ ಗೃಹಸಚಿವಾಲಯದ ಆದೇಶದ ಮೇರೆಗೆ ಅಂದ್ರಾಬಿ ಹಾಗೂ ಆಕೆಯ ಸಹವರ್ತಿಗಳ ಮೇಲೆ ವಿಧ್ವಂಸಕ ಕೃತ್ಯ (ತಡೆ) ಕಾಯಿದೆ 1967ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ದ್ವೇಷ ಭಾಷಣಗಳನ್ನು ನೀಡುವ ಮೂಲಕ ಭಾರತದ ಐಕ್ಯತೆ, ಸಮಗ್ರತೆ ಹಾಗು ಸರ್ವಭೌಮತೆಯನ್ನು ಅಪಾಯಕ್ಕೆ ಸಿಲುಕಿಸುವ ಕೆಲಸವನ್ನು ಅಂದ್ರಾಬಿ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂದು ಬಹಿರಂಗವಾಗಿ ಹೇಳುವ ಆಸಿಯಾ, ದೇಶದ ವಿರುದ್ಧ ಹಿಂಸಾಚಾರ ನಡೆಸಲು ಜಿಹಾದ್ಗೆ ಕರೆ ನೀಡಿದ್ದಾಳೆ ಎಂದು ಆಕೆಯ ವಿರುದ್ಧದ ಎಫ್‍ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಈಕೆ ನಡೆಸುತ್ತಿರುವ ಸಂಘಟನೆ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುಲಾಗುತ್ತಿದ್ದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವದು ಕಷ್ಟವಾಗುತ್ತಿದೆ

ಪಿ.ವಿ. ಸಿಂಧೂ-ಪ್ರಣೋಯ್‍ಗೆ ಸೋಲು

ಇಂಡೋನೇಷಿಯಾ, ಜು. 6: ಪ್ರತಿಷ್ಠಿತ ಇಂಡೋನೇಷಿಯಾ ಬಿಎಡಬ್ಲ್ಯುಎಫ್ ವಲ್ರ್ಡ್ ಟೂರ್ ಸೂಪರ್ 1000 ಟೂರ್ನಮೆಂಟ್‍ನಲ್ಲಿ ಕ್ವಾರ್ಟರ್ ಫೈನಲ್ಸ್ ಹಂತ ತಲಪಿದ್ದ ಭಾರತದ ಪಿ.ವಿ. ಸಿಂಧೂ ಹಾಗೂ ಹೆಚ್.ಎಸ್. ಪ್ರಣೋಯ್ ಸೋಲಿನ ಆಘಾತ ಅನುಭವಿಸಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ಪಿ.ವಿ. ಸಿಂಧೂ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 21-14, 21-15ರ ಅಂತರದಲ್ಲಿ ಸೋಲು ಕಂಡಿದ್ದಾರೆ. ಪುರುಷರ ಕ್ವಾರ್ಟರ್ ಫೈನಲ್ಸ್ ಹಂತ ತಲಪಿ ಪ್ರಶಸ್ತಿಯ ಆಸೆ ಮೂಡಿಸಿದ್ದ ಪ್ರಣೋಯ್ ಸಹ ಶಿ ಯೂಕಿ ವಿರುದ್ಧ 21-17, 21-18ರ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಕಳೆದ ವಾರ ಮಲೇಷ್ಯಾ ಓಪನ್‍ನಲ್ಲಿ ಸೆಮಿಫೈನಲ್ಸ್‍ನಲ್ಲಿ ಸೋತು ಮರಳಿದ್ದ ಸಿಂಧೂ ಭಾರತದ ಪಾಲಿಗೆ ಇಂಡೋನೇಷ್ಯಾ ಓಪನ್ ಗೆಲ್ಲುವ ಭರವಸೆಯ ಆಟಗಾರ್ತಿಯಾಗಿದ್ದರು.