ಕೂಡಿಗೆ, ಜು. 3: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ವಿಶೇಷ ಸಭೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ಮುಳ್ಳುಸೋಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಮಾಂಸದ ಮಳಿಗೆಗಳಿಗೆ ಗ್ರಾಮ ಪಂಚಾಯಿತಿ ನಿಯಮದಂತೆ ಪರವಾನಿಗೆ ನೀಡಲಾಗಿದೆ. ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ಮಾಂಸದ ಅಂಗಡಿಗಳನ್ನು ತೆರವುಗೊಳಿಸಲು ಸಭೆ ತೀರ್ಮಾನಿಸಿತು. ನಂತರ ಸದಸ್ಯರು ನೂರು ಮೀಟರ್ ಅಂತರದೊಳಗಿನ ಮಾಂಸದ ಮಳಿಗೆಗಳಿಗೆ ತೆರಳಿ, ಮಳಿಗೆಗಳ ಸ್ಥಳಾಂತರಕ್ಕಾಗಿ ಒಂದು ವಾರದವರೆಗೆ ಸಮಯಾವಕಾಶ ನೀಡಿದರು.

ಸಭೆಯಲ್ಲಿ ಗ್ರಾಮ ಸಭೆ ದಿನಾಂಕಗಳನ್ನು ನಿಗದಿ ಪಡಿಸಲಾಯಿತು. ವಾರ್ಡ್ ಸಭೆಗಳನ್ನು ತಾ. 10 ರಿಂದ ನಡೆಸಲು ತೀರ್ಮಾನಿಸಲಾಯಿತು. 18-19ನೇ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆ ಬಗ್ಗೆ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚೆಗಳು ನಡೆದವು.

ಈ ಸಂದರ್ಭ ಉಪಾಧ್ಯಕ್ಷ ತಾರಾನಾಥ್, ಸದಸ್ಯರಾದ ಶಿವಾನಂದ, ಹರೀಶ್, ಸುರೇಶ್, ರುದ್ರಾಂಬಿಕೆ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಸಭೆಯಲ್ಲಿದ್ದರು.