ಗೋಣಿಕೊಪ್ಪಲು, ಜು. 7: ಗೋಣಿಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಉದ್ಯಾನವನವನ್ನು ಗೋಣಿಕೊಪ್ಪಲು ವಾಹನ ಚಾಲಕರ ಸಂಘದ ವತಿಯಿಂದ ಸ್ವಚ್ಛಗೊಳಿಸಲಾಯಿತು. ವಾಹನ ಚಾಲಕ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಸುಮಾರು 10 ರಿಂದ 15 ಸದಸ್ಯರು ಹಾಗೂ ಕಾರ್ಮಿಕರು ಉದ್ಯಾನವನದ ಒಳಭಾಗದಲ್ಲಿದ್ದ ಕಾಡುಗಳನ್ನು ಕಡಿಯುವದರ ಮೂಲಕ ಸ್ವಚ್ಛಗೊಳಿಸಿ ಉದ್ಯಾನವನಕ್ಕೆ ಮೆರಗನ್ನು ನೀಡಿದರು. ಕಳೆದ ಸಾಲಿನಿಂದ ಈ ಉದ್ಯಾನವನವನ್ನು ವಾಹನ ಚಾಲಕ ಸಂಘದ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಇಲ್ಲಿ ಹೂಗಿಡಗಳನ್ನು ನೆಡಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಇವುಗಳು ನಾಶವಾಗಿದ್ದು, ಮತ್ತಷ್ಟು ಹೂಗಿಡಗಳನ್ನು ನೆಟ್ಟು ಉದ್ಯಾನವನಕ್ಕೆ ಅಂದವನ್ನು ಕಾಣಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದೆಂದು ಸಿ.ಕೆ. ಬೋಪಣ್ಣ ವಿವರಿಸಿದರು.