ಏನಾಗಿದೆ ಈ ಯುವ ಸಮೂಹಕ್ಕೆ? ಛೇ... ಹೀಗೊಂದು ವಿಷಾದ ಪ್ರಸ್ತುತ ಸಮಾಜದಲ್ಲಿ ಯುವ ಪಡೆಯ ವರ್ತನೆಯನ್ನು ಗಮನಿಸಿದಾಗ ಮನದಲ್ಲಿ ಕಾಡುತ್ತದೆ.

ಪೋಷಕರು ಸಾವಿರಾರು ಕನಸು ಕಟ್ಟಿ, ಹಗಲಿರುಳೆನ್ನದೆ ಕಷ್ಟಪಟ್ಟು ನಮ್ಮಂತೆ ನಮ್ಮ ಮಕ್ಕಳು ಭವಿಷ್ಯದಲ್ಲಿ ಕಷ್ಟಕ್ಕೆ ಬೀಳಬಾರದು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಬೇಕೆಂದು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡುತ್ತಾರೆ. ಅದೆಷ್ಟೋ ಮಂದಿ ಕಡು ಬಡತನವಿದ್ದರೂ ಲೆಕ್ಕಿಸದೆ ಮಕ್ಕಳನ್ನು ಕಾಲೇಜುಗಳಿಗೆ ಸೇರಿಸಿ ಓದಿಸುತ್ತಿದ್ದಾರೆ.

ಆದರೆ, ತಮ್ಮ ಪೋಷಕರ ಶ್ರಮವನ್ನು ಸಾರ್ಥಕಗೊಳಿಸಲು ಅವರ ಕನಸನ್ನು ನನಸಾಗಿಸಲು ನಾವೆಷ್ಟು ಪ್ರಯತ್ನಿಸುತ್ತಿದ್ದೇವೆ ಎಂಬ ಬಗ್ಗೆ ವಿದ್ಯಾರ್ಥಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಾಲೇಜು ಎಂದರೆ ಅದು ಸರಸ್ವತಿ ನೆಲೆಸಿರುವ ದೇಗುಲವಿದ್ದಂತೆ. ಅಂತಹ ಕಾಲೇಜಿನ ಆವರಣದಲ್ಲಿ ಹೊಡೆದಾಡುವ ಯುವಕರಿಗೆ ಏನೆನ್ನಬೇಕು. ಇಂತಹ ಘಟನೆಗಳು ಅಲ್ಲಲ್ಲಿ ಆಗಿಂದಾಗ್ಗೆ ನಡೆಯುತ್ತಿದೆ. ಕೆಲವು ಕಡೆ ಖಾಕಿಧಾರಿಗಳ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿರುವ ಬಗ್ಗೆಯೂ ಮಾಹಿತಿಯಿದೆ. ಪೆನ್ನು, ಪುಸ್ತಕ ಹೊತ್ತು ತರಬೇಕಾದ ಬ್ಯಾಗ್‍ನಲ್ಲಿ ಸೈಕಲ್ ಚೈನ್, ಚಾಕು ಚೂರಿಗಳು, ಮಾದಕ ವಸ್ತುಗಳು ಕಾಲೇಜನ್ನು ಪ್ರವೇಶಿಸುತ್ತಿವೆ. ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಮಟ್ಟಕ್ಕೆ ತಲಪಬೇಕೆಂಬ ಛಲ ತುಂಬಿರಬೇಕಾದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷ, ದುರಾಲೋಚನೆ ತುಂಬಿ ತುಳುಕುತ್ತಿದೆ. ಇದೇನಾ ಸಭ್ಯತೆ? ಸಂಸ್ಕøತಿ?

ತಮ್ಮ ಮಕ್ಕಳ ಬಗ್ಗೆ ಆತ್ಮ ವಿಶ್ವಾಸದಿಂದ ಪೋಷಕರು ಬೀಗುವಂತೆ ಮಾಡುವ ಬದಲು, ತಮ್ಮ ಮಕ್ಕಳಿಂದಾದ ತಪ್ಪಿಗೆ ತಲೆ ತಗ್ಗಿಸಿ ಎಲ್ಲರೆದುರು ನಿಲ್ಲುವಂತೆ ಮಾಡುವ ಮಕ್ಕಳು ಮೃಗಗಳಿಗಿಂತಲೂ ಹೀನವಲ್ಲದೆ ಮತ್ತೇನು? ಹದಿ ಹರೆಯದಲ್ಲಿ ‘ಎಂಜಾಯ್‍ಮೆಂಟ್’ ಇದ್ದದ್ದೆ. ಆದರೆ ಅದಕ್ಕೂ ಒಂದು ಮಿತಿ ಇರಬೇಕು. ಮೋಜು ಮಸ್ತಿಯೂ ಕೊಂಚ ನಿಯಂತ್ರಣದಲ್ಲಿರಬೇಕು. ಅದು ಬಿಟ್ಟು ಲಂಗು ಲಗಾಮಿಲ್ಲದ ಕುದುರೆಯಂತೆ, ಮದವೇರಿದ ಆನೆಯಂತೆ ಮನಸೋ ಇಚ್ಛೆ ವರ್ತಿಸುವ ಯುವಕ-ಯುವತಿಯರೆ ನಿಮ್ಮ ಏಳಿಗೆ ಬಯಸಿ, ಆಪತ್ಕಾಲದಲ್ಲಿ ನಮಗೆ ನೆರಳಾಗುತ್ತಾರೆ ಎಂಬ ಆಸೆಯೊಂದಿಗೆ ದಿನದೂಡುತ್ತಿರುವ ನಿಮ್ಮ ಪೋಷಕರ ಶ್ರಮದ ಬಗ್ಗೆ ಕಿಂಚಿತ್ತಾದರೂ ಯೋಚಿಸಿ ಮುನ್ನಡೆಯಿರಿ. ಜಗತ್ತಿನಲ್ಲಿ ನಿಮ್ಮನ್ನು ಅತಿಯಾಗಿ ನಂಬುವವರು ನಿಮ್ಮ ತಂದೆ-ತಾಯಿಗಳು ಮಾತ್ರ. ಅವರ ನಂಬಿಕೆಗೆ ದ್ರೋಹವೆಸಗದಿರಿ. ಅದೆಷ್ಟೋ ಮಂದಿ ವಿದ್ಯಾಭ್ಯಾಸದ ಆಸೆಯಿದ್ದರೂ, ಅನುಕೂಲವಿಲ್ಲದೆ ಪರಿತಪಿಸುತ್ತಾರೆ. ಆದರೆ ಹಲವರಿಗೆ ಆ ಅವಕಾಶ ಸಿಕ್ಕಿದ್ದರೂ, ಅದನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಲು ಶ್ರಮಿಸದೆ, ರೌಡಿಸಂ, ಪುಂಡಾಟಿಕೆ, ಮೋಜಿನಲ್ಲೇ ಕಾಲಕಳೆಯುತ್ತಾರೆ. ಅಂತಹವರಿಗೆ ಕಾಲವೇ ಬುದ್ಧಿ ಕಲಿಸುತ್ತದೆ. ?ಉಜ್ವಲ್ ರಂಜಿತ್