ಕೂಡಿಗೆ, ಜು. 5 : ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿ ಅಣೆಕಟ್ಟೆಯ ಎಡದಂಡೆಯ 13ನೇ ತೂಬಿನ ಹೂಳೆತ್ತುವ ಕಾಮಗಾರಿಯ ಗುತ್ತಿಗೆದಾರ ಸ್ವಲ್ಪ ಮಟ್ಟಿಗಾದರೂ ಕೆಲಸ ನಿರ್ವಹಿಸದೇ ಮೇಲ್ಮಟ್ಟದ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ, ರೂ.3 ಕೋಟಿ ಹಣ ಪಡೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ತೊರೆನೂರು ನೀರು ಬಳಕೆದಾರರ ಸಂಘದ ಸಭೆಯಲ್ಲಿ ಈ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕಳೆದ 4 ವರ್ಷದ ಹಿಂದೆ ಕಾವೇರಿ ನೀರಾವರಿ ನಿಗಮದ ಮೂಲಕ ಟೆಂಡರ್ ಕರೆದು ಹೊರಜಿಲ್ಲೆಯ ಗುತ್ತಿಗೆ ಪಡೆದು 13ನೇ ತೂಬು ಮತ್ತು ಅದಕ್ಕೆ ಸಂಬಂಧಪಟ್ಟ ಉಪ ಕಾಲುವೆಗಳ ಹೂಳು ತೆಗೆಯುವದು, ಕೊನೆಯ ಭಾಗದ ರೈತರ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿದೆ. ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 13ನೇ ತೂಬಿನ ಕಾಮಗಾರಿ ಸ್ಥಳವನ್ನು ನೀರಾವರಿ ಇಲಾಖೆಯ ಮೇಲಾಧಿಕಾರಿಗಳಾದ ಅಧೀಕ್ಷಕ ಅಭಿಯಂತರ ಹಾಗೂ ಅಧೀಕ್ಷಕ ಸಹಾಯಕ

(ಮೊದಲ ಪುಟದಿಂದ) ಅಭಿಯಂತರು, ಸ್ಥಳ ಪರಿಶೀಲನೆ ನಡೆಸದೆ ಗುತ್ತಿಗೆದಾರನಿಗೆ ಹಣ ಪಾವತಿ ಮಾಡಿದ್ದಾರೆ. ಕಾಮಗಾರಿ ನಡೆಯದೆ, ಕಾಮಗಾರಿ ನಡೆದಿದೆ ಎಂದು ದಾಖಲೆ ಸೃಷ್ಟಿಸಿರುವ ಆರೋಪವಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ತೊರೆನೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟಚಲ, ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ, ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ನೀರು ಬಳಕೆದಾರರ ಸಂಘದ ನಿರ್ದೇಶಕರಾದ ಲೋಕೇಶ್, ನಾಗೇಶ್, ಗೋವಿಂದ, ಪರಶಿವಪ್ಪ ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಚರ್ಚೆ ನಡೆಸಿ ಹಣ ದುರುಪಯೋಗದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. - ಕೆ.ಕೆ.ನಾಗರಾಜಶೆಟ್ಟಿ