ಕುಶಾಲನಗರ, ಜು. 3: ನಾಡಿನ ಜೀವನದಿ ಕಾವೇರಿ ನದಿ ತಟದಲ್ಲಿ ಗಡಿ ಗುರುತು ಮಾಡುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ. ನದಿತಟದಲ್ಲಿನ ಒತ್ತುವರಿ ಜಾಗ ಹಾಗೂ ಕಟ್ಟಡಗಳನ್ನು ತೆರವು ಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಪ್ರವಾಸಿ ತಾಣ ದುಬಾರೆಯಿಂದ ಈ ಕಾರ್ಯ ಆರಂಭವಾಗಿದೆ.ಜಿಲ್ಲಾಧಿಕಾರಿಗಳ ಆದೇಶದಂತೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಮಹೇಶ್, ಸರ್ವೆ ಅಧಿಕಾರಿ ಮಂಜುನಾಥ್, ಕಂದಾಯ ಅಧಿಕಾರಿಗಳ ತಂಡ ಇಂದು ದುಬಾರೆಗೆ ತೆರಳಿ ಕಾವೇರಿ ನದಿಯಿಂದ 120 ಅಡಿ ಅಂತರದವರೆಗೆ ಸರ್ವೆ ಮಾಡಿ ಗಡಿ ಗುರುತಿಸುವ ಕಾರ್ಯ ನಡೆಸಿದ್ದಾರೆ. ಈ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಪುಟ್ಟಮ್ಮ, ಮೋಹನ್, ನಾಗರಾಜ್ ಅವರುಗಳ ವಶದಲ್ಲಿದ್ದ ಜಾಗದಲ್ಲಿದ್ದ ಕಾಫಿ ಗಿಡ, ಅಡಿಕೆ ಮರಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಕೆಲವು ಗದ್ದೆಗಳಲ್ಲಿ ಅನುಮತಿ ಇಲ್ಲದೆ ನಿರ್ಮಿಸಲಾಗಿದ್ದ ಶೆಡ್‍ಗಳನ್ನು ಕೂಡ ತೆರವುಗೊಳಿಸಿದ್ದಾರೆ.ಕೆಲವು ಖಾಸಗಿ ಹೊಟೇಲ್, ಅಂಗಡಿ ಮಳಿಗೆಗಳೂ ಕೂಡ ನದಿ ತಟದಲ್ಲಿದ್ದು, ಇವುಗಳನ್ನು ತೆರವುಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ. ರ್ಯಾಫ್ಟಿಂಗ್‍ಗೆ ಅನುಮತಿ ನೀಡುವ ಸಂಬಂಧ ಇತ್ತೀಚೆಗೆ ಜಿಲ್ಲಾಧಿಕಾರಿಗಳು ದುಬಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಗಡಿ ಗುರುತು ಕಾರ್ಯಕ್ಕೆ ಆದೇಶ ನೀಡಿದ್ದಾರೆ.

ತೆರವು ಕಾರ್ಯಾಚರಣೆ ಸಂದರ್ಭ ಕಂದಾಯ ನಿರೀಕ್ಷಕ ಮಧು, ಗ್ರಾಮ ಲೆಕ್ಕಿಗರಾದ ಅನುಷ, ಅಭಿವೃದ್ಧಿ ಅಧಿಕಾರಿ, ಗ್ರಾಮಸ್ಥರು ಇದ್ದರು.

- ಸಿಂಚು