ಸೋಮವಾರಪೇಟೆ, ಜು. 6: ವಸತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹಣ ಬೇಡಿಕೆ ಇಟ್ಟಿದ್ದ ಗ್ರಾ.ಪಂ. ಅಧ್ಯಕ್ಷೆ ಸೇರಿದಂತೆ ಉಪಾಧ್ಯಕ್ಷರು ಸಹ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಯಲ್ಲಿ ನಡೆದಿದೆ. ಗ್ರಾ.ಪಂ. ವ್ಯಾಪ್ತಿಯ ವಸತಿ ರಹಿತರಿಗೆ ಮನೆ ಒದಗಿಸಲು ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಅಹಮ್ಮದ್ ಅವರುಗಳು ಫಲಾನುಭವಿ ಗಳಿಂದ ಹಣದ ಬೇಡಿಕೆ ಇಟ್ಟಿದ್ದರೂ ಎನ್ನಲಾಗಿದ್ದು, ಈ ಬಗ್ಗೆ ಹಾರೋಹಳ್ಳಿ ದಯಾನಂದ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಇಂದು ಸಂಜೆ ಕಾರ್ಯಾಚರಣೆ ನಡೆಸಿ, ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.