ವೀರಾಜಪೇಟೆ, ಜು. 1: ಕಳೆದ ಮೂರು ತಿಂಗಳ ಹಿಂದೆ ಇಲ್ಲಿಗೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ಅಭಯಾರಣ್ಯದಿಂದ ಒಂಟಿ ಸಲಗ ವನ್ನು ಗುಂಡು ಹಾರಿಸಿ ಹತ್ಯೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗ್ರಾಮಸ್ಥರ ನಾಲ್ಕು ಮಂದಿಯ ಒಂಟಿ ನಳಿಗೆ ಕೋವಿ ಯನ್ನು ವಶಪಡಿಸಿಕೊಂಡು ಪರೀಕ್ಷೆ ಗಾಗಿ ಬೆಂಗಳೂರಿನ ವಿಧಿ ವಿಧಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.ಕಳೆದ ತಾ. 29.3.2018 ರಂದು ಬೆಳಿಗ್ಗೆ ಪಾಲಂಗಾಲ ಗ್ರಾಮದ ಪ್ರವೀಣ್ ಎಂಬುವರ ಕಾಫಿತೋಟ ದಲ್ಲಿ ಭಾರೀ ಗಾತ್ರದ ಒಂಟಿ ಸಲಗದ ಕಳೇಬರ ಗುಂಡು ಹಾರಿಸಿದ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತು.ವೀರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಆನೆಯ ಕಳೇಬರದ ಮಹಜರು ನಡೆಸಿ ನ್ಯಾಯಾಲಯಕ್ಕೆ ದೂರು ನೀಡಿದ ಮೇರೆ ನ್ಯಾಯಾಲಯದ ಆದೇಶದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸ ಲಾಗಿತ್ತು. ಒಂಟಿ ಸಲಗಕ್ಕೆ ಗುಂಡು ಹಾರಿಸಿ ಹತ್ಯೆಗೈದ ಬಗ್ಗೆ ಅರಣ್ಯ ಇಲಾಖೆಗೆ ಈತನಕ ಆರೋಪಿಗಳು ಗೊತ್ತಾಗದ್ದರಿಂದ ಪ್ರಕರಣದ ಎಫ್.ಐ.ಆರ್. ದಾಖಲಿಸಲಾಗಿದ್ದರೂ ಆರೋಪಿಗಳು ಪತ್ತೆಯಾಗದ್ದರಿಂದ ತನಿಖೆ ಮುಂದುವರೆಸಿದ್ದರು.

ನ್ಯಾಯಾಲಯದ ಆದೇಶದಂತೆ ಒಂಟಿ ಸಲಗದ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿ ಇಲ್ಲಿನ ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಕುಮಾರ್ ಆರಾಧ್ಯ ಅವರನ್ನು ನೇಮಕ ಮಾಡಲಾಗಿದೆ ಆರಾಧ್ಯ ಅವರು ಪಾಲಂಗಾಲ ಗ್ರಾಮದ ಸಲಗದ ಕಳೇಬರ ದೊರೆತ ತೋಟದ ಆಜುಬಾಜಿನ ನಿವಾಸಿ ಗಳಾದ ಕೆ. ಕಾರ್ಯಪ್ಪ, ಕೆ. ಉತ್ತಪ್ಪ, ಕೆ.ಪಿ. ಮುತ್ತಪ್ಪ ಹಾಗೂ ಕೆ. ಪ್ರವೀಣ್ ಅವರುಗಳ ಲೈಸೆನ್ಸ್ ಹೊಂದಿರುವ ಒಂಟಿ ನಳಿಗೆ ಕೋವಿಗಳನ್ನು ಸಲಗದ ಮೃತದೇಹದಲ್ಲಿ ದೊರೆತ ಬುಲ್ಲೆಟ್ ಚಿಲ್ಲುಗಳ ಸಮೇತ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸಲಗದ ಹೊಟ್ಟೆ ಭಾಗದಿಂದ ಚಿಲ್ಲುಗಳು ಹೊರ ಹೊಮ್ಮಿದ್ದು ಈ ಪೈಕಿ ಎರಡು ಚಿಲ್ಲುಗಳು ಹೊಟ್ಟೆ ಭಾಗದಿಂದಲೂ ಒಂದು ಚಿಲ್ಲನ್ನು ಸಲಗದ ತೊಡೆ ಭಾಗದಿಂದ ತೆಗೆದು ಕಳಿಸಲಾಗಿದೆ. ಜೊತೆಗೆ ಬುಲ್ಲೆಟ್‍ನಿಂದ ಗಾಯ ಗೊಂಡಿರುವ ಹೊಟ್ಟೆಯ ಚರ್ಮದ ಭಾಗವನ್ನು ಪರೀಕ್ಷೆಗಾಗಿ ಕೋವಿಗಳ ಜೊತೆಯಲ್ಲಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಪ್ರಯೋಗಾಲಯದಲ್ಲಿ ಬುಲ್ಲೆಟ್‍ನ ಚಿಲ್ಲುಗಳು ಹಾಗೂ ಕೋವಿಗಳ ಹೋಲಿಕೆ ಕುರಿತು ಪರೀಕ್ಷೆ ನಡೆಸಲಾಗುವದು. ವರದಿಯ ನಂತರ ತನಿಖಾಧಿಕಾರಿಗಳು ಪ್ರಕರಣದ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಿರುವದಾಗಿ ತಿಳಿದು ಬಂದಿದೆ.

ತಾ. 28.3.2018 ರಂದು ರಾತ್ರಿ ಕಾಫಿ ತೋಟದೊಳಗೆ ಬಂದ ಎರಡು ದಂತಗಳಿರುವ ಭಾರೀ ಸಲಗವನ್ನು ಗುಂಡು ಹಾರಿಸಿ ಹತ್ಯೆಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.