ಮಡಿಕೇರಿ ಜು. 2: ಸಂವಿಧಾನವನ್ನು ರಚಿಸುವ ಮೂಲಕ ಸಮಾನತೆಯ ಆದರ್ಶಗಳನ್ನು ಸಾರಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಕರೆ ನೀಡಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ, ವೃದ್ಧಾಶ್ರಮದ ಬಂಧುಗಳಿಗೆ ವಸ್ತ್ರ ವಿತರಣೆ ಹಾಗೂ ದಲಿತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ. ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡುವದರ ಮೂಲಕ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯ ಎಲ್ಲಾ ರಂಗಗಳಲ್ಲಿ ಪ್ರಗತಿ ಸಾಧಿಸಲು ಸಹಕಾರ ನೀಡಿದ್ದಾರೆ. ಸಮಾಜದಲ್ಲಿನ ಅಸ್ಪೃಶ್ಯತೆ, ಅಂಧಕಾರ, ಮೂಢನಂಬಿಕೆ, ಮೇಲುಕೀಳೆಂಬ ಮನೋಭಾವ ಹೋಗಲಾಡಿಸಲು ಶ್ರಮಿಸಿದ ಆವರು, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯನ್ನು ಕಲ್ಪಿಸಿದ್ದಾರೆ ಎಂದರು.

ಡಾ. ಅಂಬೇಡ್ಕರ್ ಅವರು ಉತ್ತಮ ಶಿಕ್ಷಣ ಪಡೆದಿರುವ ಕಾರಣ ಇವತ್ತಿಗೂ ಮಹಾನ್ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ವಿದ್ಯೆಯಿಂದ ಸಂಸ್ಕಾರ, ವಿನಯ ಕಲಿಯಬಹುದು, ಆದ್ದರಿಂದ ಪ್ರತಿ ವಿದ್ಯಾರ್ಥಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ರಾಜೇಂದ್ರ ಪ್ರಸಾದ್ ಸಲಹೆ ನೀಡಿದರು.

ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಎಚ್.ವಿ.ದೇವದಾಸ್ ಮಾತನಾಡಿ, ರಾಷ್ಟ್ರ ಕಂಡ ಅಪ್ರತಿಮ ಪ್ರಗತಿಪರ ಚಿಂತಕ, ಸಮಾಜ ಸುಧಾರಕ, ಲೇಖಕ, ಸಾಮಾಜಿಕ ನ್ಯಾಯದ ಪ್ರತಿಪಾದಕ ಡಾ.ಅಂಬೇಡ್ಕರ್ ಬಹುಮುಖಿ ಪ್ರತಿಭೆ ಹೊಂದಿದ್ದರು ಎಂದರು.

ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಆದರ್ಶವಾಗಿಟ್ಟುಕೊಂಡು ಇಂದಿನ ಯುವ ಜನತೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಿವೈಎಸ್‍ಪಿ ಸುಂದರ ರಾಜ್ ಮಾತನಾಡಿ ‘ಗ್ರಾಮೀಣರಿಗೆ ಸರ್ಕಾರ ನೀಡುವ ಯೋಜನೆಗಳನ್ನು ತಲಪಿಸಿದಾಗ ಮಾತ್ರ ಡಾ.ಅಂಬೇಡ್ಕರ್ ಅವರ ಆಶಯಗಳು ಈಡೇರಲು ಸಾಧ್ಯವೆಂದರು. ಉತ್ತಮ ಸಮಾಜ ನಿರ್ಮಾಣ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಎಚ್.ವಿ. ದೇವದಾಸ್ ಅವರಿಗೆ “ಕೊಡಗು ದಲಿತ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭ ಜಿಲ್ಲೆಯ ಶ್ರೀಶಕ್ತಿ ವೃದ್ಧಾಶ್ರಮದ ಬಂಧುಗಳಿಗೆ ವಸ್ತ್ರ ವಿತರಣೆ ಮಾಡಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ಮಡಿಕೇರಿ ಡಾ.ಅಂಬೇಡ್ಕರ್ ಭವನದ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷ ಡಾ.ವಿ.ಎಸ್.ಸತೀಶ್, ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ಎಚ್.ಎಲ್. ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.