ವಿಶೇಷ ವರದಿ: ಚಂದ್ರಮೋಹನ್ಕು ಶಾಲನಗರ, ಜು. 3: ಭೂಮಿಯ ಬೆಲೆ ಗಗನಕ್ಕೆ ಏರುತ್ತಿರುವ ಬೆನ್ನಲ್ಲೇ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಸಾರ್ವಜನಿಕ ಉಪಯೋಗಕ್ಕೆಂದು ಮೀಸಲಿರಿಸಿದ ರಸ್ತೆ, ಉದ್ಯಾನವನ ಖಾಸಗಿಯವರ ಪಾಲಾಗುವದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ದಂಧೆ ಮಿತಿ ಮೀರುವದರೊಂದಿಗೆ ಇದೀಗ ಜಲಮೂಲಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿರುವ ಆತಂಕದ ಬೆಳವಣಿಗೆ ಎದುರಾಗಿದೆ.ಜೀವನದಿ ಕಾವೇರಿ ಜಲಮೂಲಗಳಾಗಿದ್ದ ಕುಶಾಲನಗರದ ಐತಿಹಾಸಿಕ ತಾವರೆಕೆರೆ, ಪಟ್ಟಣದ ಹೃದಯ ಭಾಗದಲ್ಲಿರುವ ಕುಂಬಾರಕೆರೆ, ಕುಶಾಲನಗರ ಮುಳ್ಳುಸೋಗೆ ನಡುವೆ ಕಂಡುಬರುವ ಸೋಮದೇವನ ಕೆರೆ, ಗೌಡ ಸಮಾಜದ ಮುಂಭಾಗದಲ್ಲಿರುವ ಹುಲಿಕೆರೆ, ಕುಳುವಾಡಿ ಕಟ್ಟೆ ಕೆರೆ, ಕೋಣಮಾರಿ ಕೆರೆ, ಸೇರಿದಂತೆ ಬಹುತೇಕ ಕೆರೆ, ಬನಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವದು ಕಂಡುಬಂದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗುವದ ರೊಂದಿಗೆ ಸರಕಾರಿ ವ್ಯವಸ್ಥೆ ಬಹುತೇಕ ಬುಡಮೇಲಾಗಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.

ಕುಶಾಲನಗರದಿಂದ ಮಡಿಕೇರಿಗೆ ತೆರಳುವ ರಸ್ತೆಯಲ್ಲಿರುವ ತಾವರೆಕೆರೆ ಸರ್ವೆ ನಂ 35 ರ ವ್ಯಾಪ್ತಿಯಲ್ಲಿದ್ದು, ಬೈಚನಹಳ್ಳಿ ಗ್ರಾಮದ ಅಂಚಿನಲ್ಲಿದೆ. ಇದರ ವಿಸ್ತೀರ್ಣ ಅಂದಾಜು 1.9 ಎಕರೆ ವಿಸ್ತೀರ್ಣ ಇದ್ದು ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತದ ನಿರ್ವಹಣೆಯ ಕೊರತೆಯಿಂದ ಕೆರೆ ಅವಸಾನದ ಅಂಚಿಗೆ ತಳ್ಳಲ್ಪಟ್ಟಿದೆ.

ಗುಂಡೂರಾವ್ ಬಡಾವಣೆಗೆ ಒತ್ತಿನಲ್ಲಿರುವ ಈ ಕೆರೆ ಮೇಲ್ಭಾಗದಲ್ಲಿ ಗೊಂದಿಬಸವನಹಳ್ಳಿ ವ್ಯಾಪ್ತಿಯಿಂದ ಬರುವ ಸುಮಾರು 14 ಎಕರೆ ವಿಸ್ತೀರ್ಣದ ರೊಂಡಕೆರೆಗೆ ಸಂಪರ್ಕ ಕಲ್ಪಿಸುವದರೊಂದಿಗೆ ಈ ವ್ಯಾಪ್ತಿಯ ಕೃಷಿ ಚಟುವಟಿಕೆಗಳಿಗೆ ಜಲಮೂಲ ಕಲ್ಪಿಸುವ ಆಧಾರವಾಗಿತ್ತು. ಕ್ರಮೇಣ ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಲ್ಲಿ ಬಡಾವಣೆಗಳು ತಲೆ ಎತ್ತುವದ ರೊಂದಿಗೆ ಸಂಬಂಧಿಸಿದ ಅಧಿಕಾರಿಗಳು ಕೆರೆಯ ಬಗ್ಗೆ ನಿರ್ಲಕ್ಷ್ಯ ತಾಳಿ ಇದೀಗ ಜಲಮಾರ್ಗವೇ ಕಣ್ಮರೆಯಾದಂತಿದೆ.

ಇತ್ತೀಚಿನ ಬೆಳವಣಿಗೆ ಏನೆಂದರೆ ಕುಶಾಲನಗರ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಥಳೀಯ ಪ.ಪಂ. ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ನಿರ್ಮಿಸುವದರೊಂದಿಗೆ ಖಾಸಗಿ ಬಡಾವಣೆಯೊಂದಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೊಂದಿಗೆ ತಾವರೆಕೆರೆಯನ್ನೇ ಮಣ್ಣು ಪಾಲು ಮಾಡಿರುವದು ಕಂಡುಬಂದಿದೆ. ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಂದನೆ ನೀಡುವದರೊಂದಿಗೆ ಕೆರೆಗೆ ಮತ್ತೆ ಕಾಯಕಲ್ಪ ನೀಡುವ ಕೆಲಸ ಮುಂದುವರೆದಿದೆ.

ಪಟ್ಟಣದ ಪ್ರಸ್ತಾವಿತ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಕುಂಬಾರಕೆರೆ ಅಂದಾಜು ಅರ್ಧ ಎಕರೆ ವಿಸ್ತೀರ್ಣ ಹೊಂದಿದ್ದು ಇದು ಕೂಡ ಖಾಸಗಿಯವರ ಪಾಲಾಗಿರುವದು ಕಂಡುಬಂದಿದೆ. ಮುಳ್ಳುಸೋಗೆ ಜಮಾಬಂದಿ 1957 ರ ದಾಖಲೆ ಪ್ರಕಾರ ಕಂಡುಬಂದಿದ್ದ ಸರ್ವೆ ನಂ 138 ರ ಕುಳುವಾಡಿಕಟ್ಟೆ ಕೆರೆ 0.83 ಎಕರೆ ವಿಸ್ತೀರ್ಣ ಹೊಂದಿತ್ತು. ಸರ್ವೆ ನಂ 25 ರ ಕೋಣಮಾರಿ ಕೆರೆ 1.64 ಎಕರೆ, 59 ರ ಸರ್ವೆ ನಂ ನಲ್ಲಿ ಸೋಮೇಶ್ವರ ದೇವರ ಕೆರೆ 1.64 ಎಕರೆ ಸೇರಿದಂತೆ ಎಕರೆಗಟ್ಟಲೆ ವಿಸ್ತೀರ್ಣದ ವಿಸ್ತಾರವಾಗಿದ್ದ ಕೆರೆಗಳು ಇದೀಗ ನಿವೇಶನಗಳಾಗಿ ಪರಿವರ್ತನೆ ಗೊಂಡಿರುವದು ಕಾಣಬಹುದು. ಸ್ಥಳೀಯ ಆಡಳಿತಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಉಳ್ಳವರ ಪಾಲಿಗೆ ಸಾರ್ವಜನಿಕ ಉಪಯೋಗಕ್ಕೆ ಇರಿಸಿದ ಜಾಗಗಳನ್ನು ಪರಭಾರೆ ಮಾಡಿರುವದೇ ಈ ಎಲ್ಲಾ ಆವಾಂತರಗಳಿಗೆ ಕಾರಣವಾಗಿದೆ.

ಕೆರೆಕಟ್ಟೆಗಳ ಸಂರಕ್ಷಣೆಗೆ ಕುಶಾಲನಗರ ನಗರ ಪ್ರಾಧಿಕಾರ ಹಾಗೂ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ. ಕೆರೆಕಟ್ಟೆಗಳು ಮಾಯವಾಗುವದ ರೊಂದಿಗೆ ಬಡಾವಣೆಗಳಾಗುತ್ತಿ ರುವದು ಆತಂಕಕಾರಿ ಸಂಗತಿಯಾಗಿದೆ ಎಂದು ಕುಶಾಲನಗರ ವಿಎಸ್‍ಎಸ್‍ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಸ್. ರಾಜೇಶ್ ತಿಳಿಸಿದ್ದು

(ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ರಾಷ್ಟ್ರೀಯ ಹಸಿರು ಪ್ರಾಧಿಕಾರದ ನಿರ್ದೇಶನ ಮತ್ತು ಪ್ರಾಧಿಕಾರದ ನಿಯಮದ ಪ್ರಕಾರ ಕೆರೆ ಸಂರಕ್ಷಣೆ ರಾಜ್ಯ ಸರಕಾರದ ಪ್ರಮುಖ ಜವಾಬ್ದಾರಿಯಾಗಿದೆ. 2014 ರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮದ ಪ್ರಕಾರ ನೀರು ಇರುವ ಅಥವಾ ಇಲ್ಲದಿರುವ ಸರಕಾರಿ ಕೆರೆ, ಕುಂಟೆ, ಕಟ್ಟೆ, ರಾಜಕಾಲುವೆ ಇವೆಲ್ಲದರ ಒಡೆತನ ರಾಜ್ಯ ಸರಕಾರದ್ದೇ ಆಗಿದೆ. ಇವುಗಳ ಮೇಲಿನ ಒಡೆತನವನ್ನು ಗ್ರಾಪಂ ಅಥವಾ ಸ್ಥಳೀಯ ಆಡಳಿತಕ್ಕೆ ವರ್ಗಾಯಿಸುವಂತೆ ಆದೇಶವನ್ನೂ ನೀಡಲಾಗಿದೆ. ಆದರೆ ಇವೆಲ್ಲವನ್ನು ಗಾಳಿಗೆ ತೂರಿ ನಿಯಮ ಬಾಹಿರವಾಗಿ ಸ್ಥಳೀಯ ಆಡಳಿತಗಳು ಕೆರೆಗಳನ್ನು ಖಾಸಗಿ ಸಂಸ್ಥೆಗಳು, ಉದ್ದಿಮೆಗಳಿಗೆ ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವದು ಕಾಣಬಹುದು. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸುತ್ತಲಿನ 75 ಮೀ ವ್ಯಾಪ್ತಿಯಲ್ಲಿ ಯಾವದೇ ನಿರ್ಮಾಣ ಕಾರ್ಯ ಮಾಡದಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಈ ಪ್ರಕಾರ ಜಲಮೂಲ ರಕ್ಷಣೆಗಾಗಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಸರಕಾರ ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿದೆ.

ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳ ಹಾಗೂ ಜಲಮೂಲಗಳ ರಕ್ಷಣೆಗೆ ಜಿಲ್ಲಾಡಳಿತ ಕಾರ್ಯಯೋಜನೆ ರೂಪಿಸಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕುಶಾಲನಗರದ ತಾವರೆಕೆರೆಗೆ ಸಂಪೂರ್ಣ ಕಾಯಕಲ್ಪ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ನಡುವೆ ಕುಶಾಲನಗರದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಕುಂಬಾರಗಡಿಗೆಯ ಸರ್ವೆ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ ಎಂದು ಭೂಮಾಪನಾ ಉಲಾಖೆಯ ಸಹಾಯಕ ನಿರ್ದೇಶಕ ಶಂಷುದ್ದಿನ್ ಅವರು ಮಾಹಿತಿ ನೀಡಿದ್ದು ಇದರೊಂದಿಗೆ ಸೋಮದೇವನ ಕೆರೆ ವ್ಯಾಪ್ತಿಯ ಸರ್ವೆ ಕಾರ್ಯ ಕೂಡ ನಡೆಯಲಿದೆ ಎಂದಿದ್ದಾರೆ.

ಕುಶಾಲನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಬಡಾವಣೆ ಗಳು ನಿರ್ಮಾಣ ವಾಗುತ್ತಿದ್ದು, ಕೆಲವರು ಸರಕಾರದ ಯಾವದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಲ್ಲಿ ಕೂಡ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತ ಕೂಡ ಕಣ್ಮುಚ್ಚಿ ಕುಳಿತಿದ್ದು ಬಡಾವಣೆಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಿರಿಸುವ ಜಾಗದ ಮಾರಾಟವಾದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹೆಚ್.ಎಸ್.ಅಶೋಕ್ ಆರೋಪಿಸಿ ದ್ದಾರೆ. ನಗರ ಪ್ರಾಧಿಕಾರದ ನಿವೃತ್ತ ಅಧಿಕಾರಿಯೊಬ್ಬರು ಕುಶಾಲನಗರ ಸುತ್ತಮುತ್ತ ಹಲವು ಬಡಾವಣೆಗಳಿಗೆ ಅನುಮೋದನೆ ನೀಡಿದ್ದು ಸರಕಾರದ ಬಹುತೇಕ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದಿರುವ ಅಶೋಕ್, ಕಾವೇರಿ ನದಿ ತಟದಲ್ಲಿ ಅಕ್ರಮ ಕಟ್ಟಡಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡುವದ ರೊಂದಿಗೆ ಸಂಬಂಧಿಸಿದ ಅಧಿಕಾರಿ ಮೇಲೆ ಕಾನೂನು ಕ್ರಮಕೈ ಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.

ಕುಶಾಲನಗರದ ಎಲ್ಲಾ ಕೆರೆಗಳ ಅಸ್ತಿತ್ವವನ್ನು ಉಳಿಸುವದರೊಂದಿಗೆ ಜಲಮೂಲಗಳ ಸಂರಕ್ಷಣೆ ಮಾಡಲು ಜಿಲ್ಲಾಡಳಿತ ವಿಶೇಷ ಕಾರ್ಯಪಡೆ ರಚಿಸುವದರೊಂದಿಗೆ ಕೆರೆಕಟ್ಟೆಗಳಿಗೆ ಮತ್ತೆ ಕಾಯಕಲ್ಪ ಕಲ್ಪಿಸುವಲ್ಲಿ ಕಾರ್ಯೋನ್ಮುಖವಾಗಬೇಕಿದೆ.