ಮಡಿಕೇರಿ, ಜು. 6: ಇದೇ ತಾ. 3 ರಿಂದ ಬರುವ ಆಗಸ್ಟ್ 31ರ ತನಕ ಜಿಲ್ಲೆಯಾದ್ಯಂತ ಮರಳು ಮತ್ತು ಯಾವದೇ ಮರದ ದಿಮ್ಮಿಗಳ ಸಾಗಾಟ ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದರೂ, ಅರಣ್ಯ ಮತ್ತು ಪೊಲೀಸ್ ಇಲಾಖೆಯಿಂದ ಯಾವದೇ ಕ್ರಮ ಜರುಗಿಸದೆ ಸಾಗಾಟಕ್ಕೆ ಅವಕಾಶ ಕಲ್ಪಿಸಿರುವ ಪ್ರಸಂಗ ಬಹಿರಂಗಗೊಂಡಿದೆ. ಈ ಬಗ್ಗೆ ಮಾಜಿ ಜಿ.ಪಂ. ಸದಸ್ಯ ಅರಮಣಮಾಡ ಪಿ. ರಂಜನ್ ಚಂಗಪ್ಪ ದಾಖಲೆ ಸಹಿತ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗೋಣಿಕೊಪ್ಪಲು - ಹುಣಸೂರು ಹೆದ್ದಾರಿಯ ಚೆನ್ನಂಗೊಲ್ಲಿ ಎಂಬಲ್ಲಿ ಲಾರಿಯೊಂದರಲ್ಲಿ (ಕೆ.ಎ. 12 - 9141) ಸಿಲ್ವರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈ ದಿಮ್ಮಿಗಳ ಸಾಗಾಟ ನಿರ್ಬಂಧಿಸಲು ತಮಗೆ ಯಾವದೇ ಅಧಿಕಾರವಿಲ್ಲ ವೆಂದು ನುಣುಚಿಕೊಂಡಿದ್ದಾಗಿ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಅಲ್ಲದೆ ತಾನು ಪೊಲೀಸ್ ಠಾಣಾ ಹಂತದಿಂದ ಪೊಲೀಸ್ ವರಿಷ್ಠರು ಹಾಗೂ ಅರಣ್ಯ ವಲಯ ಅಧಿಕಾರಿಯಿಂದ ಕೊಡಗು ವೃತ್ತ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ವಹಿಸಲು ತಿಳಿಸಿದ್ದರೂ, ಉಭಯ ಕಡೆಯಿಂದ ಸಿಲ್ವರ್ ದಿಮ್ಮಿಗಳ ಸಾಗಾಟ ತಡೆಹಿಡಿಯಲು ನಿರಾಕರಿಸಿದ್ದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳಾದ ತಾವು ಹೊರಡಿಸಿರುವ ಆದೇಶಕ್ಕೆ ಬೆಲೆಯಿಲ್ಲವೆ? ಎಂದು ರಂಜನ್ ಚಂಗಪ್ಪ ಪ್ರಶ್ನಿಸಿದ್ದಾರೆ. ಅಲ್ಲದೆ ತಾವು ಮರದ ದಿಮ್ಮಿಗಳ ಮತ್ತು ಮರಳು ಇತ್ಯಾದಿ ಸಾಗಾಟಕ್ಕೆ ಅವಕಾಶ ಕಲ್ಪಿಸದೆ ಮಳೆಗಾಲದಲ್ಲಿ ಕೊಡಗಿನ ರಸ್ತೆಗಳು ಹಾಳಾಗದಂತೆ ನಿಗಾ ವಹಿಸುವಂತೆ ಜಿ.ಪಂ. ಮಾಜಿ ಸದಸ್ಯರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.