ನಾಪೆÇೀಕ್ಲು, ಜು. 6: ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬುವಿನಲ್ಲಿ ಪರವಂಡ ಶಂಸು ಎಂಬವರ ಕಾಫಿ ತೋಟದಲ್ಲಿ ತಾ. 5 ರಂದು ಕಂಡು ಬಂದ ಪೆರ್ಪಣ ಮರಿಗಳನ್ನು ಗ್ರಾಮಸ್ಥರು ಚಿರತೆ ಮರಿ ಎಂದು ಭಾವಿಸಿ ಆತಂಕಗೊಂಡ ಘಟನೆ ನಡೆಯಿತು.

ಈ ಮರಿಗಳ ಚಲನವಲನಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದ ಸ್ಥಳೀಯ ಯುವಕರು ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಿದರು. ಕೂಡಲೇ ಬಲೆಯೊಂದಿಗೆ ಸ್ಥಳಕ್ಕಾಗಮಿಸಿದ ಭಾಗಮಂಡಲದ ಅರಣ್ಯಾಧಿಕಾರಿ ಚಂಗಪ್ಪ ಅವರ ತಂಡ ಎರಡು ಮರಿಗಳನ್ನು ಸೆರೆ ಹಿಡಿದು, ಇದು ಚಿರತೆ ಮರಿ ಅಲ್ಲ ಪೆರ್ಪಣ ಮರಿ ಎಂದು ತಿಳಿಸಿದರು. ಇದರಿಂದ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ನಂತರ ಅರಣ್ಯ ಇಲಾಖೆ ಪೆರ್ಪಣ ಮರಿಗಳನ್ನು ವಶಕ್ಕೆ ಪಡೆದು ಅರಣ್ಯಕ್ಕೆ ಬಿಟ್ಟರು.

ಈ ಬಗ್ಗೆ ಶ್ರೀಮಂಗಲದ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಬೋಸ್ ದೇವಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ; ಇದಕ್ಕೆ ಸ್ಥಳೀಯವಾಗಿ ಮತ್ತು ಕನ್ನಡದಲ್ಲಿ ಪೆರ್ಪಣ ಎಂದು ಕೆರೆಯಲಾಗುತ್ತದೆ. ಇಂಗ್ಲೀಷ್‍ನಲ್ಲಿ ಲೆಪರ್ಡ್ ಕ್ಯಾಟ್ ಎಂದು ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.