ಮಡಿಕೇರಿ, ಜು. 6 : ಕೊಡಗು ಜಿಲ್ಲೆಯಲ್ಲಿ ಜೂನ್ ಎರಡನೇ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ವೀರಾಜಪೇಟೆ ತಾಲ್ಲೂಕಿನ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿರುವ ಪೆರುಂಬಾಡಿ ಯಿಂದ ಮಾಕುಟ್ಟವರೆಗಿನ ರಸ್ತೆ ಹಾಗೂ ಸೇತುವೆಗಳು ಮಣ್ಣು ಕುಸಿದು, ಮರಗಳು ಬಿದ್ದು ಹದಗೆಟ್ಟಿರುತ್ತದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಲಘು ಹಾಗೂ ಭಾರೀ ವಾಹನಗಳು ಸಂಚರಿಸುವದರಿಂದ ಸಾರ್ವಜನಿಕ ಜೀವಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವದರಿಂದ ರಸ್ತೆಯ ದುರಸ್ತಿ ಮಾಡುವ ಕಾರ್ಯ ಪೂರ್ಣಗೊಳ್ಳುವವರೆಗೆ ಈ ರಸ್ತೆ ಮಾರ್ಗ ಎಲ್ಲಾ ತರಹೆಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಜುಲೈ 12 ರ ವರೆಗೆ ನಿಷೇಧಿಸಿ, ಬದಲಿ ಮಾರ್ಗವಾದ ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂಗಲ-ಕುಟ್ಟ ಮುಖಾಂತರ ಸಂಚರಿಸಲು ಸೂಚಿಸಲಾಗಿತ್ತು.
ಕೇರಳ ರಾಜ್ಯ ಹೆದ್ದಾರಿಯ ಮಾರ್ಗದ ಮಧ್ಯೆ ಇರುವ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆ ಬದಿಯಲ್ಲಿ ಮಳೆ-ಗಾಳಿಗೆ ಬಿದ್ದ ಮರಗಳು ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ಅರಣ್ಯ ಇಲಾಖೆ ಮುಖಾಂತರ ಕಡಿದು ಈ ಸ್ಥಳದಿಂದ ತೆರವುಗೊಳಿಸ ಲಾಗಿರುತ್ತದೆ. ಅಲ್ಲದೆ, ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ತಾತ್ಕಾಲಿಕ ಕಾಮಗಾರಿಗಳು, ರಕ್ಷಣಾ ಕಾಮಗಾರಿ ಗಳನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡು ಪ್ರಸ್ತುತ ಲಘು ವಾಹನಗಳ ಸಂಚಾರಕ್ಕೆ ಯೋಗ್ಯವಾದ ರೀತಿಯಲ್ಲಿ ಪೂರ್ಣಗೊಳಿಸಲಾಗಿದೆ.
ಪ್ರಸ್ತುತ, ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಉಂಟಾಗಿದ್ದ ಭೂಕುಸಿತ ಮತ್ತು ಬಿದ್ದ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳನ್ನು ತೆರವುಗೊಳಿಸಿರುವದರಿಂದ ಮತ್ತು ಹಾನಿಗೀಡಾಗಿದ್ದ ರಸ್ತೆಯಲ್ಲಿ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಂಡಿರುವದರಿಂದ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ(5)ರಲ್ಲಿ ಪ್ರದತ್ತವಾದ ಅಧಿಕಾರದಂತೆ ಜೂನ್ 13 ರಂದು ಹೊರಡಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸಿ, ಸಾರ್ವಜನಿಕರ ಮತ್ತು ಪ್ರಯಾಣಿಕರ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಎಲ್ಲಾ ತರಹೆಯ ವಾಹನಗಳ ಸಂಚಾರ ನಿಷೇಧಿಸಿರುವ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆಯಲ್ಲಿ ತಾ. 7 ರಿಂದ (ಇಂದು) ಅನ್ವಯಿಸುವಂತೆ ದ್ವಿಚಕ್ರ, ತ್ರಿ-ಚಕ್ರ ಮತ್ತು ನಾಲ್ಕು ಚಕ್ರದ ಲಘು ವಾಹನಗಳು ಮಾತ್ರ ಸಂಚರಿಸುವದು. ಲಘು ವಾಹನಗಳು ಅರಣ್ಯ ಭಾಗದ 23 ಕಿ.ಮೀ. ರಸ್ತೆಯಲ್ಲಿ ಗರಿಷ್ಟ ಗಂಟೆಗೆ 30 ಕಿ.ಮೀ. ವೇಗ ಮೀರದಂತೆ ಹಾಗೂ ನಿಗದಿತ ಅವಧಿಯಲ್ಲಿ ಈ ಪ್ರದೇಶವನ್ನು ಹಾದು ಹೋಗುವಂತೆ ಸಂಚರಿಸುವದು. ಅರಣ್ಯ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಿ, ಈ ಷರತ್ತುಗಳಿಗೆ ಒಳಪಟ್ಟು ಕಡ್ಡಾಯವಾಗಿ ಪಾಲಿಸುವ ನಿಬಂಧನೆಗೆ ಒಳಪಡಿಸಿ, ಮುಂದಿನ ಆದೇಶದವರೆಗೆ ಪ್ರಯಾಣಿಕರ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.
ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಈ ವಾಹನಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ತರಹೆಯ ವಾಹನಗಳು ಬದಲಿ ರಸ್ತೆಯಾದ ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂಗಲ-ಕುಟ್ಟ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ. ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕರ, ವಾಹನ ಸವಾರರ ಸುರಕ್ಷತೆಯ ದೃಷ್ಠಿಯಿಂದ ಈ ಆದೇಶ ಕಡ್ಡಾಯವಾಗಿ ಪಾಲನೆಗಾಗಿ ಆರಕ್ಷಕ, ಅರಣ್ಯ, ಪ್ರಾದೇಶಿಕ ಸಾರಿಗೆ ಇಲಾಖೆಯ ಸಿಬ್ಬಂದಿಗಳನ್ನು ತನಿಖಾ ಠಾಣೆಗೆ ನಿಯೋಜಿಸಲು ಹಾಗೂ ಆರಕ್ಷಕ, ಅರಣ್ಯ, ಲೋಕೋಪಯೋಗಿ ಇಲಾಖೆಯ ಮೊಬೈಲ್ ಪ್ಯಾಟ್ರೋಲಿಂಗ್ ತಂಡಗಳು ಪ್ರತಿನಿತ್ಯ (24x7 ಮಾದರಿಯಲ್ಲಿ) ಪಹರೆ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಈ ಬಗ್ಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.