ಮಡಿಕೇರಿ, ಜು. 6: ಕೊಡಗಿನ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಐದು ಕಡೆಗಳಲ್ಲಿ ಇಂದು ಎಟಿಎಂ ಕೇಂದ್ರಗಳಿಗೆ ಚಾಲನೆ ನೀಡಲಾಯಿತು. ಆ ಮುಖಾಂತರ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಪೂರಕವಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕಾರ್ಯನಿರ್ವಹಿಸುವ ದಿಸೆಯಲ್ಲಿ ಗ್ರಾಹಕರಿಂದ ಮೆಚ್ಚುಗೆಗೆ ಪಾತ್ರವಾಯಿತು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮುಖ್ಯ ಶಾಖೆಯ ಎಟಿಎಂ ಶಾಖೆಯನ್ನು ನಿವೃತ್ತ ಅಧಿಕಾರಿ ಕೆ.ಎಸ್. ಚಿಣ್ಣಪ್ಪ ಉದ್ಘಾಟಿಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಬಿ.ಡಿ. ಮಂಜುನಾಥ್ ಅವರು ಮಾತನಾಡಿ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ನಬಾರ್ಡ್ ಸಹಕಾರದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯ ಡಿಸಿಸಿ ಬ್ಯಾಂಕ್ ಆವರಣ ಹಾಗೂ ಕಾಲೇಜು ರಸ್ತೆ, ಕುಶಾಲನಗರ, ವೀರಾಜಪೇಟೆ, ಗೋಣಿಕೊಪ್ಪ ಈ ಐದು ಕಡೆಗಳಲ್ಲಿ ಎಟಿಎಂ ಕೇಂದ್ರಗಳನ್ನು ಆರಂಭಿಸ ಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ 34 ಸಾವಿರ ರೂ.ಪೇ ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದ್ದು, ಇವರೆಲ್ಲರೂ ಸಹಕಾರ ಎಟಿಎಂಗಳನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕುಗಳಲ್ಲಿ ಎಟಿಎಂ.ಗಳನ್ನು ಆರಂಭಿಸಲು ಚಿಂತನೆ ಮಾಡಲಾಗಿದೆ. ಅದಕ್ಕಾಗಿ ಸಹಕಾರಿಗಳ ಬೇಡಿಕೆಯು ಸಹ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆ ಪರಿಶೀಲಿಸಿ ಎಟಿಎಂ ತೆರೆಯ ಲಾಗುವದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ತಿಳಿಸಿದರು.

ಈಗಾಗಲೇ ಸರ್ಕಾರದ ಸೌಲಭ್ಯಗಳನ್ನು ಸಹಕಾರಿಗಳಿಗೆ ನೇರವಾಗಿ ವರ್ಗಾವಣೆಯಾಗಲಿವೆ. ಹಾಗೆಯೇ ಆನ್‍ಲೈನ್ ಮೂಲಕ ವ್ಯವಹಾರಗಳು ನಡೆಯಲಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಂತೆ ಸಹಕಾರ ಬ್ಯಾಂಕುಗಳು ಸಹ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಬಿ.ಡಿ.ಮಂಜುನಾಥ್ ಅವರು ತಿಳಿಸಿದರು.

ಸಾಲ ಮನ್ನಾ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಜಿಲ್ಲೆಯ 131 ಸಹಕಾರಿಗಳಿಗೆ ಅನುಕೂಲವಾಗಬಹುದು ಎಂದು ಅವರು ತಿಳಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಕೆ.ಎಸ್.ಹರೀಶ್ ಪೂವಯ್ಯ, ನಿರ್ದೇಶಕರಾದ ಎಂ.ಎನ್.ಕುಮಾರಪ್ಪ, ಬೆಲ್ಲು ಸೋಮಯ್ಯ, ಬಲ್ಲಾರಂಡ ಮಣಿಉತ್ತಪ್ಪ, ಪಟ್ರಪಂಡ ಬಿ.ರಘು ನಾಣಯ್ಯ, ಸುಜು ತಿಮ್ಮಯ್ಯ, ಕನ್ನಂಡ ಸಂಪತ್, ಹೊಸೂರು ಸತೀಶ್ ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನುಮುತ್ತಪ್ಪ, ಕೊಡಗು ಜಿಲ್ಲಾ ಕಾಫಿ ಬೆಳಗಾರರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ, ಕೊಡವ ಸಮಾಜದ ಅಧ್ಯP ಕೆ.ಎಸ್.ದೇವಯ್ಯ, ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾ ಇತರರು ಇದ್ದರು.

ಇಲ್ಲಿನ ಕಾಲೇಜು ರಸ್ತೆ ಶಾಖೆಯ ಎಟಿಎಂ ಕೇಂದ್ರವನ್ನು ಕೊಡವ ಸಮಾಜ ಅಧ್ಯಕ್ಷ ಕೆ.ಎಸ್. ದೇವಯ್ಯ ಉದ್ಘಾಟಿಸಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಾಡಿನ ಗ್ರಾಹಕರಿಗೆ ವಿಜಯಲಕ್ಷ್ಮಿಯಾಗಿ ಬದುಕು ಕಲ್ಪಿಸಲು ಸಹಕಾರಿಯಾಗಲೆಂದು ಹಾರೈಸಿದರು.

ಈ ಸಂದರ್ಭ ನಿವೃತ್ತ ಪಶುವೈದ್ಯಾಧಿಕಾರಿ ಡಾ. ಕನ್ನಂಡ ಅಯ್ಯಪ್ಪ, ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಕೊಕ್ಕಲೆರ ಸುಜು ತಿಮ್ಮಯ್ಯ ಹಾಗೂ ಇತರ ನಿರ್ದೇಶಕರು, ಬ್ಯಾಂಕ್ ಅಧಿಕಾರಿಗಳು, ಗ್ರಾಹಕರು ಪಾಲ್ಗೊಂಡಿದ್ದರು.

ಕುಶಾಲನಗರ : ಕೇಂದ್ರ ಬ್ಯಾಂಕ್ ಶಾಖೆಯ ಎಟಿಎಂ ಕೇಂದ್ರವನ್ನು ನಿವೃತ್ತ ಅಧಿಕಾರಿ ಕೆ.ಸಿ. ಕೃಷ್ಣಯ್ಯ ಉದ್ಘಾಟಿಸಿದರು. ಈ ವೇಳೆ ಬ್ಯಾಂಕ್ ಜಿಲ್ಲಾಧ್ಯಕ್ಷರು, ನಿರ್ದೇಶಕರ ಸಹಿತ ಅಲ್ಲಿನ ಶಾಖೆ ಅಧಿಕಾರಿಗಳು, ಗ್ರಾಹಕರು ಪಾಲ್ಗೊಂಡು ಶುಭ ಹಾರೈಸಿದರು.

ವಿರಾಜಪೇಟೆ : ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಾರ್ವಜನಿಕರಿಗೆ ಸುಲಭವಾಗಿ ಹಣ ದೊರಕಿಸಿ ಕೊಡುವ ಸಲುವಾಗಿ ಎಟಿಎಂ ಸೇವೆಯನ್ನು ಲೋಕಾರ್ಪಣೆ ಗೊಳಿಸಿದರು. ದೇವಣಗೇರಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಹಾಗೂ ಕದನೂರು ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಎಟಿಎಂ ಕೊಠಡಿಯನ್ನು ಉದ್ಘಾಟಿಸಿದರು.

ವೀರಾಜಪೇಟೆ ಪಟ್ಟಣದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಒಟ್ಟು 10 ಎಟಿಎಂಗಳಿದ್ದು, ಅದರೋಂದಿಗೆ ಕೆಡಿಸಿಸಿ ಬ್ಯಾಂಕ್‍ನ ಎಟಿಎಂ ಕೂಡ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಇದೇ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾದ ರಘನಾಣಯ್ಯ, ಕೋಲತಂಡ ಸುಬ್ರಮಣಿ, ಕರ್ನಂಡ ಸೋಮಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್, ಹಿರಿಯ ಗ್ರಾಹಕರಾದ ಬಿ.ಬಿ ನಾಣಯ್ಯ, ಮಣಿ ನಂಜಪ್ಪ, ಮಾಳೇಟಿರ ಮಣಿ ಸೇರಿದಂತೆ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.

ಗೋಣಿಕೊಪ್ಪ ವರದಿ : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಗೋಣಿಕೊಪ್ಪ ಶಾಖೆಯಲ್ಲಿ ಅಳವಡಿಸಿರುವ ಎಟಿಎಂ ಘಟಕವನ್ನು ಸ್ಥಳಿಯ ಹಿರಿಯ ಗ್ರಾಹಕ ಬುಟ್ಟಿಯಂಡ ಎಂ. ಅಪ್ಪಾಜಿ ಉದ್ಘಾಟಿಸಿದರು.

ಹಿರಿಯರಾದ ಡಾ. ಪಿ. ಸಿ. ಮಾಚಯ್ಯ ಸ್ವೈಪ್ ಮಾಡುವ ಮೂಲಕ ಎಟಿಎಂ ಮೊದಲ ಬಳಕೆದಾರರಾಗಿ ಚಾಲನೆ ನೀಡಿದರು. ಈ ಸಂದರ್ಭ ಬ್ಯಾಂಕ್ ನೋಡಲ್ ಆಫೀಸರ್ ಎನ್. ಕೆ. ಮೋಹನ್, ನಿರ್ದೇಶಕ ಹೆಚ್. ಎಂ. ರಮೇಶ್, ಶಾಖೆ ವ್ಯವಸ್ಥಾಪಕ ಜೆ. ಕೆ. ಸುಬ್ಬಯ್ಯ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಮೂಲಕ ಮೊದಲ ಬಾರಿಗೆ ಅಳವಡಿಸಿರುವ ಎಟಿಎಂ ಘಟಕವನ್ನು ಬಳಕೆ ಮಾಡಲು ಗ್ರಾಹಕರುಗಳು ಪಾಲ್ಗೊಂಡರು.