ಮಡಿಕೇರಿ, ಜು. 1: ಭಾರತದಲ್ಲಿ ಇದೇ ಪ್ರಥಮ ಬಾರಿಗೆ ವಿಶ್ವ ಕಾಫಿ ಸಮ್ಮೇಳನವನ್ನು ಆಯೋಜಿಸುವ ಕುರಿತು ತೀರ್ಮಾನಿಸಲಾಗಿದೆ. ಕಾಫಿ ಉತ್ಪಾದಿಸುವ ವಿವಿಧ ದೇಶಗಳಲ್ಲಿ ಈ ತನಕ ನಾಲ್ಕು ವಿಶ್ವ ಕಾಫಿ ಸಮ್ಮೇಳನ ನಡೆದಿದ್ದು, ಐದನೇ ಸಮ್ಮೇಳವನ್ನು ಭಾರತದಲ್ಲಿ ಏರ್ಪಡಿಸುವ ಕುರಿತು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ವಿವಿಧ ಕಾಫಿ ಬೆಳೆಗಾರರ ಸಂಘಟನೆಗಳು ಹಾಗೂ ವಾಣಿಜ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಈ ಹಿಂದೆ ಕಾಫಿ ಉತ್ಪಾದಿಸುವ ದೇಶಗಳಾದ ಬ್ರೆಜಿಲ್, ಜರ್ಮನಿ, ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಈ ಸಮ್ಮೇಳನ ಒಟ್ಟು ನಾಲ್ಕು ಬಾರಿ ನಡೆದಿದೆ. ಇದೀಗ ಭಾರತದಲ್ಲಿ 2020ನೇ ಇಸವಿಯಲ್ಲಿ ಭಾರತದಲ್ಲಿ ಐದನೇ ಸಮ್ಮೇಳನವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಇದಕ್ಕೆ ಬಹುತೇಕ ಒಪ್ಪಿಗೆಯಾಗಿದೆ. ಸಮ್ಮೇಳನ ಆಯೋಜನೆಯ ಕುರಿತಾಗಿ ಇದು ಪೂರ್ವಭಾವಿಯಾಗಿ ನಡೆದ ಪ್ರಥಮ ಸಭೆಯಾಗಿದ್ದು, ಈ ನಿಟ್ಟಿನಲ್ಲಿ ಇನ್ನಷ್ಟು ಸಭೆಗಳು ನಡೆಯಲಿವೆ. ಆದರೂ ಭಾರತದಲ್ಲಿ ಸಮ್ಮೇಳನ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲು ನಿರ್ಣಯ ಕೈಗೊಳ್ಳಲಾಗಿದೆ. 2020ರ ಸೆಪ್ಟೆಂಬರ್

(ಮೊದಲ ಪುಟದಿಂದ) ತಿಂಗಳಿನಲ್ಲಿ ಈ ಸಮ್ಮೇಳನ ಆಯೋಜಿಸುವ ಚಿಂತನೆ ನಡೆಸಲಾಗಿದ್ದು, ಬೆಂಗಳೂರಿನ ಪೀಣ್ಯದ ಕೈಗಾರಿಕಾ ಪ್ರದೇಶವನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಭಾರತ ಸರಕಾರದ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ರೀಟಾ ಟಿಯಾಟಿಯ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ಇಂಡಿಯನ್ ಕಾಫಿ ಟ್ರಸ್ಟ್ (ಐಸಿಟಿ) ಉಪಾಸಿ, ಸಂಘಟನೆಗಳು ಸೇರಿದಂತೆ, ನೆಸ್ಲೆ, ಟಾಟಾ, ಕೋಕ್ ಸೇರಿದಂತೆ ಇನ್ನಿತರ ಕಾಫಿ ಸಂಸ್ಥೆಗಳು ಪಾಲ್ಗೊಂಡಿದ್ದವು.

ದೇಶದಲ್ಲಿ ಕಾಫಿ ಉತ್ಪಾದಿಸುವ ಎಲ್ಲಾ ಪ್ರದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಇವರೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸ ಲಿದ್ದಾರೆ. ವಾಣಿಜ್ಯ ಸಚಿವಾಲಯ ಮಾತ್ರವಲ್ಲದೆ, ದೇಶದ ಕಾಫಿ ಮಂಡಳಿಯ ಸಹಕಾರ ದೊಂದಿಗೆ ಈ ಸಮ್ಮೇಳನ ಆಯೋಜನೆ ಗೊಳ್ಳಲಿದೆ. ಅಂತರರಾಷ್ಟ್ರೀಯ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯ ಉಸ್ತುವಾರಿಯನ್ನು ಕಾಫಿ ಮಂಡಳಿ ಯ ಮೂಲಕ ನಿರ್ವಹಿಸಲು ಚಿಂತನೆ ನಡೆಸಲಾಗಿದೆ. ಸಮ್ಮೇಳನದ ಸಂದರ್ಭ ಕಾಫಿಗೆ ಸಂಬಂಧಿಸಿದ ವಸ್ತು ಪ್ರದರ್ಶನ ಮಳಿಗೆಗಳು, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಈ ಸಮ್ಮೇಳನದ ಹೆಚ್ಚಿನ ಉಸ್ತುವಾರಿಯನ್ನು ಇಂಡಿಯನ್ ಕಾಫಿ ಟ್ರಸ್ಟ್ ವಹಿಸಲಿದ್ದು, ಈ ಪ್ರಾಯೋಜಕತ್ವಕ್ಕಾಗಿ 9 ರಿಂದ 10 ಕೋಟಿ ಹಣ ವ್ಯಯಿಸಲಿದೆ. ಉಳಿದ ಹಣವನ್ನು ಕಾಫಿ ಮಂಡಳಿ ಭರಿಸುವ ಕುರಿತು ಚರ್ಚೆ ನಡೆದಿರುವದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ದ ಅಧ್ಯಕ್ಷ ಬಿ.ಎಸ್. ಜೈರಾಮ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಸಮ್ಮೇಳನದ ಅಂಗವಾಗಿ ಅದಕ್ಕೂ ಮುನ್ನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ರೋಡ್ ಶೋ ಮೂಲಕ ಜನ ಜಾಗೃತಿ ಕಾಯ ್ಕ್ರಮಗಳನ್ನು ಏರ್ಪಡಿಸಲಾಗು ವದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಉಪಾಸಿ ಸಂಸ್ಥೆಯ ಅಧ್ಯಕ್ಷ ಕೊಡಗಿನ ಸುಂಟಿಕೊಪ್ಪದವರಾದ ನಾಗಪ್ಪ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಈ ಸಮ್ಮೇಳನ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ. ಸಮ್ಮೇಳನದಲ್ಲಿ ಒಂದು ಅವಧಿಯನ್ನು ಸಣ್ಣ ಬೆಳೆಗಾರರಿಗಾಗಿ ಮೀಸಲಿಡ ಲಾಗುವದು ಎಂದು ವಿವರ ವಿತ್ತರು. ಇದೀಗ ನಡೆದಿರುವದು ಒಂದು ಸುತ್ತಿನ ಮಾತುಕತೆ ಯಾಗಿದ್ದು, ಈ ನಿಟ್ಟಿನಲ್ಲಿ ಇನ್ನೂ ಹಲವು ಪೂರ್ವಭಾವಿ ಸಭೆಗಳು ಜರುಗಲಿವೆ.

ನವದೆಹಲಿಯ ವಾಣೀಜ್ಯ ಸಚಿವಾಲಯದಲ್ಲಿ ಇಲಾಖೆಯ ಕಾರ್ಯದರ್ಶಿ ರೀಟಾ ಟಿಯೊಟಿಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಅನಿತಾ ಕರಣ್, ಜಂಟಿ ಕಾರ್ಯದರ್ಶಿ ಸಂತೋಷ್ ಸಾರಂಗಿ, ಕಾಫಿ ಮಂಡಳಿಯ ಕಾರ್ಯದರ್ಶಿ ಶ್ರೀವತ್ಸಾ ಕೃಷ್ಣ, ಇಂಡಿಯಾ ಕಾಫಿ ಟ್ರಸ್ಟ್‍ನ ಅಧ್ಯಕ್ಷ ಅನಿಲ್ ಭಂಡಾರಿ, ಕಾಫಿ ಮಂಡಳಿಯ ಸಂಶೋಧನಾ ಮುಖ್ಯಸ್ಥರಾದ ಡಾ. ವೈ. ರಘು ರಾಮುಲು, ಕೆಜಿಎಫ್‍ನ ಅಧ್ಯಕ್ಷ ಬಿ.ಎಸ್. ಜೈರಾಮ್, ಉಪಾಧ್ಯಕ್ಷ ಡಾ. ಹೆಚ್. ಟಿ. ಮೋಹನ್ ಕುಮಾರ್, ಉಪಾಸಿ ಅಧ್ಯಕ್ಷ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಮೆನನ್ ಮತ್ತಿತರರು ಪಾಲ್ಗೊಂಡಿದ್ದರು.