ಮಡಿಕೇರಿ, ಜು. 7: ಮಿಷನ್ ಅಂತ್ಯೋದಯ ಯೋಜನೆಯ ಅನುಷ್ಠಾನ ಸಂಬಂಧ ಕ್ರಿಯಾ ಯೋಜನೆ ತಯಾರಿಸಬೇಕಿದ್ದು, ಸಂಬಂಧಪಟ್ಟ ಪಿಡಿಒಗಳು ಗ್ರಾಮಸಭೆ ನಡೆಸಿ ಸಮಗ್ರ ಮಾಹಿತಿಯನ್ನು ತಾ.ಪಂ.ಇಒಗಳ ಮೂಲಕ ಒದಗಿ ಸುವಂತೆ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಸೂಚನೆ ನೀಡಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಿಷನ್ ಅಂತ್ಯೋದಯ ಯೋಜನೆ ಅನುಷ್ಠಾನದ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮಿಷನ್ ಅಂತ್ಯೋದಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಪ್ರಥಮ ಹಂತದಲ್ಲಿ ಜಿಲ್ಲೆಯ 19 ಗ್ರಾ.ಪಂ.ಗಳು ಆಯ್ಕೆಯಾಗಿದ್ದು, ಈ ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಸೋಲಾರ್ ದೀಪ, ಅಂಗನವಾಡಿ ಶಾಲೆಗಳು, ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಘನತ್ಯಾಜ್ಯ ವಿಲೇವಾರಿ ಘಟಕ, ವಿದ್ಯುತ್ ಸಂಪರ್ಕ, ಅಡುಗೆ ಅನಿಲ ಸಂಪರ್ಕ, ಬ್ಯಾಂಕ್ ಮತ್ತಿತರ ಸೌಲಭ್ಯಗಳು ಇವೆಯೇ ಎಂಬುದರ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚಿಸಿ ಸಮಗ್ರ ಮಾಹಿತಿ ಸಂಗ್ರಹಿಸಿ ಕ್ರಿಯಾಯೋಜನೆ ಒದಗಿಸುವಂತೆ ಪಿಡಿಒಗಳಿಗೆ ನಿರ್ದೇಶನ ನೀಡಿದರು.

ಕೃಷಿ, ತೋಟಗಾರಿಗೆ, ಪಶು ಪಾಲನೆ, ಮೀನುಗಾರಿಕೆ ಕಾರ್ಯಕ್ರಮ ಗಳ ಅನುಷ್ಠಾನ ಮತ್ತಿತರ ಸಮಗ್ರ ಮಾಹಿತಿ ಒದಗಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆ, ಜೀವನ್ ಜ್ಯೋತಿ, ಇಂದ್ರಧನುಷ್ ಉಜ್ವಲ, ಸುರಕ್ಷಾ ಭೀಮಾ ಯೋಜನೆ ಹೀಗೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಬೇಕಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಕಲಚೇತನರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಚೀಟಿ ನೀಡಲು ಒಂದು ದಿನ ನಿಗದಿಪಡಿಸುವಂತೆ ಸಿಇಒ ಅವರು ಸಲಹೆ ಮಾಡಿದರು.

ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಬ್ಯಾಂಕುಗಳು ಇರಬೇಕು ಎಂಬದು ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ಬ್ಯಾಂಕ್ ಆರಂಭಿಸುವದು ಮತ್ತಿತರ ಸಂಬಂಧ ಮಾಹಿತಿ ಒದಗಿಸಬೇಕಿದೆ ಎಂದರು.

ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗಿ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಸೂಚನೆ ನೀಡಿದರು.

ತಾ. 12 ರಂದು ಬೆ. 9.30 ರಿಂದ 10.30ರವರೆಗೆ ಪ್ರಧಾನಮಂತ್ರಿಯ ವರಿಂದ ನೇರ ಸಂವಾದ ಕಾರ್ಯಕ್ರಮ ವಿದ್ದು, ತಾ.ಪಂ. ಕಚೇರಿಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದರು.

ಜಿ.ಪಂ. ಯೋಜನಾ ನಿರ್ದೇಶಕ ಎಚ್.ಎಸ್. ಬಾಬು ಅವರು ಮಾತನಾಡಿ, ‘ನಮ್ಮ ಗ್ರಾಮ ನಮ್ಮ ಯೋಜನೆ’ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಈ ಯೋಜನೆ ಪರಿಪೂರ್ಣವಾಗಿ ಆಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳ ಬೇಕು ಎಂದು ಸಲಹೆ ಮಾಡಿದರು.

ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಂಧ್ಯಾ, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಜಿ.ಪಂ. ಇಂಜಿನಿಯರ್ ರೇವಣ್ಣವರ್, ತಾ.ಪಂ. ಇಒಗಳಾದ ಲಕ್ಷ್ಮೀ, ಚಂದ್ರಶೇಖರ್, ಜಯಣ್ಣ, ಜೀವನ್ ಕುಮಾರ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ, ಗ್ರಾ.ಪಂ. ಪಿಡಿಒಗಳು ಇತರರು ಹಲವು ಮಾಹಿತಿ ನೀಡಿದರು.

ಮಿಷನ್ ಅಂತ್ಯೋದಯ ಯೋಜನೆಯಡಿ ಕೊಡಗು ಜಿಲ್ಲೆ ಯಿಂದ 19 ಗ್ರಾ.ಪಂ.ಗಳು ಆಯ್ಕೆಯಾಗಿವೆ. ಮಡಿಕೇರಿ ತಾಲೂಕಿನ ನರಿಯಂದಡ, ಮಕ್ಕಂದೂರು, ಮರಗೋಡು, ಹೊದ್ದೂರು, ಗಾಳಿಬೀಡು, ಮೇಕೇರಿ, ಕೆ.ನಿಡುಗಣೆ, ಕಾಂತೂರು-ಮೂರ್ನಾಡು, ಕೊಂಡಗೇರಿ, ವೀರಾಜಪೇಟೆ ತಾಲೂಕಿನ ಅರುವತ್ತೊಕ್ಲು, ಆರ್ಜಿ, ಕಾರ್ಮಾಡು, ಕಿರುಗೂರು, ಪಾಲಿಬೆಟ್ಟ ಮತ್ತು ಪೊನ್ನಂಪೇಟೆ. ಸೋಮವಾರಪೇಟೆ ತಾಲೂಕಿನ ಕೂಡಿಗೆ, ಮುಳ್ಳುಸೋಗೆ, ತೊರೆನೂರು, ವಾಲ್ನೂರು ತ್ಯಾಗತ್ತೂರು.